ಮುಂಡರಗಿ: ಮಕ್ಕಳಲ್ಲಿನ ಅನೇಕ ವಿಚಾರ ಅಭಿವ್ಯಕ್ತಗೊಳಿಸಲು ಅವರು ಸೃಜನಶೀಲರಾಗಿ ಬೆಳೆಯಬೇಕು. ಹಾಗೇ ಬೆಳೆಯಬೇಕಾದರೆ ಹೃದಯದಲ್ಲಿ ಅಕ್ಷರದ ತೋರಣ ಕಟ್ಟುವ ಕಾರ್ಯ ನಡೆಯಬೇಕು ಎಂದು ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.
ಅವರು ಭಾನುವಾರ ಪುರಸಭಾ ವ್ಯಾಪ್ತಿಯ ರಾಮೇನಹಳ್ಳಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮೇನಹಳ್ಳಿ, ಕಲಾ ಶಿಕ್ಷಣ ಹಾಗೂ ಸಾಂಸ್ಕೃತಿ ಪ್ರತಿಷ್ಠಾನ ಮುಂಡರಗಿ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳಿಗಾಗಿ ಸಾಹಿತ್ಯ ಸಂವಹನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಎಲ್ಲ ಬುದ್ದಿವಂತರು ಸೃಜನಶೀಲರಲ್ಲ, ಆದರೆ ಎಲ್ಲ ಸೃಜನಶೀಲರು ಬುದ್ಧಿವಂತರಾಗಿರುತ್ತಾರೆ. ಈ ಮೂರು ದಿನಗಳ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಮಕ್ಕಳು ಕತೆ, ಕವಿತೆ, ನಾಟಕಗಳ ರಚನೆಯಂತಹ ಸಾಹಿತ್ಯದ ರಚನೆಯಲ್ಲಿ ತೊಡಗಿಕೊಳ್ಳುವ ಮೂಲಕ ಮಕ್ಕಳು ಪಠ್ಯದಾಚಗೂ ಖುಷಿಯಿಂದ ಇತರೆ ಸಾಹಿತ್ಯದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ಈ ಶಿಬಿರವು ಮಕ್ಕಳನ್ನು ಸೃಜನಶೀಲತೆಯತ್ತ ಕರೆದುಕೊಂಡು ಹೋಗುತ್ತದೆ.ಡಾ. ನಿಂಗು ಸೊಲಗಿ ಹಾಗೂ ತಾಲೂಕು ಕಸಾಪ ಘಟಕ ಒಳ್ಳೆಯ ಕಾರ್ಯಕ್ರಮ ಆಯೋಜಿಸಿದ್ದಾರೆ. ಮಕ್ಕಳು 3 ದಿನಗಳ ಈ ಶಿಬಿರ ಸದುಪಯೋಗಪಡೆಸಿಕೊಳ್ಳಬೇಕು ಎಂದರು.
ಅತಿಥಿಯಾಗಿದ್ದ ಸ್ಥಳೀಯ ಕ.ರಾ. ಬೆಲ್ಲದ ಕಾಲೇಜಿನ ಪ್ರಾ.ಡಾ. ಡಿ.ಸಿ. ಮಠ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಅತಿಯಾದ ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಅವರಲ್ಲಿ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ.ಹೀಗಾಗಿ ಮೊಬೈಲ್ ಬಳಕೆಯ ಬದಲು ಮಕ್ಕಳು ಹಿರಿ,ಕಿರಿಯ ಸಾಹಿತಿಗಳ,ಒಳ್ಳೆಯ ಕತೆ, ಕಾದಂಬರಿ ಸೇರಿದಂತೆ ವಿವಿಧ ಪುಸ್ತಕ, ಮಹಾನ್ ಸಾಧಕರ ಸಾಧನೆ ಓದಿ ತಿಳಿದುಕೊಳ್ಳಬೇಕು ಎಂದರು.ಕಲಾ ಸಾಹಿತ್ಯ ಹಾಗೂ ಸಾಂಸ್ಕೃತಿ ಪ್ರತಿಷ್ಠಾನದ ಸಂಚಾಲಕ ಚೇತನ್ ಸೊಲಗಿ ಮಾತನಾಡಿ, ನಾವು ಶಾಲೆಗಳಲ್ಲಿ ಕಲಿಯುವುದಕ್ಕಿಂತ ಇಂತಹ ಶಿಬಿರಗಳಲ್ಲಿ ಕಲಿಯುವುದೇ ಹೆಚ್ಚು.ಇಂತಹ ಶಿಬಿರ ನಮ್ಮಲ್ಲಿನ ಸೃಜನಶೀಲತೆ ಇಮ್ಮಡಿಗೊಳಿಸಲು ಸಹಕಾರಿಯಾಗಲಿದ್ದು, ಮಕ್ಕಳು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿನಾಯಕ ಕಮತದ ಅವರಿಂದ ಕವಿತೆ ಮಾತುಕತೆ ಮಕ್ಕಳೊಂದಿಗೆ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಮಹೇಶ ಬಾಗಳಿ, ಪ್ರೊ.ಆರ್.ಎಲ್. ಪೋಲಿಸಪಾಟೀಲ, ಶಾಲಾ ಮುಖ್ಯೋಪಾಧ್ಯಯ, ಸಾಹಿತಿ ಡಾ. ನಿಂಗು ಸೊಲಗಿ, ಡಿ.ಎಸ್. ಬಾಪೂರೆ, ಶಂಕರ ಕುಕನೂರ, ವೀಣಾ ಪಾಟೀಲ, ಮಂಜು ಮುಧೋಳ, ಸುರೇಶ ಭಾವಿಹಳ್ಳಿ, ಅಕ್ಕಮ್ಮ ಕೊಟ್ಟೂರಶೆಟ್ಟರ, ಶಿವಪುತ್ರಪ್ಪ ಇಟಗಿ, ಸಿ.ಕೆ. ಗಣಪ್ಪನವರ, ಆರ್.ವೈ. ಪಾಟೀಲ,ಮಧುಮತಿ ಇಳಕಲ್, ಲಿಂಗರಾಜ ದಾವಣಗೆರೆ, ಎಂ.ಆರ್. ಗುಗ್ಗರಿ, ಬಿ.ಎಚ್. ಹಲವಾಗಲಿ, ಪಿ.ಆರ್. ಗಡಾದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಶಿಕ್ಷಕರು ಹಾಗೂ ಇತರರು ಪೂಜೆ ಸಲ್ಲಿಸಿ ಗೌರವಿಸಿದರು. ನಾಗೇಶ ಹುಬ್ಬಳ್ಳಿ ಸ್ವಾಗತಿಸಿದರು. ಪಿ.ಎಂ. ಲಾಂಡೆ ನಿರೂಪಿಸಿದರು. ಎಸ್.ಬಿ. ಹಿರೇಮಠ ವಂದಿಸಿದರು.