ಬಳ್ಳಾರಿ: ಎಚ್‌ಐವಿ ಸೋಂಕು ಕುರಿತು ಯುವಪೀಳಿಗೆ ಜಾಗ್ರತರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ. ರಮೇಶಬಾಬು ಹೇಳಿದರು.
ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಬಳ್ಳಾರಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಂಯುಕ್ತಾಶ್ರಯದಲ್ಲಿ ಎಚ್‌ಐವಿ ಜಾಗೃತಿ ಮಾಸಾಚರಣೆ ಅಂಗವಾಗಿ ನಗರದ ಶ್ರೀ ಮೇಧಾ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ನಶಾಮುಕ್ತ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಎಚ್‌ಐವಿ ಸೋಂಕು, ಅದರ ಕಳಂಕ, ತಾರತಮ್ಯ ಮತ್ತು ಅದರಿಂದ ಉಂಟಾಗುವ ಮರಣಗಳನ್ನು ಸೊನ್ನೆಗೆ ತರಲು ಎಲ್ಲರೂ ಶ್ರಮಿಸಬೇಕಿದೆ. ಇದಕ್ಕಾಗಿ ಜಿಲ್ಲೆಯ ವಿವಿಧ ತಾಲೂಕುಗಳ ಪ್ರಮುಖ ಸ್ಥಳಗಳಲ್ಲಿ ನೃತ್ಯದ ಮೂಲಕ ಜನರನ್ನು ಆಕರ್ಷಿಸಿ, ಎಚ್‌ಐವಿ ಬಗೆಗಿನ ಜಾಗೃತಿ ಮೂಡಿಸಲಾಗುತ್ತಿದೆ. ಕಾಲೇಜುಗಳಲ್ಲಿ ಸಹ ಅರಿವು ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಏಡ್ಸ್ ನಿರ್ಮೂಲನಾಧಿಕಾರಿ ಡಾ. ಇಂದ್ರಾಣಿ ಮಾತನಾಡಿ, ಎಚ್‌ಐವಿಯು ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ಅತ್ಯಂತ ಗಂಭೀರ ರೂಪದಲ್ಲಿ ಅತೀ ವೇಗವಾಗಿ ಹರಡುವ ಸಾಧ್ಯತೆ ಇದೆ. ಯುವ ಜನತೆಯು ತಮ್ಮನ್ನು ತಾವು ನಿಗ್ರಹಿಸಿಕೊಳ್ಳುವ ಮೂಲಕ ತಮ್ಮೊಂದಿಗೆ ಇತರರನ್ನು ಎಚ್‌ಐವಿ ಸೋಂಕು ಮುಕ್ತರನ್ನಾಗಿಸಲು ಜಾಗೃತಿ ಕಾರ್ಯಕ್ರಮ, ಆಧುನಿಕ ಮಾಧ್ಯಮಗಳಲ್ಲಿ ಮತ್ತು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಇದರ ಅರಿವು ಹೊಂದಬೇಕು ಎಂದರು.ಇದೇ ವೇಳೆ ನಶೆಮುಕ್ತ ದಿನದ ಅಂಗವಾಗಿ ಪ್ರತಿಜ್ಞೆ ಸ್ವೀಕರಿಸಲಾಯಿತು. ಬಳಿಕ ಎಚ್‌ಐವಿ ಕುರಿತು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ವೀರೇಂದ್ರ ಕುಮಾರ್, ಮಾನಸಿಕ ತಜ್ಞ ಡಾ. ರೋಹನ್ ವನಗುಂದಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಜಿಲ್ಲಾ ಡ್ಯಾಪ್ಕೋ ಮೇಲ್ವಿಚಾರಕರಾದ ಗಿರೀಶ್, ಹೊನ್ನೂರಪ್ಪ, ಜಗದೀಶ್, ಜಯರಾಮ್ ಹಾಗೂ ನಿತ್ಯ ಜೀವನ, ಸೌಖ್ಯ ಬೆಳಕು, ವಿಮುಕ್ತಿ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.