ಹಾವೇರಿ: ದೇಶದ ಸ್ವ್ವಾತಂತ್ರ್ಯ ಚಳವಳಿಗಳಲ್ಲಿ ನಮ್ಮ ಹೋರಾಟಗಾರರು ಹೇಗೆ ಯಶಸ್ಸು ಕಂಡರೋ ಅದನ್ನು ಸ್ಫೂರ್ತಿಯಾಗಿ ಪಡೆದು ಈಗಿನ ಯುವಜನರು ಮತ್ತು ಈ ನಾಡ ಪ್ರೇಮಿಗಳು ಪ್ರಾಮಾಣಿಕ ರಾಜಕಾರಣ ಬೆಂಬಲಿಸಬೇಕು. ಪಾರದರ್ಶಕ ಆಡಳಿತ ವ್ಯವಸ್ಥೆ ಕಟ್ಟಬೇಕು ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಹೇಳಿದರು.
ನಗರದ ಮೈಲಾರ ಮಹದೇವಪ್ಪ ಸ್ಮಾರಕದ ಬಳಿ ಗುರುವಾರ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಹೋರಾಟದ ಸ್ಮರಣಾರ್ಥ ಕೆಆರ್‌ಎಸ್ ಪಕ್ಷದಿಂದ ಏರ್ಪಡಿಸಿದ್ದ ಭ್ರಷ್ಟರನ್ನು ರಾಜಕೀಯದಿಂದ ತೊಲಗಿಸಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.ಕೆಆರ್‌ಎಸ್ ಪಕ್ಷದ ಸಿದ್ಧಾಂತಗಳು, ನನ್ನ ವೈಯಕ್ತಿಕ ಸಿದ್ಧಾಂತಗಳು ಒಂದೇ ಆಗಿರುವುದರಿಂದ ಈ ಪಕ್ಷಕ್ಕೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ. ಈ ಬಾರಿ ನಡೆಯುವ ಶಿಗ್ಗಾಂವಿ-ಸವಣೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ರವಿ ಕೃಷ್ಣಾ ರೆಡ್ಡಿ ಅವರನ್ನು ಗೆಲ್ಲಿಸಲೇಬೇಕೆಂದು ಹೇಳಿದರು.
ಈ ಜಾಥಾ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಸುಮಾರು ೬೦ ಹಳ್ಳಿ-ಪಟ್ಟಣಗಳಲ್ಲಿ ೨೦೦ ಕಿಲೋ ಮೀಟರ್‌ಗೂ ಹೆಚ್ಚು ಸಂಚರಿಸಲಿದೆ. ಜನರಿಗೆ ಸ್ವಾತಂತ್ರ್ಯ ಹೋರಾಟದ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸುವ ಜೊತೆಗೆ, ಇಂದಿನ ಭ್ರಷ್ಟ ಮತ್ತು ಜನವಿರೋಧಿ ರಾಜಕಾರಣ ನಮ್ಮ ಪೂರ್ವಿಕರ ತ್ಯಾಗ, ಬಲಿದಾನಗಳನ್ನು ಹೇಗೆ ವ್ಯರ್ಥ ಮಾಡುತ್ತಿದೆ ಮತ್ತು ಅವಮಾನಿಸುತ್ತಿದೆ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಲಿದೆ ಎಂದರು.
ಈ ವೇಳೆ ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಎಚ್. ಲಿಂಗೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್., ರಘುಪತಿ ಭಟ್, ಜ್ಞಾನ ಸಿಂಧು ಸ್ವಾಮಿ, ರಘು ಜಾಣಗೆರೆ, ಸೋಮಸುಂದರ್, ಎಲ್. ಜೀವನ್, ಕೃಷ್ಣ ವಿ.ಬಿ., ನರಸಿಂಹ ಮೂರ್ತಿ, ಮಲ್ಲಿಕಾರ್ಜುನ್ ಬಟ್ಟರಹಳ್ಳಿ, ಬಿ.ಜಿ. ಕುಂಬಾರ್, ರಮೇಶ್ ಗೌಡ ಸೇರಿದಂತೆ ಕೆಆರ್‌ಎಸ್ ಪಕ್ಷದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು, ಸೈನಿಕರು ಹಾಗೂ ಬೆಂಬಲಿಗರು ಪಾಲ್ಗೊಂಡಿದ್ದರು.