ಜಿಲ್ಲೆಗೆ ಕೊಡುಗೆಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ: ಕಾಂಗ್ರೆಸ್ ಸವಾಲು

KannadaprabhaNewsNetwork | Published : Jan 31, 2024 2:16 AM

ಸಾರಾಂಶ

ಕಳೆದ ನಾಲ್ಕು ವರ್ಷಗಳಿಂದ ಕೊಡಗು ಜಿಲ್ಲೆಯ ಕಡೆ ತಿರುಗಿ ಸಹ ನೋಡದ ಸಂಸದ ಪ್ರತಾಪ್ ಸಿಂಹ, ಇದೀಗ ಚುನಾವಣೆಯ ಹತ್ತಿರವಾಗುತ್ತಿದ್ದಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಸುಳ್ಳು ಆರೋಪಗಳನ್ನ ಮಾಡಿ ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿರುವ ಸಂಸದರ ವಿರುದ್ಧ ಪಕ್ಷದವರೇ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಸಂಸದ ಪ್ರತಾಪ್ ಸಿಂಹ ಧೈರ್ಯವಿದ್ದರೆ ಅವರು ಕೊಡಗು ಜಿಲ್ಲೆಗೆ ನೀಡಿರುವ ಕೊಡುಗೆಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ, ತಾವು ಸಂಸದರಾಗಿ ಆಯ್ಕೆಯಾದ ಆರಂಭದ 7 ತಿಂಗಳಿನಲ್ಲಿ ಕನಿಷ್ಠ 70 ಪೈಸೆಯನ್ನು ಕೇಂದ್ರ ಸರ್ಕಾರದಿಂದ ಕೊಡಗು ಜಿಲ್ಲೆಗೆ ತಂದಿದ್ದರೆ ಶ್ವೇತಪತ್ರ ಹೊರಡಿಸಲಿ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸವಾಲು ಹಾಕಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಕೊಡಗು ಜಿಲ್ಲೆಯ ಕಡೆತಿರುಗಿ ಸಹ ನೋಡದ ಸಂಸದ ಪ್ರತಾಪ್ ಸಿಂಹ, ಇದೀಗ ಚುನಾವಣೆಯ ಹತ್ತಿರವಾಗುತ್ತಿದ್ದಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಸುಳ್ಳು ಆರೋಪಗಳನ್ನ ಮಾಡಿ ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿರುವ ಸಂಸದರ ವಿರುದ್ಧ ಪಕ್ಷದವರೇ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಮೋದಿ ನಾಮಬಲದಿಂದ ಮಾತ್ರ ಗೆಲುವು ಸಾಧಿಸುತ್ತಿರುವ ಸಂಸದ ಪ್ರತಾಪ್ ಸಿಂಹ ತಮ್ಮ ವರ್ಚಸ್ಸು ಕಳೆದುಕೊಂಡಿದ್ದು,ಈ ಬಾರಿಯೂ ಅವರ ಹೆಸರು ಹೇಳಿಕೊಂಡು ಚುನಾವಣೆ ಎದುರಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು ಭಾಗದಲ್ಲಿ ಹೆದ್ದಾರಿ ನಿರ್ಮಾಣದ ವಿಚಾರದಲ್ಲಿ ಸಂಸದರು ನಡೆದುಕೊಂಡ ರೀತಿಯ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳು ಹಾಗೂ ಜನರಲ್ಲೇ ವಿರೋಧವಿದೆ. ಪ್ರತಾಪ್ ಸಿಂಹ ಅವರು ತಮ್ಮ ಪಕ್ಷದ ಸಿದ್ಧಾಂತದ ಆಧಾರದಲ್ಲಿ ಚುನಾವಣೆ ಎದುರಿಸಬೇಕೇ ಹೊರತು ನಮ್ಮ ಮುಖ್ಯಮಂತ್ರಿಗಳು, ಮಂತ್ರಿಗಳು ಹಾಗೂ ಶಾಸಕರ ಹೆಸರು ಹೇಳುವ ಅಗತ್ಯವಿಲ್ಲ. ಹಿಂದೆ ತಮ್ಮದೇ ಶಾಸಕರೊಂದಿಗೆ ಮುನಿಸಿಕೊಂಡಿದ್ದ ಅವರು ಇದೀಗ ಕೆ.ಜಿ.ಬೋಪಯ್ಯ ಅವರೊಂದಿಗೆ ಸೇರಿಕೊಂಡು ಮತಗಳಿಕೆಯ ತಂತ್ರ ಅನುಸರಿಸುತ್ತಿದ್ದಾರೆ ಎಂದು ಉತ್ತಪ್ಪ ವ್ಯಂಗ್ಯವಾಡಿದರು.ಏಳು ತಿಂಗಳ ಅವಧಿಯಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು, ವಿರಾಜಪೇಟೆಗೆ ಕುಡಿಯುವ ನೀರು ಪೂರೈಕೆ ಯೋಜನೆಗೆ 52 ಕೋಟಿ, ಪಾದಚಾರಿ ರಸ್ತೆ ನಿರ್ಮಾಣಕ್ಕೆ 5.84 ಕೋಟಿ ಸೇರಿದಂತೆ ಒಟ್ಟು 150 ಕೋಟಿ ರೂ.ಗಳ ಅನುದಾನ ತಂದಿದ್ದಾರೆ. ರೈಲು ತರದಿದ್ದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದ ಸಂಸದ ಪ್ರತಾಪ್ ಸಿಂಹ, ಪ್ರಕೃತಿ ವಿಕೋಪದಲ್ಲಿ ನೊಂದವರಿಗೆ ಏನು ತಂದಿದ್ದಾರೆ ಎಂದು ಪ್ರಶ್ನಿಸಿದ ಉತ್ತಪ್ಪ ಜಿಲ್ಲೆಗೆ ಪ್ರತಾಪಸಿಂಹ ಕೊಡುಗೆ ಶೂನ್ಯವೆಂದು ಅವರ ಪಕ್ಷದವರೇ ಹೇಳುತ್ತಾರೆಎಂದರು.ಸಾಮಾನ್ಯ ಯೋಜನೆಯಂತೆ ದೇಶವ್ಯಾಪಿ ಮೊಬೈಲ್ ಟವರ್ ಗಳನ್ನು ಅಳವಡಿಸಲಾಗಿದೆ. ಅದೇ ಮಾದರಿಯಲ್ಲಿ ಕೊಡಗಿನಲ್ಲೂ ಇತ್ತೀಚೆಗಷ್ಟೆ ಟವರ್ ಗಳು ತಲೆ ಎತ್ತಿವೆ. ಕೇವಲ ಟವರ್ ಗಳ ನಿರ್ಮಾಣ ಅಭಿವೃದ್ಧಿಯಲ್ಲ ಎಂದ ಉತ್ತಪ್ಪ, ಸಂಸದರಾಗಿ ಪ್ರತಾಪ್ ಸಿಂಹ ಅವರು ಕೊಡಗು ಜಿಲ್ಲೆಗೆ ತಂದಿರುವ ಪ್ರತ್ಯೇಕವಾದ ವಿಶೇಷ ಯೋಜನೆ ಏನು ಎಂಬುವುದನ್ನು ಮೊದಲು ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಮಾಧ್ಯಮ ವಕ್ತಾರ ಟಿ.ಪಿ.ರಮೇಶ್ ಹಾಗೂ ವಕ್ತಾರ ತೆನ್ನಿರ ಮೈನಾ, ಕೆ.ಎಂ. ಲೋಕೇಶ್, ಟಾಟು ಮೊಣ್ಣಪ್ಪ ಇದ್ದರು.

Share this article