ಬೇಸಿಗೆಯಲ್ಲಿ ಕುಡಿಯುವ ನೀರು, ಮೇವಿನ ಕೊರತೆ ಆಗದಿರಲಿ

KannadaprabhaNewsNetwork | Published : Nov 24, 2023 1:30 AM

ಸಾರಾಂಶ

ನರೇಗಾ ಅಡಿಯಲ್ಲಿ ತಾಪಂ ಇ.ಒ.ಗಳು ಕಾರ್ಮಿಕರಿಗೆ ಕೆಲಸಗಳನ್ನು ನೀಡಬೇಕು. ಸಾಗರ ಮತ್ತು ಸೊರಬದಲ್ಲಿ ಬೇಡಿಕೆ ಹೆಚ್ಚಿದೆ. ಗುರುತಿಸಿ ಕೆಲಸಗಳನ್ನು ನೀಡಬೇಕು. ಮಳೆ ಬಂದು ಬಿದ್ದಿರುವ, ಹಾನಿಗೊಳಗಾದ ಮನೆಗಳ ಜಿಪಿಎಸ್ ಬಾಕಿ ಇರುವುದನ್ನು ಪಿಡಿಒಗಳು ಪರಿಶೀಲಿಸಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು. ಎಲ್ಲ ತಹಸೀಲ್ದಾರ್, ಇ.ಒ.ಗಳು, ಪಿ.ಡಿ.ಒ.ಗಳ ಜೊತೆಗೂಡಿ ಪ್ರತಿ 15 ದಿನಗಳಿಗೆ ಒಮ್ಮೆ ಬರ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು. ಜಾನುವಾರು ಮೇವಿಗೆ ಕೊರತೆ ಆಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಂಬರುವ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಒದಗಿಸಲು ಅಧಿಕಾರಿಗಳು ಅಗತ್ಯ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ತಾಕೀತು ಮಾಡಿದರು.

ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಬರ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿ, ಬರ ನಿರ್ವಹಣೆ ಸಂಬಂಧ ನವೆಂಬರ್ ಅಂತ್ಯದೊಳಗೆ ತಾಲೂಕು ಟಾಸ್ಕ್‌ಫೋರ್ಸ್ ಸಭೆ ನಡೆಸುವಂತೆ ತಹಸೀಲ್ದಾರರಿಗೆ ಸೂಚಿಸಿದ ಅವರು, ಜಾನುವಾರುಗಳ ಮೇವಿನ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಗ್ರಾ.ಪಂ.ವಾರು ರೈತರ ಜಮೀನುಗಳನ್ನು ಗುರುತಿಸಿ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಆಧಾರ್ ಲಿಂಕ್ ಮಾಡಬೇಕು. ತೋಟಗಾರಿಕೆ, ಕೃಷಿ, ನರೇಗಾ ಯೋಜನೆಗಳಿಗೆ ಸಂಬಂಧಿಸಿದಂತೆ ಫ್ರೂಟ್ಸ್ ತಂತ್ರಾಂಶದಲ್ಲಿ ಆಧಾರ್ ಲಿಂಕ್ ಮಾಡಬೇಕು. ಈಗಾಗಲೇ ತಂತ್ರಾಂಶದಲ್ಲಿ ಜಮೀನನ್ನು ಗುರುತಿಸಿ ಲಿಂಕ್ ಮಾಡಲಾಗುತ್ತಿದ್ದು, ಇನ್ನೊಂದು ತಿಂಗಳ ಒಳಗೆ ತೋಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆ ವತಿಯಿಂದ ಈ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ನರೇಗಾ ಅಡಿಯಲ್ಲಿ ತಾಪಂ ಇ.ಒ.ಗಳು ಕಾರ್ಮಿಕರಿಗೆ ಕೆಲಸಗಳನ್ನು ನೀಡಬೇಕು. ಸಾಗರ ಮತ್ತು ಸೊರಬದಲ್ಲಿ ಬೇಡಿಕೆ ಹೆಚ್ಚಿದೆ. ಗುರುತಿಸಿ ಕೆಲಸಗಳನ್ನು ನೀಡಬೇಕು. ಮಳೆ ಬಂದು ಬಿದ್ದಿರುವ, ಹಾನಿಗೊಳಗಾದ ಮನೆಗಳ ಜಿಪಿಎಸ್ ಬಾಕಿ ಇರುವುದನ್ನು ಪಿಡಿಒಗಳು ಪರಿಶೀಲಿಸಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಎಲ್ಲ ತಹಸೀಲ್ದಾರ್, ಇ.ಒ.ಗಳು, ಪಿ.ಡಿ.ಒ.ಗಳ ಜೊತೆಗೂಡಿ ಪ್ರತಿ 15 ದಿನಗಳಿಗೆ ಒಮ್ಮೆ ಬರ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು. ಜಾನುವಾರು ಮೇವಿಗೆ ಕೊರತೆ ಆಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ಮಾತನಾಡಿ, ಮುಂದಿನ 23 ವಾರಗಳಿಗೆ ಜಾನುವಾರುಗಳ ಮೇವಿಗೆ ಕೊರತೆ ಇಲ್ಲ. ಶಿಕಾರಿಪುರ ಸೊರಬದಲ್ಲಿ 16 ವಾರಗಳಿಗೆ ಸಾಕಾಗುವಷ್ಟು ಮೇವಿದೆ. 29 ಸಾವಿರ ಮೇವಿನ ಕಿಟ್‍ಗಳನ್ನು ತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಉಪವಿಭಾಗಾಧಿಕಾರಿಗಳಾದ ಸತ್ಯನಾಯರಾಯಣ್, ಪಲ್ಲವಿ ಸಾತೇನಹಳ್ಳಿ, ಡಿಯುಡಿಸಿ ಪಿಡಿ ಮನೋಹರ್, ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ, ತಹಸೀಲ್ದಾರರು, ತಾ.ಪಂ. ಇ.ಒ.ಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

- - -

-21ಎಸ್‌ಎಂಜಿಕೆಪಿ06:

ಶಿವಮೊಗ್ಗ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬರ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮಾತನಾಡಿದರು.

Share this article