ಶಿಕ್ಷಣದಲ್ಲಿ ತಂತ್ರಜ್ಞಾನ ಆಧಾರಿತ ಬೋಧನೆ ಇರಲಿ: ಡಾ. ಶಿವಪ್ರಸಾದ

KannadaprabhaNewsNetwork | Published : Dec 25, 2024 12:45 AM

ಸಾರಾಂಶ

ಸಾಂಪ್ರದಾಯಿಕ ಬೋಧನಾ ಪದ್ಧತಿ ಬಿಟ್ಟು ತಂತ್ರಜ್ಞಾನ ಆಧಾರಿತ ಬೋಧನಾ ಪದ್ಧತಿ ರೂಢಿಸಿಕೊಂಡಾಗ ಮಾತ್ರ ಕಲಿಕೆ ಪರಿಣಾಮಕಾರಿಯಾಗಲಿದೆ. ಪಠ್ಯಕ್ರಮ ರಚನೆಯಲ್ಲಿ ಬದಲಾವಣೆ ಬರಬೇಕಿದೆ. ಇದಲ್ಲದೇ, ಶಿಕ್ಷಕರು ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದಬೇಕು. ಅಂದಾಗ ಮಾತ್ರವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಮಾನವ ಸಂಪನ್ಮೂಲ ನಿರ್ಮಿಸಲು ಸಾಧ್ಯವಾಗಲಿದೆ.

ಧಾರವಾಡ:

ಭವಿಷ್ಯದ ಉದ್ಯೋಗದ ಬೇಡಿಕೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಕೌಶಲ್ಯಾಧಾರಿತ ಬೋಧನೆ ಮಾಡಬೇಕು ಎಂದು ಧಾರವಾಡ ಐಐಟಿ ಡೀನ್‌ ಡಾ. ಎಸ್‌.ಎಂ. ಶಿವಪ್ರಸಾದ ಹೇಳಿದರು.

ನಗರದ ಅಂಜುಮನ್ ಸಂಸ್ಥೆಯಲ್ಲಿ ಹಮ್ಮಿಕೊಂಡ “ಎಂಪ್ಲಾಯ್‌ಮೆಂಟ್ ಎಂಪ್ಲಾಯ್ಬಿಲಿಟಿ ಆ್ಯಂಡ್ ಹೈಯರ್ ಎಜ್ಯುಕೇಶನ್ ಇನ್ ಇಂಡಿಯಾ-ದಿ ಮಿಸ್ಸಿಂಗ್ ಲಿಂಕ್” ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಪ್ರಸ್ತುತ ವಿಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಕೃಷಿ.. ಹೀಗೆ ಸರ್ವ ರಂಗವು ತಂತ್ರಜ್ಞಾನ ಅಳವಡಿಸಿಕೊಂಡಿದೆ. ಹೀಗಾಗಿ ಶಿಕ್ಷಣದಲ್ಲಿಯೂ ಕೂಡ ತಂತ್ರಜ್ಞಾನ ಅಳವಡಿಸಿಕೊಂಡರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲಿದೆ ಎಂದರು.

ಸಾಂಪ್ರದಾಯಿಕ ಬೋಧನಾ ಪದ್ಧತಿ ಬಿಟ್ಟು ತಂತ್ರಜ್ಞಾನ ಆಧಾರಿತ ಬೋಧನಾ ಪದ್ಧತಿ ರೂಢಿಸಿಕೊಂಡಾಗ ಮಾತ್ರ ಕಲಿಕೆ ಪರಿಣಾಮಕಾರಿಯಾಗಲಿದೆ. ಪಠ್ಯಕ್ರಮ ರಚನೆಯಲ್ಲಿ ಬದಲಾವಣೆ ಬರಬೇಕಿದೆ. ಇದಲ್ಲದೇ, ಶಿಕ್ಷಕರು ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದಬೇಕು. ಅಂದಾಗ ಮಾತ್ರವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಮಾನವ ಸಂಪನ್ಮೂಲ ನಿರ್ಮಿಸಲು ಸಾಧ್ಯವಾಗಲಿದೆ ಎಂದರು.

ವಿಚಾರ ಸಂಕಿರಣ ಉದ್ಘಾಟಿಸಿದ ಕೃಷಿ ವಿಜ್ಞಾನ ವಿವಿ ಶಿಕ್ಷಣ ನಿರ್ದೇಶಕ ಡಾ. ವಿ.ಆರ್. ಕಿರೇಸೂರ, ಭಾರತದ ಉನ್ನತ ಶಿಕ್ಷಣವು ಗುರುಕುಲದಿಂದ ಆರಂಭವಾಗಿ ಆಧುನಿಕ ವಿವಿ ವರೆಗೆ ಪರಿಣಾಮಕಾರಿಯಾಗಿ ಬೆಳೆದುಕೊಂಡು ಬಂದಿದೆ. ಪ್ರಸ್ತುತ 1,043 ವಿವಿ, 42,343 ಕಾಲೇಜು, 11,779 ಸ್ವತಂತ್ರ ಸಂಸ್ಥೆ, 37.4 ಮಿಲಿಯನ್ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವು ಸೇವೆ ಸಲ್ಲಿಸುತ್ತಾ ಬೃಹತ್ ಪ್ರಮಾಣದ ಬದಲಾವಣೆ ತಂದಿದೆ ಎಂದು ಹೇಳಿದರು.

ಇಂದು ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಕೃಷಿ ಕಾಯಕಕ್ಕೆ ಡ್ರೋನ್ ಮತ್ತು ರೋಬೋಟಿಕ್ ಬಳಕೆಯು ಹೆಚ್ಚಿಸಿದೆ. ಕೃಷಿಯಲ್ಲಿ ತಂತ್ರಜ್ಞಾನದ ಅಳವಡಿಕೆಯಿಂದ ರೈತರಿಗೆ ಲಾಭ ತರುವುದಾಗಿ ತಿಳಿಸಿದರು.

ವಿಚಾರ ಸಂಕಿರಣದಲ್ಲಿ ದೇಶದ ವಿವಿಧ ಭಾಗಗಳಿಂದ 1200ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದು, 82 ಸಂಶೋಧನಾ ಲೇಖನ ಮಂಡಿಸಿದರು. ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಉಪಾಧ್ಯಕ್ಷ ಬಶೀರ್ ಅಹ್ಮದ್ ಜಹಗೀರದಾರ್, ಪ್ರಾಚಾರ್ಯ ಡಾ. ಎನ್.ಎಂ. ಮಕಾಂದಾರ, ಡಾ. ಎ.ಎಸ್. ಬಳ್ಳಾರಿ, ಡಾ. ಐ.ಎ. ಮುಲ್ಲಾ, ಡಾ. ಎನ್.ಬಿ. ನಾಲತವಾಡ, ಡಾ. ಮೇಟಿ ರುದ್ರೇಶ ಇದ್ದರು.

Share this article