ಬಳ್ಳಾರಿ: ಇತಿಹಾಸ ಮತ್ತು ವಸ್ತು ಸಂಗ್ರಹಾಲಯಗಳು ಅವಿನಾಭಾವ ಸಂಬಂಧ ಹೊಂದಿವೆ. ವಸ್ತು ಸಂಗ್ರಹಾಲಯಗಳು ಮಾನವನು ತಾನು ಪ್ರಾಚೀನತೆಯಿಂದ ಆಧುನಿಕತೆಯೆಡೆಗೆ ಸಾಗಿ ಬಂದ ಪುರಾವೆ ತಿಳಿಸುತ್ತವೆ. ಹಾಗಾಗಿ ಇಂದಿನ ಪೀಳಿಗೆ ಇತಿಹಾಸದ ಮಹತ್ವ ಅರಿಯಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಹೇಳಿದರು.
ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿನ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ಅಭಿವೃದ್ಧಿಗೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿಕ್ಷಣ ತಜ್ಞರು ಹಾಗೂ ವಿಮರ್ಶಕರಾದ ಗಣೇಶ್ ಎನ್.ದೇವಿ ಅವರು ಮಾತನಾಡಿ, ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಹಲವಾರು ಪುರಾತನ ಪಳೆಯುಳಿಕೆಗಳನ್ನು ಸಂಗ್ರಹಿಸಲಾಗಿದ್ದು, ಆಕರ್ಷಣೀಯ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.ವೈಜ್ಞಾನಿಕತೆಯಿಂದ ನಾವೆಲ್ಲರೂ ಹಿಂದಿನ ಹಾದಿ ಸ್ಮರಿಸಬೇಕು. ತಂತ್ರಜ್ಞಾನ ಬದಲಾದರೂ ಪುರಾತನ ಸಂಸ್ಕøತಿಯ ಜ್ಞಾನ ಬದಲಾಗುವುದಿಲ್ಲ, ಈ ಭಾಗದಿಂದ ಯುವ ಸಂಶೋಧನಾಕಾರರು ರಾಜ್ಯವ್ಯಾಪಿಯಲ್ಲಿ ಹೊರಹೊಮ್ಮಬೇಕು. ಈಗಿನ ಸಂದರ್ಭದಲ್ಲಿ ವಸ್ತುಸಂಗ್ರಹಾಲಗಳ ಅಭಿವೃದ್ಧಿಗೆ ಕಾಯಕಲ್ಪ ಬೇಕಿದೆ ಎಂದು ಅಭಿಪ್ರಾಯಪಟ್ಟರು.
ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ಗೌರವ ನಿರ್ದೇಶಕ ಪ್ರೊ.ರವಿ ಕೋರಿ ಶೆಟ್ಟರ್ ಮಾತನಾಡಿ, ಇತಿಹಾಸದ ಹೆಜ್ಜೆ ಗುರುತುಗಳನ್ನು ಹಿಡಿದಿಟ್ಟುಕೊಳ್ಳುವುದು ವಸ್ತು ಸಂಗ್ರಹಾಲಯಗಳ ಕೆಲಸವಾಗಿದೆ. ಅದರಲ್ಲಿ ವೈದ್ಯಕೀಯ ಕ್ಷೇತ್ರವು ತನ್ನದೇ ಆದ ಸಹಭಾಗಿತ್ವನ್ನು ಹೊಂದಿದೆ. ವಾಸ್ತವವಾಗಿ ಪ್ರಾಚೀನ ಶಿಲಾಯುಗ ಮತ್ತು ನವಶಿಲಾಯುಗಗಳಿಗೆ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತುಸಂಗ್ರಹಾಲಯವು ಶಿಲಾಯುಗದ ಉಪಕರಣಗಳ ವಿಶಿಷ್ಟವಾದ ಇತಿಹಾಸ ಪೂರ್ವ ಮಾಹಿತಿ ಒಳಗೊಂಡಿದೆ. ಶಿಲಾಯುಗದ ಮೇಲೆ ಕೇಂದ್ರೀಕೃತವಾಗಿರುವ ಏಕೈಕ ವಸ್ತು ಸಂಗ್ರಹಾಲಯ, ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯವು ಇದಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮ ಆರಂಭಕ್ಕೂ ಮುನ್ನ ಎಲ್ಲಾ ಗಣ್ಯರು ದಿ.ಪ್ರೊ.ಪಿ.ಸತ್ಯನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ವಸ್ತು ಸಂಗ್ರಹಾಲಯದ ಸದಸ್ಯ ಸಂತೋಷ್ ಮಾರ್ಟಿನ್, ತಾಂತ್ರಿಕ ಸಹಾಯಕಿ ಗೌರಿ, ಬಳ್ಳಾರಿ ಹೆರಿಟೇಜ್ ಫೌಂಡೇಶನ್‍ನ ಟ್ರಸ್ಟಿ ಟಿ.ಜಿ. ವಿಠ್ಠಲ್ ಸೇರಿದಂತೆ ಇನ್ನಿತರ ಗಣ್ಯರು ಮತ್ತು ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.