ಕನ್ನಡಪ್ರಭ ವಾರ್ತೆ ಧಾರವಾಡ
ಮಹಾಯೋಗಿ ವೇಮನ ವಚನಗಳ ಬಗ್ಗೆ ಸಂಶೋಧನೆ, ವಿಮರ್ಶೆ ಹೆಚ್ಚು ನಡೆಯಬೇಕು. ಜನಸಾಮಾನ್ಯರಿಗೂ ವೇಮನ ಸಾಹಿತ್ಯ ತಲುಪಿಸುವ ಕೆಲಸವನ್ನು ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ವೇಮನ ಪೀಠ ಮಾಡಲಿ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಸಲಹೆ ನೀಡಿದರು.ಕರ್ನಾಟಕ ವಿಶ್ವವಿದ್ಯಾಲಯದ ವೇಮನ ಪೀಠದಲ್ಲಿ ಶುಕ್ರವಾರ ನಡೆದ ಮಹಾಯೋಗಿ ವೇಮನ ಜಯಂತಿಯಲ್ಲಿ ಮಾತನಾಡಿದರು. ಆಂಧ್ರಪ್ರದೇಶ ಸರ್ಕಾರದ ₹1.92 ಲಕ್ಷ, ವೇಮನ ವಿದ್ಯಾವರ್ಧಕ ಸಂಘದ ₹15 ಲಕ್ಷ ಹಾಗೂ ಗೆಳೆಯರ ಬಳಗದ ₹1 ಲಕ್ಷ ಆರ್ಥಿಕ ಸಹಾಯದಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 1985ರಲ್ಲಿ ವೇಮನ ಪೀಠ ಸ್ಥಾಪಿಸಿದ್ದು, ಇಡೀ ರಾಜ್ಯಕ್ಕೆ ಮಾದರಿಯಾಗಿ ಕೆಲಸ ಮಾಡುವ ನಿರೀಕ್ಷೆ ಹೊಂದಲಾಗಿದೆ ಎಂದರು.
ವೇಮನ ಪೀಠ ಸದ್ಯ ಉತ್ತಮ ಕಾರ್ಯ ಮಾಡುತ್ತಿದ್ದು, ಇನ್ನೂ ದೊಡ್ಡ ಕಾರ್ಯಗಳಾಗಬೇಕಿದೆ. ಎಸ್.ಆರ್. ಪಾಟೀಲರು ನೀಡಿರುವ ವೇಮನ ನಾಲ್ಕು ಸಾವಿರ ವಚನಗಳ ಬಗ್ಗೆ ಸಂಶೋಧನೆಗಳು ನಡೆಯಬೇಕಿದೆ ಎಂದರು.ವೇಮನರ ಕುರಿತಾದ ಸಂಶೋಧನೆ, ಸಾಹಿತ್ಯ ಸೃಷ್ಟಿ ಇನ್ನಷ್ಟು ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಕವಿವಿ ಸೇರಿದಂತೆ ರಾಜ್ಯದ ಬೇರೆ-ಬೇರೆ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಿ, ಅಲ್ಲೂ ವೇಮನ ಅಧ್ಯಯನ ಕೋರ್ಸ್ ಹಾಗೂ ಪದವಿ ತರಗತಿಗಳು ಪ್ರಾರಂಭಿಸುವಂತೆ ಸಲಹೆ ನೀಡಿದರು. 12ನೇ ಶತಮಾಣದ ಬಸವಣ್ಣವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಕಟ್ಟಿಕೊಟ್ಟ ಕೀರ್ತಿ ಶೇಷರು. ಇಂಥ ಶಿವಶರಣರನ್ನು ಒಂದು ಜಾತಿಗೆ ಮೀಸಿತಗೊಳಿಸುವುದು ಸಲ್ಲ. ಶರಣರು ಜಾತಿ ಮೀರಿದವರು ಎಂದು ಹೇಳಿದರು.
ವೇಮನ ಮೂರ್ತಿ ಅನಾವರಣಗೊಳಿಸಿದ ವಿಪ ಸಭಾಪತಿ ಬಸವರಾಜ ಹೊರಟ್ಟಿ, 1984ರಿಂದ ವೇಮನ ಪೀಠ ಸಾಕಷ್ಟು ಕೆಲಸ ಮಾಡಿದೆ. ತೆಲುಗಿನಲ್ಲಿದ್ದ ವೇಮನ ವಚನಗಳು ಕನ್ನಡಕ್ಕೆ ತುರ್ಜುಮೆಗೊಳಿಸಿದ ಕೀರ್ತಿ ಎಸ್.ಆರ್. ಪಾಟೀಲರದ್ದು ಎಂದರು.ವೇಮನ ಪೀಠದಲ್ಲಿ ತಮ್ಮ ತಾಯಿ ಹೆಸರಿನಲ್ಲಿ ಗ್ರಂಥಾಲಯ ನಿರ್ಮಿಸಲು ₹5 ಲಕ್ಷ ಆರ್ಥಿಕ ಸಹಕಾರವನ್ನು ಅವ್ವ ಟ್ರಸ್ಟ್ ವತಿಯಿಂದ ನೀಡುವ ಭರವಸೆ ನೀಡಿದರು. ಆಧುನಿಕ ಯುಗದಲ್ಲಿ ಬುದ್ಧಿವಂತರು, ಜ್ಞಾನಿಗಳು ಹೆಚ್ಚಾದಂತೆ ಅನೇಕ ಜಾತಿ ಜನ್ಮ ತಾಳಿವೆ. ಜಾತಿ ಪದ್ಧತಿ ನಿವಾರಣೆಗೆ ಇಂಥ ಮಹಾತ್ಮರ ಜಯಂತಿ ಸಹಕಾರಿ. ಮಹಾತ್ಮರನ್ನೂ ಜಾತಿಗೆ ಸೀಮಿತಗೊಳಿಸುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಸತ್ಯ ಎಂದಿಗೂ ಕಠೋರ. ಇಂತಹ ಸತ್ಯ ವೇಮನರು ನುಡಿದಿದ್ದಾರೆ. ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು. ಕವಿವಿ ಎಲ್ಲ ಪೀಠಗಳಿಗಿಂತ ವೇಮನ ಪೀಠ ಮಾದರಿ ಆಗುವ ನಿಟ್ಟಿನಲ್ಲಿ ಪೀಠದ ಕೆಲಸಗಳು ರಾಜ್ಯಾದ್ಯಂತ ಪಸರಿಸಬೇಕು ಎಂದರು.ನಿವೃತ್ತ ಪ್ರಾಧ್ಯಾಪಕ ಸಿದ್ದಣ್ಣ ಲಂಗೋಟಿ ಉಪನ್ಯಾಸ ನೀಡಿದರು. ಎರೆಹೊಸಳ್ಳಿ ವೇಮನ ಮಠದ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಎನ್.ಎಚ್. ಕೋನರೆಡ್ಡಿ, ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಡಿ.ಆರ್. ಪಾಟೀಲ, ಐ.ಜಿ. ಸನದಿ, ರೆಡ್ಡಿ ಬ್ಯಾಂಕ್ ಅಧ್ಯಕ್ಷ ಕೆ.ಎಲ್. ಪಾಟೀಲ, ಕುಲಪತಿ ಡಾ. ಕೆ.ಬಿ. ಗುಡಸಿ, ಕುಸಚಿವ ಡಾ. ಎ. ಚೆನ್ನಪ್ಪ, ವೇಮನ ಪೀಠದ ಸಂಯೋಜಕ ಡಾ. ಎಚ್.ಬಿ. ನೀಲಗುಂದ, ಸಂಚಾಲಕ ರಮೇಶ ಜಂಗಲ, ಗೋವಿಂದ ಮಣ್ಣೂರ, ಜೆ.ಕೆ. ಜಮಾದರ ಇದ್ದರು.
ವೇಮನ ಪೀಠಕ್ಕೆ ಬೇಕಾದ ಅಗತ್ಯ ಮೂಲಭೂತ ಭೌತಿಕ ಸೌಲಭ್ಯಗಳು ಈಗ ಲಭಿಸಿವೆ. ವೇಮನ ಅಧ್ಯಯನ ಪೀಠದಿಂದ ವಿದ್ಯಾರ್ಥಿ ನಿಲಯದ ಸ್ಥಾಪನೆಗೆ ಯೋಜನೆ ರೂಪಿಸಿದ್ದು, ಕವಿವಿಯಿಂದ ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರ ಆರ್ಥಿಕ ಸಹಾಯ ಮಾಡಲಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ. ಕಾನೂನು ವಿವಿ ಬೋಧಕ-ಬೋಧಕೇತರ ನೇಮಕಾತಿ ಪ್ರಕ್ರಿಯೆ ಜಾರಿಧಾರವಾಡ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ವಿವಿ ಸ್ಥಾಪನೆಯಾದ ಬಳಿಕ ಸರ್ಕಾರ ಸಿಬ್ಬಂದಿ ನೇಮಕಾತಿಗೆ ಒತ್ತು ಕೊಡಬೇಕಿತ್ತು. 14 ವರ್ಷಗಳಿಂದ ಬೋಧಕೇತರ ಸಿಬ್ಬಂದಿ ನೇಮಕಾತಿ ಮಾಡದೇ ಇರುವ ಸಂಗತಿ ಗೊತ್ತಿದೆ. ನಾನೇ ಖುದ್ದಾಗಿ ವಿವಿಗೆ ಹೋಗಿ ಸಭೆ ನಡೆಸಿದ್ದೇನೆ. ಸುಮಾರು ಹತ್ತು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಅವುಗಳ ಪೈಕಿ ಬೋಧಕರು, ಬೋಧಕೇತರ ಸಿಬ್ಬಂದಿ ವಿಚಾರವೂ ಇದ್ದು ಆ ಪ್ರಕ್ರಿಯೆ ಇದೀಗ ಜಾರಿಯಲ್ಲಿದೆ ಎಂದರು. ವಿವಿಯ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಪ್ರಕ್ರಿಯೆ ನಡೆದಿದೆ. ಅಲ್ಲಿನ ಶೈಕ್ಷಣಿಕ ವಿಚಾರಕ್ಕೂ ಕಡಿಮೆ ಅವಕಾಶ ಕೊಡಲಾಗಿತ್ತು. ಮೊದಲು 180 ವಿದ್ಯಾರ್ಥಿಗಳಿಗೆ ಅವಕಾಶವಿತ್ತು. ಇದೀಗ ಅದು 300 ಆಗಲಿದೆ. ಮೂಲಭೂತ ಸೌಕರ್ಯಗಳೂ ಸರಿಯಾಗಲಿವೆ. ₹70 ಕೋಟಿ ವೆಚ್ಚದಲ್ಲಿ ಭೌತಿಕ ಕಾರ್ಯಗಳು ನಡೆಯುತ್ತಿವೆ ಎಂದು ಸಚಿವರು ಹೇಳಿದರು.