ನಾಗಲಾಪುರ ಗ್ರಾಪಂ ಮಟ್ಟದಲ್ಲಿ ಸಂಜೀವಿನಿ ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಎನ್.ಆರ್.ಎಲ್.ಎಂ. ಸಂಜೀವಿನಿ ಕಾರ್ಯಕ್ರಮದಲ್ಲಿ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಜೀವನೋಪಾಯ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಕಾರ್ಯಕ್ರಮ ಜಿಲ್ಲಾ ವ್ಯವಸ್ಥಾಪಕ ರಾಜೇಂದ್ರಕುಮಾರ್ ಕರೆ ನೀಡಿದರು. ಬುಧವಾರ ನಾಗಲಾಪುರ ಗ್ರಾಪಂ ಸಭಾಂಗಣದಲ್ಲಿ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ 2 ದಿನದ ವಾರ್ಷಿ ಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 220 ಎನ್.ಆರ್.ಎಂ.ಎಲ್.ಸಂಜೀವಿನಿ ಸ್ವಸಹಾಯ ಸಂಘಗಳಿವೆ. ಇದುವರೆಗೆ ನರಸಿಂಹ ರಾಜಪುರ ತಾಲೂಕಿನಲ್ಲಿ ಮಾತ್ರ 2 ಒಕ್ಕೂಟಗಳ ವಾರ್ಷಿಕೋತ್ಸವ ನಡೆದಿದೆ. ಕಳೆದ 3 ವರ್ಷಗಳ ಹಿಂದೆ ಸಂಜೀವಿನಿ ಸ್ವಸಹಾಯ ಸಂಘಗಳು ಪ್ರಾರಂಭ ವಾಗಿದೆ. ಇದುವರೆಗೆ ಜಿಲ್ಲೆ ವಿವಿಧ ತಾಲೂಕುಗಳಲ್ಲಿ 150ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿದ್ದೇವೆ. ಪ್ರಾರಂಭದಲ್ಲಿ ಉಳಿತಾಯಕ್ಕೆ ಸೀಮಿತವಾಗಿದ್ದ ಸ್ವಸಹಾಯ ಒಕ್ಕೂಟಗಳು ಈಗ ಜೀವನ ನಡೆಸಲು ಅನುಕೂಲ ವಾಗುವಂತೆ ಉದ್ಯಮ ಸ್ಥಾಪಿಸಿ ಆರ್ಥಿಕ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದಾರೆ. ಮಹಿಳೆಯರು ಸ್ವಾವಲಂಭಿ ಗಳಾಗಿ ಬದುಕಬೇಕು ಎಂದು ಕೇಂದ್ರದಿಂದ ರಾಷ್ಟೀಯ ಗ್ರಾಮೀಣ ಜೀವನೋಪಯೋಗ ಇಲಾಖೆ ಹುಟ್ಟು ಹಾಕಲಾಯಿತು. ಬೇರೆ ರಾಜ್ಯದಲ್ಲಿ ಬೇರೆ, ಬೇರೆ ಹೆಸರಿದ್ದು, ಕರ್ನಾಟಕದಲ್ಲಿ ಸಂಜೀವಿನಿ ಒಕ್ಕೂಟ ಎಂದು ಹೆಸರಿಡಲಾಗಿದೆ ಎಂದರು.ಈಗಾಗಲೇ 65 ತರಬೇತಿ ನೀಡಿದ್ದು, ಈ ಹಿಂದೆ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ತರಬೇತಿ, ಈಗ ತಾಲೂಕು ಕೇಂದ್ರ ದಲ್ಲೇ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ 15 ಲಕ್ಷ ಅನುದಾನ ನೇರವಾಗಿ ಸಂಜೀವಿನಿ ಒಕ್ಕೂಟದ ಖಾತೆಗೆ ಹಾಕಿದ್ದೇವೆ ಎಂದರು.
ತಾಪಂ ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಎನ್.ಎಲ್. ಮನೀಶ್ ಉದ್ಘಾಟಿಸಿ ಮಾತನಾಡಿ, ಬಹಳ ವರ್ಷಗಳ ಹಿಂದೆ ಮಹಿಳೆಯರು ಮನೆಯ ಡಬ್ಬಿಯಲ್ಲಿ ಹಣ ಉಳಿತಾಯ ಮಾಡುತ್ತಿದ್ದರು. ಇದೇ ಕಲ್ಪನೆಯಲ್ಲಿ ಸ್ವಸಹಾಯ ಸಂಘದ ಮೂಲಕ ಈಗ ಉಳಿತಾಯ ಮಾಡುತ್ತಿದ್ದಾರೆ. ಮಹಿಳೆಯರಿಗೆ ಯಾವುದೇ ಆರ್ಥಿಕ, ಸಾಮಾಜಿಕ ಚಟುವಟಿಕೆ ನಡೆಸಲು ಅವಕಾಶಗಳು ಕಡಿಮೆಯಾಗಿದ್ದು ಇಂತಹ ಸ್ವಸಹಾಯ ಸಂಘಗಳ ಮೂಲಕ ಮುಖ್ಯ ವಾಹಿನಿಗೆ ಬರಲು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಎನ್.ಆರ್.ಎಲ್.ಎಂ.ಸಂಜೀವಿನಿ ಒಕ್ಕೂಟದಲ್ಲಿ ಹಲವಾರು ಅವಕಾಶಗಳಿವೆ. ಕಡೂರು ಸಂಜೀವಿನಿ ಒಕ್ಕೂಟಕ್ಕೆ ವಾಹನ ನೀಡಲಾಗಿದೆ. ಎನ್.ಆರ್.ಇ.ಜಿ.ಯಲ್ಲೂ ಮಹಿಳೆಯರಿಗೆ ಹಲವು ಅವಕಾಶಗಳಿವೆ. ಇದರಲ್ಲಿ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ಹಾಕಲಾಗುತ್ತದೆ. ಸರ್ಕಾರದ ಹಲವು ಯೋಜನೆ ಬಳಸಿಕೊಂಡು ನಿಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಿ ಎಂದು ಕರೆ ನೀಡಿದರು.ತಾಲೂಕು ವ್ಯವಸ್ಥಾಪಕ ಎಂ.ಸುಬ್ರಮಣ್ಯ ಮಾತನಾಡಿ, ನರಸಿಂಹರಾಜಪುರ ತಾಲೂಕಿನಲ್ಲಿ 14 ಸಂಜೀವಿನಿ ಒಕ್ಕೂಟ ರಚನೆಯಾಗಿದೆ. ಸರ್ಕಾರಿ ಕಾರ್ಯಕ್ರಮಗಳನ್ನು ಈ ಒಕ್ಕೂಟದ ಮೂಲಕ ಅನುಷ್ಟಾನ ಮಾಡಲಾಗುತ್ತಿದೆ. ಈಗಾಗಲೇ 14 ಸ್ವಸಹಾಯ ಸಂಘದ ಸದಸ್ಯರಿಗೆ ವಾಹನ ಚಾಲನೆ ತರಬೇತಿ ನೀಡಲಾಗಿದೆ. ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ವಾಹನಗಳ ತರಬೇತಿ ಪಡೆದ ಮಹಿಳೆಯರೇ ಚಾಲನೆ ಮಾಡಲಿದ್ದಾರೆ. ಸಭೆ ಅಧ್ಯಕ್ಷತೆಯನ್ನು ನಾಗಲಾಪುರ ಸಂಜೀವಿನಿ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಕಮಲ ಸುಧೀರ್ ವಹಿಸಿದ್ದರು.
ಅತಿಥಿಗಳಾಗಿ ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾ ಬೆನ್ನಿ, ಸಾಹಿತಿ ಜಯಮ್ಮ, ಗ್ರಾಪಂ ಸದಸ್ಯರಾದ ಸುಮಿತ್ರ, ಶೋಭಾ, ಕಲಾವಿದ ಅಭಿನವ ಗಿರಿರಾಜ್, ಪಿಡಿಒ ಪ್ರೇಂ ಕುಮಾರ್, ಚೈತ್ರಾ ಇದ್ದರು. ಇದೇ ಸಂದರ್ಭದಲ್ಲಿ ಕಲಾವಿದ ಅಭಿನವ ಗಿರಿರಾಜ್, ಸಾಹಿತಿ ಜಯಮ್ಮ, ಪಿಡಿಒ ಪ್ರೇಂ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆ ಹಾಗೂ ಗೀತ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.