ಮಹಿಳೆಯರು ಆತ್ಮಸ್ಥೈರ್ಯ ಬೆಳೆಸಿಕೊಳ್ಳಲಿ: ಶ್ರೀದೇವಿ ಕೆರೆಮನೆ

KannadaprabhaNewsNetwork | Published : Mar 15, 2024 1:17 AM

ಸಾರಾಂಶ

ದೇಶದ ಎಲ್ಲ ರಂಗಗಳಲ್ಲಿ ಸ್ತ್ರೀಯರು ಅಗ್ರಸ್ಥಾನದಲ್ಲಿದ್ದರೂ ಲಿಂಗ ತಾರತಮ್ಯ, ಹೆಣ್ಣುಭ್ರೂಣ ಹತ್ಯೆಗಳಂತಹ ಪೆಡಂಭೂತಗಳು ಸಮಾಜದಲ್ಲಿರುವುದು ವಿಷಾದದ ಸಂಗತಿ.

ಅಂಕೋಲಾ: ಕಾಲ ಬದಲಾದಂತೆ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಬದಲಾಗುತ್ತಿದ್ದು, ಅವುಗಳನ್ನು ಎದುರಿಸುವ ಧೈರ್ಯ, ಚಾಣಾಕ್ಷತೆ, ಆತ್ಮಸ್ಥೈರ್ಯವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಲೇಖಕಿ ಶ್ರೀದೇವಿ ಕೆರೆಮನೆ ತಿಳಿಸಿದರು.

ಅಂಕೋಲಾ ಲಯನ್ಸ್ ಕ್ಲಬ್ ಕರಾವಳಿ ಹಾಗೂ ಶಿಶು ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಇಲಾಖೆ ಜಂಟಿಯಾಗಿ ಅಂಗನವಾಡಿ ಸಹಾಯಕ ಕಾರ್ಯಕರ್ತೆಯರಿಗೆ ಏರ್ಪಡಿಸಿದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ದೇಶದ ಎಲ್ಲ ರಂಗಗಳಲ್ಲಿ ಸ್ತ್ರೀಯರು ಅಗ್ರಸ್ಥಾನದಲ್ಲಿದ್ದರೂ ಲಿಂಗ ತಾರತಮ್ಯ, ಹೆಣ್ಣುಭ್ರೂಣ ಹತ್ಯೆಗಳಂತಹ ಪೆಡಂಭೂತಗಳು ಸಮಾಜದಲ್ಲಿರುವುದು ವಿಷಾದದ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಡಿಪಿಒ ಸವಿತಾ ಶಾಸ್ತ್ರಿಮಠ ಅವರು, ಮಂಡ್ಯ, ಮೈಸೂರಿನಂತಹ ಸುಸಂಸ್ಕೃತರ ನಾಡಿನಲ್ಲಿ ಹೆಣ್ಣು ಭ್ರೂಣ ಹತ್ಯೆ ದಶಕಗಳ ಕಾಲ ನಿರಾತಂಕವಾಗಿ ನಡೆದಿರುವುದು ನಾಗರಿಕ ಸಮಾಜಕ್ಕೆ ಲಜ್ಜಾಸ್ಪದ ಸಂಗತಿಯಾಗಿದೆ. ಕೇವಲ ಕಾನೂನಿನಿಂದ ಮಾತ್ರ ಇಂತಹ ಅನಿಷ್ಟಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಸಮಾಜದಲ್ಲಿ ಹೆಣ್ಣು ಶಿಶುಗಳ ಬಗ್ಗೆ ಇರುವ ತಾರತಮ್ಯ ಮನೋಭಾವನೆ ಬದಲಾಗಬೇಕೆಂದರು.

ಈ ಸಂದರ್ಭದಲ್ಲಿ ಲೇಖಕಿ ಶ್ರೀದೇವಿ ಕೆರೆಮನೆ, ಸಿಡಿಪಿಒ ಸವಿತಾ ಶಾಸ್ತ್ರಿಮಠ ಅವರನ್ನು ಲಯನ್ಸ್ ಕ್ಲಬ್ ಪರವಾಗಿ ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಮಂಜುನಾಥ ಹರಿಕಂತ ವಹಿಸಿದ್ದರು. ಸಾಹಿತಿ ಮೋಹನ ಹಬ್ಬು ಮಾತನಾಡಿದರು. ಶೋಭಾ ಗೌಡ ಪ್ರಾರ್ಥಿಸಿದರು. ಕಾರ್ಯದರ್ಶಿ ಎಸ್.ಆರ್. ಉಡುಪಿ ಸ್ವಾಗತಿಸಿದರು. ಲಯನ್ ದೇವಾನಂದ ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾನಂದ ಶೆಟ್ಟಿ ವಂದಿಸಿದರು. ಮಹಾಂತೇಶ ರೇವಡಿ ನಿರೂಪಿಸಿದರು. ಲಯನ್ಸ್ ಸದಸ್ಯರಾದ ಡಾ. ಕರುಣಾಕರ, ಸಂಜಯ ಅರುಂಧೇಕರ, ಚಂದನಸಿಂಗ್, ಶಂಕರ ಹುಲಸ್ವಾರ, ಅಂಗನವಾಡಿ ಮೇಲ್ವಿಚಾರಕಾರದ ಗೌರಿ ಮಾರ್ಕಂಡೇಯ, ಸೌಮ್ಯ ಗೌಡ, ಸವಿತಾ ಜೋಶಿ, ಸುರೇಖಾ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article