ನಿಖಿಲ್‌ ಗೆಲ್ಲಿಸಲು ನಾವೆಲ್ಲರೂ ಪಣತೊಡೋಣ: ತಮ್ಮಣ್ಣ

KannadaprabhaNewsNetwork | Published : Nov 6, 2024 12:42 AM

ಸಾರಾಂಶ

ಮದ್ದೂರಿನ ಜೆಡಿಎಸ್ ಮತ್ತು ಬಿಜೆಪಿಯ ಎಲ್ಲಾ ಕಾರ್ಯಕರ್ತರು ಮನೆಮನೆಗೆ ತೆರಳಿ ಮತ ಬೇಡುವ ಕೆಲಸ ಮಾಡಿದಾಗ ಮಾತ್ರ ಗೆಲುವು ಸಾಧ್ಯ .

ಕನ್ನಡಪ್ರಭ ವಾರ್ತೆ ಭಾರತೀನಗರ

ಚನ್ನಪಟ್ಟಣದ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಪಣತೊಡಬೇಕು ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮನವಿ ಮಾಡಿದರು.

ತಮ್ಮ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮದ್ದೂರು ಕ್ಷೇತ್ರದ ಅಕ್ಕ- ಪಕ್ಕದ ಗ್ರಾಮಗಳು ಚನ್ನಪಟ್ಟಣದ ಕ್ಷೇತ್ರಕ್ಕೆ ಸೇರಿವೆ. ಹಾಗಾಗಿ ಅಂತಹ ಗ್ರಾಮಗಳಿಗೆ ತೆರಳಿ ಎನ್‌ಡಿಎ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಪರ ಮತಯಾಚನೆ ಮಾಡಬೇಕೆಂದು ಮನವಿ ಮಾಡಿದರು.

ಮದ್ದೂರು ಕ್ಷೇತ್ರದಿಂದ ಚನ್ನಪಟ್ಟಣ ಕ್ಷೇತ್ರಕ್ಕೆ ಬಹಳಷ್ಟು ಸಂಬಂಧಗಳು ಬೆಸುಗೆಗೊಂಡಿವೆ. ಹಾಗಾಗಿ ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ತೆರಳಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಕ್ಕೆ ಕೊಟ್ಟಿರುವಂತಹ ಕೊಡುಗೆಗಳು ಮತ್ತು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ತಿಳಿಸಿಕೊಟ್ಟು ನಿಖಿಲ್ ಗೆಲುವಿಗೆ ಶ್ರಮಿಸಬೇಕೆಂದು ಕೋರಿದರು.

ಈಗಿನಿಂದಲೇ ಚುನಾವಣಾ ಪ್ರಚಾರ ಮಾಡೋಣ. ಚನ್ನಪಟ್ಟಣ ಕ್ಷೇತ್ರದಲ್ಲೇ ನಾನಿರುತ್ತೇನೆ. ಕಾರ್ಯಕರ್ತರು ನನ್ನನ್ನು ಭೇಟಿ ಮಾಡಿದರೆ ನಿಮ್ಮ ಪರಿಚಿತರನ್ನು ಸಂಪರ್ಕಿಸಬಹುದು. ನನ್ನ ಚುನಾವಣೆಯಲ್ಲಿ ಶ್ರಮಿಸಿದ ಹಾಗೆ ಚನ್ನಪಟ್ಟಣ ಚುನಾವಣೆಯಲ್ಲೂ ನಮ್ಮ ಕ್ಷೇತ್ರದ ಕಾರ್ಯಕರ್ತರು ಮತ ಬೇಟೆಗೆ ಮುಂದಾಗಬೇಕು. ಆಗ ಮಾತ್ರ ಎನ್‌ಡಿಎ ಅಭ್ಯಥಿ ನಿಖಿಲ್ ಗೆಲ್ಲಿಸಲು ಸಾಧ್ಯ ಎಂದರು.

ಬಿಜೆಪಿ ಮುಖಂಡ ಹಾಗೂ ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮಾತನಾಡಿ, ಮದ್ದೂರಿನ ಜೆಡಿಎಸ್ ಮತ್ತು ಬಿಜೆಪಿಯ ಎಲ್ಲಾ ಕಾರ್ಯಕರ್ತರು ಮನೆಮನೆಗೆ ತೆರಳಿ ಮತ ಬೇಡುವ ಕೆಲಸ ಮಾಡಿದಾಗ ಮಾತ್ರ ಗೆಲುವು ಸಾಧ್ಯ ಎಂದು ಹೇಳಿದರು.

ಜೆಡಿಎಸ್ ಮುಖಂಡ ಸಂತೋಷ್‌ ತಮ್ಮಣ್ಣ ಮಾತನಾಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಕೆ.ಪಿ.ದೊಡ್ಡಿ ಶಿವರಾಮು, ತೈಲಪ್ಪ ಮಾತನಾಡಿದರು. ವೇದಿಕೆಯಲ್ಲಿ ಜೆಡಿಎಸ್ ಮುಖಂಡರಾದ ಕರಡಕೆರೆ ಹನುಮಂತೇಗೌಡ, ಆಲಭುಜನಹಳ್ಳಿ ಚಂದ್ರಶೇಖರ್, ಎಚ್.ಎಂ.ಮರಿ ಮಾದೇಗೌಡ, ಕೆಸ್ತೂರು ಬಿಳಿಯಪ್ಪ, ಸಿ.ಎ.ಕೆರೆ ಮೂರ್ತಿ, ಬೆಸಗರಹಳ್ಳಿ ರಾಜಣ್ಣ ಸೇರಿದಂತೆ ಹಲವರಿದ್ದರು.

Share this article