ಕನ್ನಡ ಭವನ ಕಸಾಪದಿಂದ ವಾಪಸ್ ಪಡೆಯಲು ಸಚಿವ ತಂಗಡಿಗೆ ಪತ್ರ

KannadaprabhaNewsNetwork | Published : Mar 6, 2024 2:26 AM

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಕನ್ನಡ ಭ‍ವನದ ಉದ್ಘಾಟನೆಯಾಗಿ ಕೇವಲ ಒಂದೇ ತಿಂಗಳಾಗಿಲ್ಲ ಅದಕ್ಕೀಗ ಮಾಲೀಕತ್ವದ ಪ್ರಶ್ನೆ ಎದುರಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಪರ್ದಿಗೆ ಬಂದಿದ್ದ ಈ ಭವನವನ್ನು ವಾಪಸ್‌ ಪಡೆಯುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸೂಚಿಸಿದ್ದಾರೆ.

ಅಪ್ಪಾರಾವ್‌ ಸೌದಿ

ಬೀದರ್‌: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಕನ್ನಡ ಭ‍ವನದ ಉದ್ಘಾಟನೆಯಾಗಿ ಕೇವಲ ಒಂದೇ ತಿಂಗಳಾಗಿಲ್ಲ ಅದಕ್ಕೀಗ ಮಾಲೀಕತ್ವದ ಪ್ರಶ್ನೆ ಎದುರಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಪರ್ದಿಗೆ ಬಂದಿದ್ದ ಈ ಭವನವನ್ನು ವಾಪಸ್‌ ಪಡೆಯುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸೂಚಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಕಳೆದ ಹಲವು ದಶಕಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭವನ ನಿರ್ಮಾಣಕ್ಕಾಗಿ ಶ್ರಮಿಸಿದ್ದು ಒಂದೆಡೆಯಾದರೆ ಭವನ ನಿರ್ಮಾಣಕ್ಕೆ ಈ ಹಿಂದೆ ಜಿಲ್ಲಾಧಿಕಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸ್ಥಳ ಹಸ್ತಾಂತರಿಸಿದರೆ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ 2 ಕೋಟಿ ರು. ಅನುದಾನ ನೀಡಿದ್ದೇ ಇದೀಗ ಭವನದ ಮಾಲೀಕತ್ವದ ಸವಾಲಾಗಿ ಮುಂದೆ ನಿಂತಿದೆ.

ಈ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಜಿಲ್ಲಾಧಿಕಾರಿಗಳಿಗೆ 23-02-2024ರಂದು ಪತ್ರ ಬರೆದಿದ್ದು, ಬೀದರ್‌ ನಗರದ ಚಿಕಪೇಟ್‌ ಬಳಿ ನಿರ್ಮಾಣಗೊಂಡಿರುವ ಕನ್ನಡ ಭವನಕ್ಕೆ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಒದಗಿಸಲಾಗಿತ್ತು, ನಂತರ ಭವನ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗಿತ್ತು, ಕಾಮಗಾರಿ ಪೂರ್ಣಗೊಂಡ ನಂತರ ಈ ಭವನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು, ಇಲಾಖೆಯ ಸಹಾಯಕ ನಿರ್ದೇಶಕರು ಈ ಭವನವನ್ನು ಇಲಾಖಾ ಮುಖ್ಯಸ್ಥರ ಅನುಮತಿಯನ್ನು ಪಡೆಯದೇ ದಿ. 31-01-2024 ರಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಿಗೆ ಹಸ್ತಾಂತರಿಸಿರುತ್ತಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಬೀದರ್‌ ಜಿಲ್ಲಾಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಿದ ಭೂಮಿಯಲ್ಲಿ ಕನ್ನಡ ಭವನ ಕಟ್ಟಡವು ಸಂಪೂರ್ಣವಾಗಿ ಸರ್ಕಾರಿ ನಿವೇಶನದಲ್ಲಿ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ 2ಕೋಟಿ ರು. ಅನುದಾನದಲ್ಲಿ ನಿರ್ಮಾಣಗೊಂಡಿದೆ. ಆದ್ದರಿಂದ ಈ ಭವನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲೇ ಇರಬೇಕೆಂಬುವದು ಸೂಕ್ತವಾಗಿದೆ. ಆದ್ದರಿಂದ ಈ ಭವನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಕೋರಿದೆ ಎಂದು ಸಚಿವ ಶಿವರಾಜ ತಂಗಡಿ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಹೀಗಾಗಿ ಒಂದು ತಿಂಗಳ ಹಿಂದಷ್ಟೇ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಕನ್ನಡ ಭವನ ಉದ್ಘಾಟಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೀಗ ಚಿಂತೆಗೀಡಾಗುವಂತಾಗಿದ್ದು ಅಧ್ಯಕ್ಷರು ಯಾರೇ ಇರಲಿ, ನಿವೇಶನ ಗುರುತಿಸುವಿಕೆಯಿಂದ ಹಿಡಿದು ಕಟ್ಟಡ ನಿರ್ಮಾಣದ ವರೆಗೆ ಹಲವಾರು ರೀತಿಯಲ್ಲಿ ಹೋರಾಡಿ ಶ್ರಮಿಸಿದ್ದ ಪರಿಷತ್ತಿನ ನಾಮ ಫಲಕ ತೆರವುಗೊಳಿಸುವಂತೆ ಸನ್ನಿವೇಶ ಎದುರಾಗಿದ್ದು ಮಾತ್ರ ಪರಿಷತ್‌ ಪದಾಧಿಕಾರಿಗಳು, ಸಾವಿರಾರು ಸದಸ್ಯರನ್ನು ಕೆರಳಿಸುವಂತೆ ಮಾಡಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರ ಪತ್ರಕ್ಕೆ ಜಿಲ್ಲಾಧಿಕಾರಿ ಸಮರ್ಪಕ ಉತ್ತರ ನೀಡಿ, ಪರಿಷತ್ತು ಭವನ ನಿರ್ವಹಣೆ ಮಾಡಿಕೊಂಡು ಹೋಗುವಂತೆ ಮಾಡುತ್ತಾರೆಯೋ ಅಥವಾ ಭವನವನ್ನು ಪರಿಷತ್ತು ಬಿಟ್ಟುಕೊಡುವಂತೆ ಸೂಚಿಸುತ್ತಾರೆಯೋ ಕಾದು ನೋಡಬೇಕಿದೆ.

Share this article