ಗೀತೆಯ ಸಂದೇಶ ಪಾಲಿಸಿದರೆ ಜೀವನ ಸಾರ್ಥಕ: ಪುತ್ತಿಗೆ ಶ್ರೀ

KannadaprabhaNewsNetwork |  
Published : Jan 08, 2024, 01:45 AM IST
ಸ್ವಾಮೀಜಿಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. | Kannada Prabha

ಸಾರಾಂಶ

ಉಡುಪಿ ಕೃಷ್ಣಮಠದ ಭಾವಿ ಪರ್ಯಾಯ ಪೀಠಾಧಿಪತಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಮಂಗಳೂರಿಲ್ಲಿ ಪೌರ ಸನ್ಮಾನ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಭಗವದ್ಗೀತೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕ್ಯ ಕಾಣಲು ಸಾಧ್ಯ ಎಂದು ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠಾರೋಹಣಗೈಯ್ಯಲಿರುವ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪರ್ಯಾಯ ಪೌರ ಸನ್ಮಾನ ಸಮಿತಿ ಮಂಗಳೂರು ವತಿಯಿಂದ ನಗರದ ಬಾಳಂಭಟ್‌ ಸಭಾಂಗಣದಲ್ಲಿ ಭಾನುವಾರ ಅದ್ಧೂರಿ ಪೌರ ಸನ್ಮಾನ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ಅಭಿವೃದ್ಧಿಯಲ್ಲಿ ಮುಂದುವರಿದಿರುವ ಅಮೆರಿಕದಂತಹ ದೇಶಗಳಲ್ಲಿ ಎಲ್ಲ ಬಗೆಯ ಸಂಪತ್ತು ಇದ್ದರೂ ಮನುಷ್ಯ ನೆಮ್ಮದಿ, ಸಂತೋಷದ ಕೊರತೆ ಅನುಭವಿಸುತ್ತಿದ್ದಾನೆ. ಆದರೆ ಭಾರತದಲ್ಲಿ ಜನರು ಸಂತೋಷದಿಂದಿದ್ದಾರೆ. ಇದರ ಹಿಂದೆ ಶ್ರೀಕೃಷ್ಣ ಪರಮಾತ್ಮ ಒದಗಿಸಿದ ಭಗವದ್ಗೀತೆಯ ಸಾರವಿದೆ. ಇದು ಹೀಗಿಯೇ ಮುಂದುವರಿದುಕೊಂಡು ಹೋಗಬೇಕು. ಮನುಷ್ಯನ ಬದುಕು ಭಗವದ್ಗೀತೆ ಕೇಂದ್ರಿತವಾದಾಗ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯ ಎಂದು ಸ್ವಾಮೀಜಿ ಹೇಳಿದರು.

ಇಗೋ ಕಡಿಮೆ ಮಾಡಿ:

ಇಂದು ‘ಇಗೋ’ ಸಮಸ್ಯೆ ಹೆಚ್ಚಾಗುತ್ತಿದೆ. ‘ಇಗೋ’ ಕಡಿಮೆ ಮಾಡಿಕೊಂಡರೆ ಎಲ್ಲ ಸಮಸ್ಯೆಗಳಿಂದ ಹೊರಬರಲು ಸಾಧ್ಯ. ಶ್ರೀಕೃಷ್ಣನ ಸಂದೇಶಗಳು ಇದಕ್ಕೆ ದಾರಿದೀಪ. ಭಗವದ್ಗೀತೆ ಓದುವುದರಿಂದ ದೇವರಿಗೆ ಹತ್ತಿರವಾಗುವ ಜತೆಗೆ ಜ್ಞಾನವೂ ದೊರೆತು ಬದುಕು ಪರಿಪೂರ್ಣವಾಗುತ್ತದೆ. ಅದಕ್ಕಾಗಿ ಪ್ರತಿ ಮನೆಯಲ್ಲೂ ಭಗವದ್ಗೀತೆಯ ಪಠಣವಾಗಬೇಕು ಎಂದು ಕರೆ ನೀಡಿದರು.

ಇದುವರೆಗೆ ವಿಶ್ವದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಲೋಕ ಸಂಚಾರ ಮುಗಿಸಿ ತಾಯ್ನಾಡಿಗೆ ಮರಳಿದಾಗ ದೊರೆತ ಜನರ ಪ್ರೀತಿ ಅಮೂಲ್ಯವಾದುದು. ತಾಯ್ನಾಡಿನ ಪ್ರೀತಿ ಬೇರೆಲ್ಲೂ ಸಿಗದು ಎಂದು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ಆಶೀರ್ವಚನ ನೀಡಿದ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಧರ್ಮದ ಪಾಲನೆಯನ್ನು ಪ್ರತಿಯೊಬ್ಬರೂ ಮಾಡಬೇಕು. ಆಚರಣೆಗಳೂ ಕೂಡ ಅರ್ಥವತ್ತಾಗಿ ಆಚರಿಸಲ್ಪಡಬೇಕು. ಭಗವಂತನನ್ನು ಪ್ರಧಾನವಾಗಿಸಿ ಜೀವನ ನಡೆಸಿದರೆ ಬದುಕು ಸುಖಕರವಾಗಿರಲು ಸಾಧ್ಯ ಎಂದು ಹೇಳಿದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ವಿಶ್ವಾದ್ಯಂತ ಪ್ರಯಾಣಿಸುವ ಮೂಲಕ ಭಾರತದ ಸನಾತನ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಿರುವ ಸ್ವಾಮೀಜಿಗಳ ಕಾರ್ಯ ಮಹತ್ತರವಾದುದು ಎಂದರು.

ಶಾಸಕ ಡಾ.ವೈ.ಭರತ್‌ ಶೆಟ್ಟಿ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಪ್ರೊ.ಎಂಬಿ. ಪುರಾಣಿಕ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನಪರಿಷತ್‌ ಸದಸ್ಯ ಪ್ರತಾಪ ಸಿಂಹ ನಾಯಕ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಿ.ಎಸ್‌.ಪ್ರಕಾಶ್‌, ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್‌, ಉಪಮೇಯರ್‌ ಸುನಾತಾ, ಪ್ರಮುಖರಾದ ಶರವು ರಾಘವೇಂದ್ರ ಶಾಸ್ತ್ರಿ, ಪ್ರದೀಪ್‌ ಕುಮಾರ್‌ ಕಲ್ಕೂರ, ಸತೀಶ್‌ ಪ್ರಭು, ಎಚ್‌.ಕೆ. ಪುರುಷೋತ್ತಮ, ಪ್ರೇಮಾನಂದ ಶೆಟ್ಟಿ, ಶಶಿಧರ ಹೆಗ್ಡೆ, ಡಾ.ಅನಂತಕೃಷ್ಣ ಭಟ್‌, ಎಚ್‌.ಕೆ. ಪುರುಷೋತ್ತಮ, ಭುವನಾಭಿರಾಮ ಉಡುಪ ಮತ್ತಿತರರು ಇದ್ದರು. ಪ್ರದೀಪ್‌ ಕುಮಾರ್‌ ಕಲ್ಕೂರ ಮತ್ತು ಸುಧಾಕರ ರಾವ್‌ ಪೇಜಾವರ ನಿರೂಪಿಸಿದರು.ಉಡುಪಿ ಪರ್ಯಾಯ ವೇಳೆ ಅಯೋಧ್ಯೆ ರಾಮನ ಪ್ರತಿಷ್ಠೆ ಸಂತಸ ಸಂಗತಿ: ಪುತ್ತಿಗೆಶ್ರೀ

ಉಡುಪಿ ಕೃಷ್ಣ ಮಠದಲ್ಲಿ ನಮ್ಮ ಪರ್ಯಾಯದ ವೇಳೆಯಲ್ಲೇ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠೆ ನಡೆಯುತ್ತಿರುವುದು ಅತ್ಯಂತ ಸಂತಸ ಸಂಗತಿ ಎಂದು ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಕಂಬಳದ ‘ಮಂಜು ಪ್ರಾಸಾದ’ ನಿವಾಸದಲ್ಲಿ ಶನಿವಾರ ನಡೆದ ‘ಗುರುವಂದನೆ ಮತ್ತು ಪಟ್ಟದ ದೇವರ ತುಲಾಭಾರ’ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಅಯೋಧ್ಯೆ ಪ್ರಮುಖ ನಿರ್ಧಾರ ಉಡುಪಿಯಲ್ಲಿ: ಪುತ್ತಿಗೆ ಮಠದ ಎರಡನೇ ಪರ್ಯಾಯದ ವೇಳೆ ಅಯೋಧ್ಯೆಯಲ್ಲಿ ನೆಲ ಸ್ವಚ್ಛಗೊಳಿಸುವ ಕೆಲಸ ನಡೆದಿತ್ತು. ಈಗ ನಾಲ್ಕನೇ ಪರ್ಯಾಯದ ವೇಳೆಗೆ ಶ್ರೀರಾಮದ ಪ್ರತಿಷ್ಠೆ ನಡೆಯುತ್ತಿದೆ. ರಾಮಮಂದಿರಕ್ಕೆ ಸಂಬಂಧಿಸಿದ ಎಲ್ಲ ಪ್ರಮುಖ ನಿರ್ಧಾರಗಳು ಆಗಿದ್ದು ಉಡುಪಿಯಲ್ಲಿ. ಉಡುಪಿಯಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಮ್ಮೇಳನದಲ್ಲಿ ರಾಮಜನ್ಮಭೂಮಿ ವಿಮೋಚನೆ ಆಗಬೇಕು ಎಂದು ಘೋಷಣೆಯಾಗಿತ್ತು ಎಂದು ಶ್ರೀಗಳು ನೆನಪಿಸಿದರು.

ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ, ಎನ್‌ಆರ್‌ಐ ಫೋರಂ ಉಪಾಧ್ಯಕ್ಷೆ ಆರತಿ ಕೃಷ್ಣ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಪ್ರೊ.ಎಂ.ಬಿ.ಪುರಾಣಿಕ್‌, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ದಿವಾನ ಪ್ರಸನ್ನ ಇದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ