ಕಲೆಯ ಗ್ರಹಿಕೆಯ ಮೇಲೆ ನಿರ್ಬಂಧ ಹೇರುವುದು ಅಪಾಯ: ರಾಘವೇಂದ್ರರಾವ್‌

KannadaprabhaNewsNetwork |  
Published : Mar 01, 2024, 02:23 AM IST
ತುಮಕೂರು ವಿವಿಯ ಕನ್ನಡ ಹಾಗೂ ಇಂಗ್ಲಿಷ್ ವಿಭಾಗಗಳು ಜಂಟಿಯಾಗಿ ಗುರುವಾರ ಆಯೋಜಿಸಿದ್ದ ‘ಕಲೆಯ ಮೂಲಕ ಲೋಕಗ್ರಹಿಕೆ’ ಎಂಬ ಪರಿಕಲ್ಪನೆಯಲ್ಲಿ ‘ಸಹಿತ’ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ವಿಮರ್ಶಕ ಪ್ರೊ. ಎಚ್.ಎಸ್. ರಾಘವೇಂದ್ರರಾವ್, ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಪ್ರೊ.ಎಚ್.ಕೆ.ಶಿವಲಿಂಗಸ್ವಾಮಿ ಇದ್ದಾರೆ. | Kannada Prabha

ಸಾರಾಂಶ

ಕಲೆಯ ಗ್ರಹಿಕೆಯ ಮೇಲೆ ನಿರ್ಬಂಧಗಳನ್ನು ಹೇರುವುದು ಅಪಾಯಕಾರಿಯಾಗಿದೆ. ಗ್ರಹಿಕೆಯು ನಿಯಮ ಬದ್ಧವಾಗಿದ್ದರೂ ನಿರ್ಬಂಧ ರಹಿತವಾಗಿರಬೇಕು ಎಂದು ವಿಮರ್ಶಕ ಪ್ರೊ.ಎಚ್.ಎಸ್. ರಾಘವೇಂದ್ರರಾವ್‌ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಕಲೆಯ ಗ್ರಹಿಕೆಯ ಮೇಲೆ ನಿರ್ಬಂಧಗಳನ್ನು ಹೇರುವುದು ಅಪಾಯಕಾರಿಯಾಗಿದೆ. ಗ್ರಹಿಕೆಯು ನಿಯಮ ಬದ್ಧವಾಗಿದ್ದರೂ ನಿರ್ಬಂಧ ರಹಿತವಾಗಿರಬೇಕು ಎಂದು ವಿಮರ್ಶಕ ಪ್ರೊ.ಎಚ್.ಎಸ್. ರಾಘವೇಂದ್ರರಾವ್‌ ಹೇಳಿದರು.

ತುಮಕೂರು ವಿವಿಯ ಸ್ನಾತಕೋತ್ತರ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗವು ಜಂಟಿಯಾಗಿ ಗುರವಾರ ಆಯೋಜಿಸಿದ್ದ ‘ಕಲೆಯ ಮೂಲಕ ಲೋಕಗ್ರಹಿಕೆ’ ಎಂಬ ಪರಿಕಲ್ಪನೆಯಲ್ಲಿ ‘ಸಹಿತ’ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಂಸ್ಕೃತಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು, ಆನುವಂಶಿಕವಾಗಿ ಪಡೆಯಬಾರದು ಎಂದರು.

ಕಲಾ ಗ್ರಹಿಕೆ, ಸೃಷ್ಟಿ, ಪ್ರಕಾರ, ಪ್ರಚಾರ ಎಲ್ಲಿಯವರೆಗೂ ಅಧಿಕಾರದ ಒತ್ತಡದಲ್ಲಿ ಇರುತ್ತದೋ, ಅಲ್ಲಿಯವರೆಗೂ ಅಪಾಯವೇ ಆಗಿರುತ್ತದೆ.ಒತ್ತಡವನ್ನು ಮೀರಿ ವ್ಯಕ್ತಿಕಲೆಯನ್ನು ಗ್ರಹಿಸಿ, ಕಟ್ಟಬೇಕು. ಕಲೆ ದಾರಿ ತಪ್ಪಿಸಬಾರದು, ದಾರಿ ತೋರಬೇಕು. ವಿಷಯ ಗ್ರಹಿಕೆ ಯೋಚನೆಯಾಗಿ ಬದಲಾದಾಗ ಯಶಸ್ಸು ಕಾಣಬಹುದು ಎಂದರು.

ಗುರುಗಳನ್ನು, ಹಿರಿಯರನ್ನು, ಪುಸ್ತಕಗಳನ್ನು ಹೀರಬೇಕು, ಮೀರಬೇಕು. ಆಗ ಲೋಕ-ಕಲೆ ಎರಡೂ ಉಳಿಯುತ್ತದೆ. ಬದಲಾಗುತ್ತಿರುವ ಲೋಕಕ್ಕೆ ಬದಲಾದ ಕಲೆಯ ಅವಶ್ಯಕತೆ ಇದೆ. ನೋವುಗಳನ್ನು ನಲಿವಾಗಿ ಬದಲಾಯಿಸುವ ಜೀವನದ ಕಲೆಯ ಗ್ರಹಿಕೆಯಾಗಬೇಕಿದೆ ಎಂದರು.

ಕಲೆಗಳ ಮೂಲಕ ಲೋಕ ಗ್ರಹಿಕೆಯಾಗಬೇಕು. ಬಚ್ಚಿಟ್ಟುಕೊಂಡ ಲೋಕಗಳ ಅನಾವರಣ ಕಲಾವಿದನಿಂದ ಆಗಬೇಕು. ಶತಮಾನಗಳಿಂದ ನೂಕಲ್ಪಟ್ಟ ಮಹಿಳೆಯರ, ದಲಿತರ ಲೋಕ ಕಲೆಯಿಂದ ಅನಾವರಣವಾಯಿತು. ಕೇವಲ ಸಾಹಿತ್ಯವಷ್ಟೇ ಕಲೆಯಾಗಬಾರದು. ನೃತ್ಯ, ದೃಶ್ಯ, ಚಿತ್ರ, ಸಂಗೀತವೂ ವಿಭಿನ್ನ ಕಲೆಗಳು. ಕಲಾವಿದ ಮನುಷ್ಯನಾಗಿ ಲೋಕವನ್ನು ಅನುಭವಿಸುತ್ತಾನೆ. ಕಲೆಯನ್ನು ಸೃಷ್ಟಿಸುವಾಗ ಲೋಕದ ಅನುಭವ ಗ್ರಹಿಕೆಯಾಗುತ್ತದೆ ಎಂದು ತಿಳಿಸಿದರು.

ಕಲಾವಿದ ತನ್ನ ಲೋಕವನ್ನು ಕಲೆಯ ಮೂಲಕವೇ ಗ್ರಹಿಸಿಕೊಳ್ಳಬೇಕು. ಕವಿತೆ, ಕಾದಂಬರಿ ಬರೆಯುವ ಮೂಲಕ ಲೋಕದ ಗ್ರಹಿಕೆಯಾಗುತ್ತದೆ. ಪ್ರತಿಯೊಂದು ಕಲೆಯ ಅಂತರ ವಿಭಿನ್ನವಾಗಿರುತ್ತದೆ. ‘ಸಂಗೀತದ ರೆಕ್ಕೆ ಕವಿತೆಯ ಹಕ್ಕಿಗೆ ಬಂದಾಗ ಏನಾಗುತ್ತದೋ’ ಹಾಗೆಯೇ, ಕಲಾವಿದ ಕಟ್ಟುವುದು ಹೊಸದೇ ಲೋಕವನ್ನು. ಕಲಾವಿದನಿಂದ ಪಾತ್ರ ಸೃಷ್ಟಿಯಾಗುತ್ತದೆ, ಮುಂದುವರಿಯುತ್ತದೆ. ಇವೆಲ್ಲವೂ ಕಲಾವಿದನ ಗಹನವಾದ ಚಿಂತನೆಯಿಂದ ಸಾಧ್ಯ ಎಂದರು.

ನವಿಲು ನರ್ತಿಸುವುದು ಸಹಜ, ಪ್ರಕೃತಿ ನಿಯಮ. ನವಿಲಿನಂತೆ ನರ್ತಿಸುವುದೇ ಕಲೆ. ಕಲೆಯಿಂದ ಹುಟ್ಟಿದ ಲೋಕ ಕಲೆಯ ಮಾಧ್ಯಮದಿಂದ ನಿಯಂತ್ರಿಸಲ್ಪಟ್ಟಿರುತ್ತದೆ. ಕಲೆಯನ್ನು ಕಟ್ಟಿ ಕೊಡುವ ಕಲಾಕೃತಿ ವಿಭಿನ್ನವಾಗಿರುತ್ತದೆ. ಕೇವಲ ಭಾಷೆ ಬರುವುದರಿಂದ ಕವನ ಕವಿತೆ ಕಾದಂಬರಿ ಅರ್ಥವಾಗುತ್ತದೆ ಎಂದರೆ ಅದು ತಪ್ಪುಗ್ರಹಿಕೆ. ಕಲಾರಸಿಕ ಕಲೆಯನ್ನು ಕಬ್ಬಿನ ರಸದಂತೆ ಹೀರಿದಾಗ ಮಾತ್ರ ಕಲಾಗ್ರಹಿಕೆ ಸಂಪೂರ್ಣ ಎಂದರು.

ಶತಮಾನಗಳು ಕಳೆದಂತೆ ಕಲೆಯು ಸಮಯಾಧಾರಿತ, ವ್ಯಕ್ತಿಯಾಧಾರಿತ ಹಾಗೂ ಸಂಸ್ಕೃತಿಯಾಧಾರಿತವಾಗಿ ಬದಲಾಗುತ್ತದೆ. ಬದಲಾಗದ ಕಲೆ ಪೂರ್ವಗ್ರಹಕ್ಕೆ ಕಾರಣವಾಗಲಿದೆ ಎಂದರು.

ಎರಡನೆಯ ದಿನದ ಸಾಹಿತ್ಯೋತ್ಸವದಲ್ಲಿ ರಂಗಭೂಮಿ ಕಲಾವಿದರಾದ ಅಕ್ಷತಾ ಪಾಂಡವಪುರ ‘ಲೀಕ್‌ಔಟ್’ಕಥಾಭಿನಯ ಪ್ರಸ್ತುತಿಪಡಿಸಿದರು. ‘ಮಾನವಿಕಗಳ ಭವಿಷ್ಯ’ ಕುರಿತು ಬೆಂಗಳೂರು ಐಸೆಕ್‌ನ ಪ್ರಾಧ್ಯಾಪಕ ಪ್ರೊ. ಚಂದನ್‌ಗೌಡ, ಬೆಂಗಳೂರು ವಿವಿಯ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಪ್ರೊ. ಶ್ರೀ ಕೀರ್ತಿ ಮಾತು-ಸಂವಾದ ನಡೆಸಿಕೊಟ್ಟರು. ಮೌನೇಶ ಬಡಿಗೇರ ಅವರ ಉಪಸ್ಥಿತಿಯಲ್ಲಿ ಕಥೆಗಾರರಾದ ದಾದಾ ಪೀರ್‌ ಜೈಮನ್, ರವಿಕುಮಾರ್‌ ನೀಹ, ಮಿರ್ಜಾ ಬಶೀರ್‌ ಕಟ್ಟು-ಕಥೆ ನಡೆಸಿಕೊಟ್ಟರು. ಅನುವಾದಕಿ ವನಮಾಲಾ ವಿಶ್ವನಾಥ್ ಭಾಷಾಂತರ ಕುರಿತು ನುಡಿ-ಮಾರ್ನುಡಿ ವಿಷಯ ಪ್ರಸ್ತುತ ಪಡಿಸಿದರು.

ಸಾಹಿತ್ಯೋತ್ಸವದ ಸಂಘಟಕರಾದ ಪ್ರೊ.ಎಚ್.ಕೆ. ಶಿವಲಿಂಗಸ್ವಾಮಿ, ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು