ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರ ಜಾತಿಗಣತಿ ವರದಿಯನ್ನು ಸ್ವೀಕರಿಸುತ್ತಿದ್ದಂತೆಯೇ ಮುಂದುವರೆದ ವರ್ಗಗಳ ವಿರೋಧ ವ್ಯಕ್ತವಾಗಿದ್ದು, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಒಕ್ಕಲಿಗ ಮೀಸಲಾತಿ ಹೋರಾಟ ವೇದಿಕೆಯು ಈ ವರದಿಯ ಜಾರಿಗೆ ಮುಂದಾದರೆ ಹೋರಾಟ ನಡೆಸುವ ಸುಳಿವು ನೀಡಿವೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಒಂಬತ್ತು ವರ್ಷ ಹಳೆಯದಾದ ಈ ವರದಿ ಅವೈಜ್ಞಾನಿಕವಾಗಿರುವ ಕಾರಣ ಮೂಲೆಗೆ ಹಾಕಬೇಕು. ಸರ್ಕಾರ ಇನ್ನೊಮ್ಮೆ ವೈಜ್ಞಾನಿಕ ಗಣತಿ ಮಾಡಿಸಬೇಕು.
ಅಲ್ಲದೇ, ಮಹಾಸಭಾ ವತಿಯಿಂದಲೇ ವೀರಶೈವ ಲಿಂಗಾಯತ ಸಮುದಾಯದ ಜಾತಿಗಣತಿ ಮಾಡಿಸುವ ಆಲೋಚನೆ ಇದೆ ಎಂದರು.ವೀರಶೈವ ಲಿಂಗಾಯತ ಮತ್ತು ಉಪ ಪಂಗಡಗಳು ಸೇರಿ ಜನಸಂಖ್ಯೆ 2 ಕೋಟಿಗಿಂತ ಕಡಿಮೆ ಇಲ್ಲ. ನಮ್ಮ ಸಮುದಾಯದ ಜನಸಂಖ್ಯೆ ನಮಗೆ ಗೊತ್ತಿದೆ. ಆದರೆ, ರಾಜ್ಯದ ಮೂರು ಸಮುದಾಯಗಳು ಸೇರಿ ಒಂದೂವರೆ ಕೋಟಿಗಿಂತ ಕಡಿಮೆ ಎಂದು ತೋರಿಸಲಾಗಿದೆ ಎಂಬ ಮಾಹಿತಿ ಇದೆ.
ಹೆಗ್ಡೆ ಸಲ್ಲಿಸಿರುವ ವರದಿ ಅವೈಜ್ಞಾನಿಕ ಎಂಬುದನ್ನು ಸಾಬೀತು ಮಾಡುತ್ತೇವೆ. ನಾವು ಸುಮ್ಮನೆ ಕೂರುವುದಿಲ್ಲ. ಸರ್ಕಾರ ಇನ್ನೊಮ್ಮೆ ವೈಜ್ಞಾನಿಕ ಗಣತಿ ಮಾಡಲಿ ಎಂದು ಶಿವಶಂಕರಪ್ಪ ಆಗ್ರಹಿಸಿದರು.ಬೇರೆ ಸಮುದಾಯಗಳ ಸಂಖ್ಯೆ ಬಗ್ಗೆ ನಮಗೆ ತಕರಾರು ಇಲ್ಲ.
ವೈಜ್ಞಾನಿಕ ವರದಿಯಲ್ಲಿ ಆ ಸಂಖ್ಯೆ ಬಂದರೆ ಒಪ್ಪುತ್ತೇವೆ. ನಮ್ಮ ಸಮುದಾಯದ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ತೋರಿಸುತ್ತಿರಬಹುದು. ನಮ್ಮ ವಿರುದ್ಧ ಬೇರೆಯವರನ್ನು ಛೂ ಬಿಡುವ ಪ್ರಯತ್ನ ನಡೆದಿದೆ. ಇದು ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಹೇಳಿದರು.
ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ವಿರೋಧ: ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಗಾ.ನಂ.ಶ್ರೀಕಂಠಯ್ಯ, ಗಣತಿ ಮಾಡಲು ಎಲ್ಲಾ ಮನೆಗಳಿಗೆ ಭೇಟಿ ನೀಡಿಲ್ಲ. ಅವೈಜ್ಞಾನಿಕವಾಗಿರುವ ಕಾರಣ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಕುರಿತು ಸಮುದಾಯದ ಮುಖಂಡರು, ಮಠಾಧೀಶರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಜಾತಿಗಣತಿ ವರದಿ ಸ್ವೀಕರಿಸಬಾರದು ಎಂದು ಮುಖ್ಯಮಂತ್ರಿಯವರಲ್ಲಿ ಈ ಹಿಂದೆಯೇ ಒತ್ತಾಯಿಸಲಾಗಿತ್ತು. ಅಲ್ಲದೇ, ಒಕ್ಕಲಿಗ ಸಮುದಾಯದ ಉಪ ಪಂಗಡಗಳನ್ನು ಸೇರಿಸಿ ಗಣತಿ ಮಾಡಬೇಕು ಎಂದು ನಾವು ಮಾಡಿದ್ದ ಮನವಿಗೆ ಆಯೋಗದಿಂದ ಸ್ಪಂದನೆಯೇ ಸಿಕ್ಕಿಲ್ಲ.
ಇಂದು ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿದೆ. ಆದರೆ, 9 ವರ್ಷಗಳ ಹಿಂದೆ ಸುಮಾರು 6 ಕೋಟಿ ಇರುವಾಗ ನಡೆಸಿದ ಗಣತಿಯ ವಿವರಗಳನ್ನು ಈಗ ಬಹಿರಂಗಪಡಿಸಲಾಗಿದೆ. ಹೀಗಾಗಿ, ಈ ವರದಿಯನ್ನು ಒಪ್ಪುವುದಿಲ್ಲ ಎಂದು ಶ್ರೀಕಂಠಯ್ಯ ಹೇಳಿದರು.
ಇನ್ನೊಮ್ಮೆ ವೈಜ್ಞಾನಿಕ ರೀತಿ ಗಣತಿ ನಡೆಸಿ: ಒಂಬತ್ತು ವರ್ಷ ಹಳೆಯದಾದ ಈ ವರದಿ ಅವೈಜ್ಞಾನಿಕವಾಗಿರುವ ಕಾರಣ ಮೂಲೆಗೆ ಹಾಕಬೇಕು. ಸರ್ಕಾರ ಇನ್ನೊಮ್ಮೆ ವೈಜ್ಞಾನಿಕ ಗಣತಿ ಮಾಡಿಸಬೇಕು. ಅಲ್ಲದೇ, ಮಹಾಸಭಾ ವತಿಯಿಂದಲೇ ವೀರಶೈವ ಲಿಂಗಾಯತ ಸಮುದಾಯದ ಜಾತಿಗಣತಿ ಮಾಡಿಸುವ ಆಲೋಚನೆ ಇದೆ.- ಶಾಮನೂರು ಶಿವಶಂಕರಪ್ಪ, ವೀರಶೈವ ಮಹಾಸಭಾ ಅಧ್ಯಕ್ಷ
ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ: ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಸಿದ್ದಾರೆ. ಅದನ್ನು ನಾವು ಸ್ವೀಕರಿಸಿದ್ದೇವೆ. ಆ ವರದಿಯಲ್ಲೇನಿದೆ ಎಂಬ ಕುರಿತು ಸಚಿವ ಸಂಪುಟದಲ್ಲಿ ವಿಸ್ತೃತವಾಗಿ ಚರ್ಚೆ ಮಾಡುತ್ತೇವೆ. ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ.-ಸಿದ್ದರಾಮಯ್ಯ ಮುಖ್ಯಮಂತ್ರಿ