ಹಳಕಟ್ಟಿ ವ್ಯಕ್ತಿಯಲ್ಲ, ಲಿಂಗಾಯತರ ಬಹುದೊಡ್ಡ ಶಕ್ತಿ: ಪ್ರೊ.ಆರ್ .ಎಚ್. ತಿಗಡಿ

KannadaprabhaNewsNetwork |  
Published : Jul 06, 2024, 12:45 AM IST
ಡಾ.ಫ.ಗು. ಹಳಕಟ್ಟಿಯವರ 144ನೇ ಜಯಂತಿ, ವಚನ ಸಂರಕ್ಷಣಾ ದಿನ, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಡಾ.ಫ.ಗು. ಹಳಕಟ್ಟಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ 144ನೇ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಭೈರನಹಟ್ಟಿ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಫ.ಗು. ಹಳಕಟ್ಟಿಯವರ 144ನೇ ಜಯಂತಿ ಅಂಗವಾಗಿ ನಡೆದ ವಚನ ಸಂರಕ್ಷಣೆ ದಿನ ಹಾಗೂ ಏಕೀಕರಣ ಯೋಧರ ಯಶೋಗಾಥೆ-16 ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬಾದಾಮಿ

ವಿಶ್ವ ಸಂಸ್ಕೃತಿಗೆ ವಚನ ಸಂಸ್ಕೃತಿ ದಾರಿ ದೀಪವಾಗಿದೆ. 12ನೇ ಶತಮಾನದ ಬಸವಾದಿ ಶಿವಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆ ಸರ್ವಕಾಲಿಕ. ಅಂತಹ ಮಹನೀಯರ ನುಡಿಗಳನ್ನು ಸಂರಕ್ಷಣೆ ಮಾಡಿದ ಕೀರ್ತಿ ಡಾ.ಫ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದು ಹಿರಿಯ ಉಪನ್ಯಾಸಕ ಪ್ರೊ.ಆರ್ . ಎಚ್. ತಿಗಡಿ ಬಣ್ಣಿಸಿದರು.

ಭೈರನಹಟ್ಟಿ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಫ.ಗು. ಹಳಕಟ್ಟಿಯವರ 144ನೇ ಜಯಂತಿ ಅಂಗವಾಗಿ ನಡೆದ ವಚನ ಸಂರಕ್ಷಣೆ ದಿನ ಹಾಗೂ ಏಕೀಕರಣ ಯೋಧರ ಯಶೋಗಾಥೆ-16 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳಕಟ್ಟಿಯವರ ಜೀವನವೇ ನಮಗೆಲ್ಲ ಆದರ್ಶ. ಕನ್ನಡ ಮತ್ತು ಕರ್ನಾಟಕವನ್ನು ಉಸಿರಾಗಿಸಿಕೊಂಡಿದ್ದ ಅವರು, ಜೀವನ ಮೌಲ್ಯಗಳನ್ನು ತಿಳಿಸುವ ಶರಣರ ವಚನಗಳು ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯವೆಂಬ ಅನರ್ಘ್ಯ ರತ್ನವನ್ನು ಸಂಶೋಧಿಸಿ ಸಂಪಾದಿಸಿದ ಕೀರ್ತಿ ಡಾ. ಹಳಕಟ್ಟಿಯವರಿಗೆ ಸಲ್ಲುತ್ತದೆ. 12ನೇ ಶತಮಾನದ ನಂತರ ವಚನ ಸಾಹಿತ್ಯಕ್ಕೆ ಪುನರ್ ಚೈತನ್ಯ ತಂದುಕೊಟ್ಟ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ಒಂದು ವಿಶ್ವವಿದ್ಯಾಲಯ ಮಾಡದ ಕೆಲಸವನ್ನು ಏಕಾಂಗಿಯಾಗಿ ಸಾಧಿಸಿದ ಅವರು, ಒಂದು ವ್ಯಕ್ತಿಯಾಗಿರದೆ ಲಿಂಗಾಯತರ ಬಹುದೊಡ್ಡ ಶಕ್ತಿಯಾಗಿದ್ದರು ಎಂದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶಾಂತಲಿಂಗ ಸ್ವಾಮೀಜಿ, ಮನೆ-ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ವಚನ ತಾಡೋಲೆಗಳನ್ನು ಹುಡುಕಿ ತಂದು ಸುಮಾರು 250 ವಚನಕಾರರ ಸಾಹಿತ್ಯ ಸರ್ವಕಾಲಿಕವಾಗುವಲ್ಲಿ ಹಳಕಟ್ಟಿಯವರ ಕೊಡುಗೆ ಅಪಾರವಾಗಿದೆ. ತಮ್ಮ ಮನೆ ಮಾರಿ ಹಿತಚಿಂತಕ ಮುದ್ರಣಾಲಯ ಆರಂಭಿಸಿ 1923ರಲ್ಲಿ ವಚನ ಶಾಸ್ರ್ತಸಾರ ಭಾಗ-1 ಪುಸ್ತಕವನ್ನು ಪ್ರಕಟಿಸಿ ಇಂದಿಗೆ ನೂರಾಒಂದು ವಸಂತಗಳು ಪೂರೈಸಿವೆ. ನಂತರ ನವಕರ್ನಾಟಕ ಎಂಬ ಪತ್ರಿಕೆಯ ಮೂಲಕ ಕನ್ನಡ ಜಾಗೃತಿ ಮೂಡಿಸಿ ಕನ್ನಡ ಕಟ್ಟುವ ಕೈಂಕರ್ಯವನ್ನು ಮಾಡಿದ್ದಾರೆ ಎಂದು ಹೇಳಿದರು.

ನಿವೃತ್ತ ಮುಖ್ಯಶಿಕ್ಷಕ ವೀರಯ್ಯ ಸಾಲಿಮಠ, ಮಹಾಂತೇಶ ಸಾಲಿಮಠ ಸೃತಿದಂತೆ ಪ್ರಮುಖರು ಉಪಸ್ಥಿತರಿದ್ದರು. ಶ್ರೀಮಠದ ವ್ಯವಸ್ಥಾಪಕ ಮಹಾಂತೇಶ ಹಿರೇಮಠ ನಿರೂಪಿಸಿದರು. ಬಸವರಾಜ ಮನೆನಕೊಪ್ಪ ಸ್ವಾಗತಿಸಿ, ವಂದಿಸಿದರು.ವಚನ ಚಳವಳಿಯ ಮೂಲಕ 12ನೇ ಶತಮಾನದಲ್ಲಿ ಲಿಂಗಾಯತ ಪರಂಪರೆ ಹುಟ್ಟುಹಾಕಿದ ಬಸವಣ್ಣನವರ ಕುರಿತಾಗಿ ಕರ್ನಾಟಕ ಸರ್ಕಾರ ಪ್ರಕಟಿಸಿರುವ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಲಿಂಗಾಯತ ಎಂದು ಬದಲಾವಣೆ ಮಾಡಿದ್ದು ಅತ್ಯಂತ ಮೌಲಿಕ ಹಾಗೂ ನ್ಯಾಯ ಸಮ್ಮತವಾಗಿದೆ. ಪ್ರಸ್ತುತ ಪಾಠದಲ್ಲಿ ಹಿಂದಿನ ತಪ್ಪು ಸರಿಪಡಿಸಿ ಇತಿಹಾಸಕ್ಕೆ ಚ್ಯುತಿಬಾರದಂತೆ ನೈಜ ಇತಿಹಾಸ ಪ್ರಕಟಿಸಲಾಗಿದೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಸರ್ಕಾರ ಇದನ್ನು ಬದಲಾವಣೆ ಮಾಡಬಾರದು.

-ಶಾಂತಲಿಂಗ ಶ್ರೀಗಳು ಭೈರನಹಟ್ಟಿ-ಶಿರೋಳ ಮಠ

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ