ಠಾಣೇಲಿ ಠಿಕಾಣಿ ಹಾಕದೆ ಜನರ ಸಮಸ್ಯೆಗೆ ಕಿವಿಯಾಗಿ

KannadaprabhaNewsNetwork | Published : Jul 10, 2024 12:35 AM

ಸಾರಾಂಶ

ಕಲಬುರಗಿ ಜಿಲ್ಲೆಯ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಅಡ್ಡೂರು ಶ್ರೀನಿವಾಸುಲು ಅವರು ಠಾಣೆಯಲ್ಲಿ ಠಿಕಾಣಿ ಹೂಡಿದ್ರೆ ಸಾಲದು, ಜನರ ಮಧ್ಯೆ ಸುತ್ತಾಡಿ, ಅವರ ಕುಂದುಕೊರತೆಗೆ ಕಿವಿಯಾಗಿ, ಪರಿಹಾರ ಹುಡುಕಿ ಎಂದು ಜಿಲ್ಲೆಯ ಎಲ್ಲಾ ಪೊಲೀಸ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಅಡ್ಡೂರು ಶ್ರೀನಿವಾಸುಲು ಅವರು ಠಾಣೆಯಲ್ಲಿ ಠಿಕಾಣಿ ಹೂಡಿದ್ರೆ ಸಾಲದು, ಜನರ ಮಧ್ಯೆ ಸುತ್ತಾಡಿ, ಅವರ ಕುಂದುಕೊರತೆಗೆ ಕಿವಿಯಾಗಿ, ಪರಿಹಾರ ಹುಡುಕಿ ಎಂದು ಜಿಲ್ಲೆಯ ಎಲ್ಲಾ ಪೊಲೀಸ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಎಸ್ಪಿಯಾಗಿ ಸೋಮವಾರವಷ್ಟೇ ಅಧಿಕಾರ ವಹಿಸಿಕೊಂಡಿದ್ದ ಶ್ರೀನಿವಾಸುಲು ಅವರು ತಮ್ಮ ಬಿಡುವಿಲ್ಲದ ಕಚೇರಿ ಕೆಲಸಗಳ ನಡುವೆಯೇ ಕನ್ನಡಪ್ರಭ ಜೊತೆ ಮಾತನಾಡಿ, ಕಾನೂನು ಸುವ್ಯವಸ್ಥೆ ಹಾಗೂ ಜಿಲ್ಲಾ ಅಭಿವೃದ್ಧಿಗೆ ನೇರ ಸಂಬಂಧವಿದೆ, ಜನಸ್ನೇಹಿ ಪೊಲೀಸಿಂಗ್‌ ಅಂದ್ರೆ ಜನರ ಕುಂದುಕೊರತೆ ಆಲಿಸಿ ಪರಿಹಾರಕ್ಕೆ ಮುಂದಾಗೋದೇ ತಾನೆ? ಎಂದರಲ್ಲದೆ, ಪೊಲೀಸ್‌ ಅಧಿಕಾರಿಗಳಂದ್ರೆ ಠಾಣೆಯಲ್ಲೇ ಕುಳಿತಿಕೊಳ್ಳೋದಲ್ಲ, ಸುತ್ತಾಡಬೇಕು, ಸಮಸ್ಯೆ ಗ್ರಹಿಸಬೇಕು. ಸಾರ್ವಜನಿಕರ ಕುಂದುಕೊರತೆಗೆ ಕಿವಿಯಾಗಿ ಕಾನೂನು ರೀತ್ಯಾ ಪರಿಹಾರ ಒದಗಿಸೋದಕ್ಕೆ ಪ್ರಥಮಾದ್ಯತೆ ನೀಡುವಂತಾಗಬೇಕು. ಅಂದಾಗ ಮಾತ್ರ ಪೊಲೀಸ್‌ ಬಲದ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚುತ್ತದೆ, ಗೌರವ ಬಾವನೆ ಮೂಡುತ್ತದೆ ಎಂದು ಹೇಳಿದ್ದಾರೆ.

ಕುಂದುಕೊರತೆ ಆಲಿಕೆ- ಪರಿಹಾರಕ್ಕೆ ಆದ್ಯತೆ: ಜಿಲಾದ್ಯಂತ ತಾವು ಜನರ ಕುಂದುಕೊರತೆ ಆಲಿಕೆಗೆ ಆದ್ಯತೆ ನೀಡೋದಾಗಿ ಹೇಳಿರುವ ಶ್ರೀನಿವಾಸುಲು, ಜನರ ಸಮಸ್ಯೆ, ಗೋಳಿಗೆ ತಾಳ್ಮೆಯಿಂದ ಕಿವಿಯಾದಾಗ ಮಾತ್ರ ಪರಿಹಾರದ ದಾರಿ ಸಿಗುತ್ತದೆ. ಕಾನೂನು ರೀತ್ಯಾ ಪರಿಹಾರ ನೀಡುವ ಮೂಲಕ ಪೊಲೀಸರು ಜಿಲ್ಲೆಯ ನೊಂದ ಜನರಿಗೆ ನೆರವಿನ ಹಸ್ತ ಚಾಚುವ ಅಗತ್ಯವಿದೆ ಎಂದು ಜನಸ್ನೇಹಿ ಪೊಲೀಸಿಂಗ್‌ನ ಪ್ರಮುಖ ಗುಣಲಕ್ಷವೇ ಇದಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಾದ್ಯಂತ ಯಾವುದೇ ಠಾಣೆಗೆ ನೊಂದವರು ಬಂದರೆ ಅವರಿಗೆ ತಕ್ಷಣ ಸ್ಪಂದಿಸಬೇಕು. ಸುಮ್ಮನೆ ಅವರನ್ನು ಮಾತನಾಡಿಸಿ ಹಾಗೇ ಕಳುಹಿಸುವಂತಾಗಬಾರದು. ಇಂತಹ ಯಾವುದೇ ಪ್ರರಣ ತಮ್ಮ ಗಮನಕ್ಕೆ ಬಂದಲ್ಲಿ ಸಹಿಸಲಾಗದು. ಠಾಣೆಗಳಲ್ಲಿ ನೊಂದವರ ಕಣ್ಣೀರು ಒರೆಸಲು ಕಾನೂನು ರೀತ್ಯಾ ಕ್ರಮಗಳಾಗಬೇಕೇ ವಿನಹಃ ಕಾನೂನು ಹೊರತು ಪಡಿಸಿದ ಯಾವುದೇ ಕ್ರಮಗಳಿಗೂ ತಾವು ಸಹಿಸೋದಿಲ್ಲವೆಂದು ಖಡಕ್‌ ಎಚ್ಚರಿಕೆ ಎಸ್ಪಿಯವರು ತಮ್ಮ ಇಲಾಖೆಯ ಸಿಬ್ಬಂದಿಗೆ ರವಾನಿಸಿದರು.

ನೊಂವರು, ಬೆಂದವರೇ ಠಾಣೆಗೆ ಬರೋದು ಅನ್ನೋದನ್ನ ಯಾರೂ ಮರೆಯಬಾರದು. ಅವರ ನೋವೇ ಅವರನ್ನ ನಮ್ಮಲ್ಲಿಗೆ ಎಳೆದು ತಂದಿರುತ್ತದೆ. ಹಾಗೇ ನೋವು ಹೊತ್ತು ಬಂದವರಿಗೆ ಸಮಾಧಾನ ಮಾಡುವ, ಅವರ ಸಮಸ್ಯೆ ಆಲಿಸಿ ಕಾನೂನು ಕ್ರಮಕ್ಕೆ ಮುಂದಾಗಲೇಬೇಕು. ಹಾಗೆ ಮಾಡದೆ ಸುಕಾಸುಮ್ಮನೆ ಇರುವಂತಹ ಪ್ರಕರಣಗಳೇನಾದರೂ ಗಮನಕ್ಕೆ ಬಂದಲ್ಲಿ ಅಂತಹ ಪ್ರಕರಣಗಳಲ್ಲಿ ತಮ್ಮದು ಝೀರೋ ಟಾಲರನ್ಸ್‌ ಎಂದು ಎಸ್ಪಿಯವರು ಠಾಣಾ ಹಂತದಲ್ಲಿನ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.ಗುಡ್‌ ಮಾರ್ನಿಂಗ್‌ ಬೀಟ್‌

ಜಿಲ್ಲಾದ್ಯಂತ ಪೊಲೀಸ್‌ ಗಸ್ತು ಚುರುಕು ಮಾಡಲು ಕ್ರಮ ಜರುಗಿಸಲಾಗುತ್ತದೆ. ರಾತ್ರಿ ಗಸ್ತು ಹಾಗೂ ಬೆಳಗಿನ ಗುಡ್ ಮಾರ್ನಿಂಗ್‌ ಗಸ್ತು ಕಟ್ಟುನಿಟ್ಟು ನಡೆಸಲು ಅಗತ್ಯ ಕ್ರಮ ಜರುಗಿಸುವೆ. ಗ್ರಾಮೀಣ ಹೋಬಳಿ, ಹಳ್ಳಿಗಳಲ್ಲಿ ಕಳವಿನ ಪ್ರಕರಣಗಳು ಆಗದಂತೆ ಅಗತ್ಯ ಗಸ್ತು ಕಮಗಳನ್ನು ಕೈಗೊಳ್ಳೋದರ ಜೊತೆಗೇ ಪೊಲೀಸಿಂಗ್‌ ಕೂಡಾ ಬಿಗಿಗೊಳಿಸಲು ಸರ್ವಕ್ರಮ.ನೊಂದು ಬಂದವರೊಂದಿಗೆ ಸಂವೇದನಶೀಲರಾಗಿ

ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆಯ ಆಧುನೀಕರಣ, ಪರಿಕರಗಳು, ವಾಹನ ಸವಲತ್ತು ಇತ್ಯಾದಿಗಳು ನಿರಂತರ ನಡೆದಿವೆ. ಪೊಲೀಸರು ಇಲ್ಲಿ ನೊಂದವರ ಕಮ್ಣೀರು ಒರೆಸಬೇಕಾಗಿದೆ. ಅದಕ್ಕಾಗಿ ಬರುವ ದಿನಗಳಲ್ಲಿ ತಾವು ಇಲ್ಲಿರೋವರೆಗೂ ಪೊಲೀಸರಿಗೆ ಸಂವೇದನಶೀಲರಾಗಿ ನೊಂದವರೊಂದಿಗೆ ಸ್ಪಂದಿಸುವ ಪಾಠ ಹೇಳುವ ಸಂಕಲ್ಪ ಶ್ರೀನಿವಾಸುಲು ಮಾಡಿದ್ದಾರೆ.

ಜನಸ್ನೇಹಿ ಪೊಲೀಸಿಂಗ್‌ಗೆ ಎಸ್ಪಿ ಶ್ರೀನಿವಾಸುಲು ನವ ಸೂತ್ರಗಳು

1ಸಾರ್ವಜನಿಕರ ಕುಂದುಕೊರತೆ ಆಲಿಕೆ- ಕಾನೂನು ಕ್ರಮಕ್ಕೆ ಆದ್ಯತೆ

2ಅಧಿಕಾರಿಗಳು ಠಾಣೆಲೇ ಕುಳಿತುಕೊಳ್ಳದೆ ಹೊರಗೆ ಜನರ ನಡುವೆ ಸುತ್ತಾಡುವಂತೆ ಮಾಡೋದು

3ರಾತ್ರಿ ಗಸ್ತು, ಗುಡ್‌ ಮಾರ್ನಿಂಗ್‌ ಬೀಟ್‌, ಹೋಬಳಿ ಪೊಲೀಸಿಂಗ್‌ಗೆ ಒತ್ತು

4ಪೊಲೀಸ್‌ ಠಾಣೆಗೆ ನೊಂದವರು ಯಾರೇ ಬಂದರೂ ತಕ್ಷಣ ಸ್ಪಂದನೆ ಸಿಗೋ ಹಾಗೆ ಕ್ರಮ

5ಪಿಸ್‌ಐ, ಸಿಪಿಐ ಠಾಣೆಲೇ ಕೂಡ್ರದೆ ಸುತ್ತಾಡಿ ಜನರ ಸಮಸ್ಯೆ ಗ್ರಹಿಕೆ- ಪರಿಹಾರಕ್ಕೆ ಮುಂದಾಗಿ

6ಸಮಸ್ಯೆಯ ತೀವ್ರತೆ ಆಧರಿಸಿ ಎಸ್ಪಿಯಿಂದಲೂ ಕ್ಷೇತ್ರ ಸಂಚಾರಕ್ಕೆ ಆದ್ಯತೆ

7ನೊಂದವರು ಠಾಣೆಗೆ ಬಂದಾಗ ಅಧಿಕಾರಿ ಇಲ್ಲವೆಂದು ಹೇಳದೆ ಲಭ್ಯವಿರೋ ಸಿಬ್ಬಂದಿ ಸ್ಪಂದನೆ ಕಡ್ಡಾಯ

8ಅಧಿಕಾರಿಗಳು ಬಂದಾಕ್ಷಣ ಠಾಣೆಗೆ ಬಂದು ಹೋದವರ ಮಾಹಿತಿ ತಿಳಿಸಿ ಸಂಪರ್ಕಿಸಲು ಸೂಚನೆ

9ಜನರ ಸಮಸ್ಯೆಗೆ ಸ್ಪಂದಿಸುವ ಜೋಶ್‌ನಲ್ಲಿ ಕಾನೂನು ಬಿಟ್ಟು ಕ್ರಮ ಕೈಗೊಳ್ಳೋಹಾಗಿಲ್ಲ

Share this article