ಕನ್ನಡಪ್ರಭ ವಾರ್ತೆ ನ್ಯಾಮತಿ
ವ್ಯಕ್ತಿಯ ವ್ಯಕ್ತಿತ್ವವನ್ನು ಶ್ರೀಮಂತಿಕೆಯಿಂದ ಅಳೆಯುವುದು ತಪ್ಪು, ಪ್ರತಿಯೊಬ್ಬರೂ ಅಂತರಂಗದ ಧ್ವನಿಗೆ ಓಗೊಟ್ಟು ಧರ್ಮ ಮಾರ್ಗದಲ್ಲಿ ನಡೆದರೆ ನೆಮ್ಮದಿಯ ಬದುಕು ಸಾಗಿಸಬಹುದು ಎಂದು ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಹಳೇಮಳಲಿ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿಯ ನೂತನ ದೇಗುಲ ಪ್ರವೇಶೋತ್ಸವ, ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ಗೋಪುರ ಕಳಸಾರೋಹಣ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮಸಭೆ ಸಾನ್ನಿಧ್ಯ ವಹಿಸಿ ಮಾತನಾಡಿ ಭಕ್ತರು ದೇಗುಲದ ಗರ್ಭಗುಡಿಯ ಪವಿತ್ರ ತಾಣವಾಗಿ ಭಾವಿಸಿದಂತೆ ತನ್ನ ಮನಸ್ಸು ಶುದ್ಧವಾಗಿಟ್ಟುಕೊಳ್ಳಬೇಕು. ದೇವರ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಎಂಬುದು ತಪ್ಪು ಕಲ್ಪನೆ, ಭಕ್ತರಲ್ಲಿ ಭಕ್ತಿ ಪ್ರತಿಷ್ಠಾಪನೆಯಾದಾಗ ಮಾತ್ರ ಅದಕ್ಕೆ ನಿಜವಾದ ಅರ್ಥ ಬರುವುದು. ಮನೆಯ ಹೆಣ್ಣು ಮಕ್ಕಳು ಪೊಲೀಸ್ ಠಾಣೆ ಮೆಟ್ಟಿಲು ಹತ್ತಬಾರದು, ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ತಮ್ಮ ತಮ್ಮ ಸಮಸ್ಯೆಗಳ ಬಗೆಹರಿಸಿಕೊಳ್ಳಬೇಕು. ಮನುಷ್ಯನಿಗೆ ಹಣದ ಮೇಲಿನ ವ್ಯಾಮೋಹ ಕಡಿಮೆಯಾಗಬೇಕು. ಗಳಿಸಿದ ಸಂಪತ್ತು ಧರ್ಮ ಕಾರ್ಯಗಳಿಗೆ ವಿನಿಯೋಗಿಸಿಕೊಳ್ಳುವ ವಿವೇಚನೆ ಮೈಗೂಡಿಸಿಕೊಳ್ಳಬೇಕು ಎಂದರು.
ನಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತ ಭೀಷ್ಮ ಸ್ವಾಮೀಜಿ, ಶಾಸಕ ಡಿ.ಜಿ.ಶಾಂತನಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡೇರಿ ಜಿ.ವಿಶ್ವನಾಥ, ಸಾ.ವೀ.ಸಮಾಜದ ಹೊನ್ನಾಳಿ ಘಟಕದ ಅಧ್ಯಕ್ಷ ಎಚ್.ಎ.ಹುಣಸಘಟ್ಟ ಗದ್ಧಿಗೇಶ್, ಟಿ.ಗೋಪಗೊಂಡನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಚಂದ್ರಮತಿ ಜಿ.ಪಿ.ಮಲ್ಲೇಶಪ್ಪ, ಶಿಕ್ಷಕ ಕರಿಬಸಪ್ಪ, ಕವಿತಾ ಮಾತನಾಡಿದರು.ಬಿಜೆಪಿ ಮಾಜಿ ಅಧ್ಯಕ್ಷ ಅರಕೆರೆ ಎ.ಬಿ.ಹನುಮಂತಪ್ಪ, ಡಿ.ಎಸ್.ಪ್ರದೀಪಗೌಡ, ಸಾ.ವೀ.ಸಮಾಜದ ನ್ಯಾಮತಿ ಘಟಕದ ಅಧ್ಯಕ್ಷ ಕೋಡಿಕೊಪ್ಪದ ಶಿವಣ್ಣ, ಹಳೇ ಮಳಲಿ ಗ್ರಾಮದ ಹಿರಿಯ ಮುಖಂಡರಾದ ಮಾವಿನಕೋಟಿ ಮಂಜಪ್ಪ, ಎ.ನಾಗರಾಜ್, ಪಿ.ಮಂಜಪ್ಪ, ಚಂದ್ರಪ್ಪ, ಮಲ್ಲೇಶಪ್ಪ, ಷಡಾಕ್ಷರಿ, ಎಂ.ಗಣೇಶ್, ನವೀನ್, ಮಲ್ಲಿಕಾರ್ಜುನ, ರಾಜಪ್ಪ, ರಮೇಶ್ ಪಾಟೀಲ್, ಎಚ್.ಆರ್ ಮಲ್ಲೇಶಪ್ಪ, ರಾಜು ಸೇರಿ ಮತ್ತಿತರರಿದ್ದರು.