ಜನರಲ್ಲಿ ಸಾಹಿತ್ಯ ಪ್ರಜ್ಞೆ ಕ್ಷೀಣಿಸಿ, ಕ್ರೌರ್ಯ ಹೆಚ್ಚುತ್ತಿದೆ: ಕಲ್ಕಟ್ಟೆ ನಾಗರಾಜರಾವ್ ವಿಷಾದ

KannadaprabhaNewsNetwork | Published : Jul 6, 2024 12:49 AM

ಸಾರಾಂಶ

ನರಸಿಂಹರಾಜಪುರ, ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಸಾಹಿತ್ಯ ಪ್ರಜ್ಞೆ ಕಡಿಮೆಯಾಗಿ ಕ್ರೌರ್ಯ ಪ್ರಜ್ಞೆ ಹೆಚ್ಚಾಗುತ್ತಿದೆ ಎಂದು ಚಿಕ್ಕಮಗಳೂರಿನ ಸಾಹಿತಿ, ಪ್ರಾಚಾರ್ಯ ಕಲ್ಕಟ್ಟೆ ನಾಗರಾಜರಾವ್ ವಿಷಾದ ವ್ಯಕ್ತಪಡಿಸಿದರು

ತಾ.ಕಸಾಪ ಮಹಿಳಾ ಘಟಕದ ಆಶ್ರಯದಲ್ಲಿ ಮುಂಗಾರು ಸಾಹಿತ್ಯ ಸಂಭ್ರಮ ಕಾರ್ಯಕ್ರಮ । ಪುಸ್ತಕ ಬಿಡುಗಡೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಸಾಹಿತ್ಯ ಪ್ರಜ್ಞೆ ಕಡಿಮೆಯಾಗಿ ಕ್ರೌರ್ಯ ಪ್ರಜ್ಞೆ ಹೆಚ್ಚಾಗುತ್ತಿದೆ ಎಂದು ಚಿಕ್ಕಮಗಳೂರಿನ ಸಾಹಿತಿ, ಪ್ರಾಚಾರ್ಯ ಕಲ್ಕಟ್ಟೆ ನಾಗರಾಜರಾವ್ ವಿಷಾದ ವ್ಯಕ್ತಪಡಿಸಿದರು.

ಶುಕ್ರವಾರ ತಾಲೂಕು ಕಸಾಪ ಮಹಿಳಾ ಘಟಕ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಗಾರು ಸಾಹಿತ್ಯ ಸಂಭ್ರಮದಲ್ಲಿ ಸಾಹಿತ್ಯ ಸತ್ಯ, ಸಂಸ್ಕೃತಿ ನಿತ್ಯ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಜನ ತಮ್ಮೊಳಗೆ ನಕಾರಾತ್ಮಕ ಅಂಶ ಇದ್ದರೆ ಅದನ್ನು ಬೇರೆಯವರಲ್ಲೂ ಕಾಣಲು ಹೋಗುತ್ತಾರೆ. ಇದು ಸರಿಯಲ್ಲ. ಪ್ರತಿಯೊಬ್ಬರಲ್ಲೂ ಸಕಾರಾತ್ಮಕ ಗುಣಗಳಿರುತ್ತದೆ. ಸಮಾಜದಲ್ಲಿ ಒಳ್ಳೆಯವರನ್ನು ಗುರುತಿಸಬೇಕು. ಕುವೆಂಪು ಬರೆದ ರಾಮಾಯಣ ದರ್ಶನಂ ನಲ್ಲಿ ರಾವಣನ ಮನಸ್ಸು ಪರಿವರ್ತನೆಗೂ ಪ್ರಯತ್ನಿಸಲಾಗಿದೆ. ನಮ್ಮೊಳಗೂ ದೇವರಿದ್ದಾನೆ. ಅದನ್ನು ನಾವು ಗುರುತಿಸಬೇಕಾಗಿದೆ. ಸಮಾಜದಲ್ಲಿ ಒಳ್ಳೆಯವರ, ಸಜ್ಜನರ ಗೆಳತನ ಮಾಡಬೇಕು ಎಂದು ಸಲಹೆ ನೀಡಿದರು.

ಸಾಹಿತ್ಯ ಬದುಕುವುದನ್ನು ಕಲಿಸುತ್ತದೆ. ಮನೆ ಗೆದ್ದು ದೇಶ ಗೆಲ್ಲಬೇಕು. ನೆರೆಯವರನ್ನು ಗೆಲ್ಲಬೇಕು ಎಂಬುದನ್ನು ನಮಗೆ ಸಾಹಿತ್ಯ ಕಲಿಸಿದೆ ಎಂದರು.

ಚಿಕ್ಕಮಗಳೂರಿನ ರೇಖಾ ನಾಗರಾಜರಾವ್ ಬರೆದ ಮನದಂಗಳ ಎಂಬ ಕೃತಿಯನ್ನು ಕೊಪ್ಪದ ಪ್ರಶಮನೀ ಆಸ್ಪತ್ರೆ ವೈದ್ಯ ಡಾ.ಉದಯಶಂಕರ್ ಹಾಗೂ ರೇಖಾ ಉದಯಶಂಕರ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಡಾ. ಉದಯ ಶಂಕರ್ ಮಾತನಾಡಿ, ಚಿಕ್ಕಮಗಳೂರಿನ ಕಲ್ಕಟ್ಟೆ ನಾಗರಾಜರಾವ್ ಕಲ್ಕಟ್ಟೆ ಮನೆ ಎಂಬ ಗ್ರಂಥಾಲಯ ಇಟ್ಟುಕೊಂಡಿದ್ದಾರೆ. ಅವರ ಕುಟಂಬವೇ ಸಾಹಿತ್ಯ ಕುಟುಂಬ. ಸಾಹಿತ್ಯ ಎಂಬುದು ಮನುಷ್ಯನ ಅಂತರಂಗದ ಧ್ವನಿಯಾಗಿದೆ. ಸಾಹಿತ್ಯಕ್ಕೆ ತನ್ನದೇ ಆದ ಶಕ್ತಿ ಇದೆ. ಸಾಹಿತ್ಯವನ್ನು ನಾವು ಸಂಗಾತಿಗಳಾಗಿ ಮಾಡಿ ಕೊಳ್ಳಬೇಕು. ಪುಸ್ತಕಗಳನ್ನು ಕೊಂಡು ಓದಬೇಕು ಎಂದು ಕರೆ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಧನಂಜಯ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ನೈಜ ಘಟನೆ ದಾಖಲು ಮಾಡುತ್ತದೆ. ಪ್ರತಿಯೊಬ್ಬರೂ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ಕುವೆಂಪು, ತೇಜಸ್ವಿ, ಶಿವರಾಮ ಕಾರಂತ, ಯು.ಆರ್‌.ಅನಂತಮೂರ್ತಿಯಂತಹವರು ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸಿದ್ದಾರೆ. ಸಾಹಿತಿಗಳಿಗೆ ಜಾತಿ, ಧರ್ಮ, ಕುಲ ಇಲ್ಲ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಎಸ್‌.ಎಚ್‌. ಪೂರ್ಣೇಶ್ ಮಾತನಾಡಿ, 110 ವರ್ಷಗಳ ಇತಿಹಾಸದ ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡ ಭಾಷೆ ಉಳಿಸಿ ಬೆಳೆಸುವ ಜವಾಬ್ದಾರಿ ಇದೆ. ವಿದ್ಯಾರ್ಥಿಗಳು ಶಾಲೆ ಅವಧಿಯಲ್ಲಿ ತಲೆ ತಗ್ಗಿಸಿ ಓದಿದರೆ ಜೀವಿತಾವಧಿಯಲ್ಲಿ ತಲೆ ಎತ್ತಿ ಹೆಮ್ಮೆಯಿಂದ ಬದುಕಬಹುದು. ನರಸಿಂಹರಾಜಪುರದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅದನ್ನು ಕಸಾಪ ಗುರುತಿಸುವ ಕೆಲಸ ಮಾಡುತ್ತಿದೆ. ಕಲ್ಕಟ್ಟೆ ನಾಗರಾಜರಾವ್‌ ಹಾಗೂ ರೇಖಾ ನಾಗರಾಜರಾವ್ ಉತ್ತಮ ಬರಹಗಾರರು ಎಂದರು.

ಮನದಂಗಳ ಕೃತಿ ಲೇಖಕಿ ರೇಖಾ ನಾಗರಾಜರಾವ್ ಮಾತನಾಡಿ, 15 ವರ್ಷದ ಹಿಂದೆ ನಾನು ಮೊದಲ ಕೃತಿ ರಚನೆ ಮಾಡಿದ್ದೆ. ಮನದಂಗಳ ನನ್ನ 2ನೇ ಕೃತಿಯಾಗಿದೆ. ಪ್ರತಿಯೊಬ್ಬರಲ್ಲೂ ಕಥೆಗಾರರಿದ್ದಾರೆ. ದಿನ ನಿತ್ಯದ ನಮ್ಮ ಜೀವನದ ಘಟನೆಯನ್ನು ಅಕ್ಷರ ರೂಪಕ್ಕೆ ಇಳಿಸಿದರೆ ಲೇಖನವಾಗುತ್ತದೆ. ಕಥೆಯಾಗುತ್ತದೆ. ನಾನು ಸಹ ಅನೇಕ ಘಟನೆ ಗಳನ್ನು ಆಧರಿಸಿ ಪುಸ್ತಕ ಬರೆದಿದ್ದೇನೆ. ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ತಾ.ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ಮಾತನಾಡಿ, ಕಲ್ಕಟ್ಟೆ ನಾಗರಾಜರಾವ್ ನಡೆದಾಡುವ ವಿಶ್ವಕೋಶದಂತೆ ಎಂದ ಅವರು ಪ್ರತಿಯೊಬ್ಬ ಲೇಖಕರು ತಾವು ಬರೆದ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ ದೊಡ್ಡ ದಾಖಲೆಯಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಉದಯೋನ್ಮುಖ ಬರಹಗಾರ್ತಿ ಕು.ನಾಗಶ್ರೀ ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ಕಸಾಪ ಹೋಬಳಿ ಅಧ್ಯಕ್ಷೆ ಜುಬೇದ, ಕಸಾಪ ನಿಕಟಪೂರ್ವ ಅಧ್ಯಕ್ಷ ಪಿ.ಕೆ.ಬಸವರಾಜ್‌, ಮಹಿಳಾ ಘಟಕದ ನಿರ್ದೇಶಕಿ ಶ್ಯಾಮಲ ಸತೀಶ್, ಪ್ರಾಧ್ಯಾಪಕರಾದ ಪ್ರೊ. ಡಿ.ನಾಗೇಶಗೌಡ, ಬಿ.ಟಿ.ರೂಪ, ಆರ್‌.ಕೆ.ಪ್ರಸಾದ್‌, ಸಾಹಿತಿ ಜಯಮ್ಮ, ಮ್ಯಾಥ್ಯೂ, ನಂದಿನಿ ಆಲಂದೂರು, ಶಶಿಕಲಾ, ವಾಸಂತಿ, ಭಾನುಮತಿ ಇದ್ದರು.

Share this article