ಕುಮಾರವ್ಯಾಸನ ಕಾವ್ಯ ಅಧ್ಯಯನದಿಂದ ಸಾಹಿತ್ಯ ಅನುಭವ: ಡಾ.ಪ್ರಸನ್ನ

KannadaprabhaNewsNetwork | Published : Dec 13, 2023 1:00 AM

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಹಿನ್ನೆಲೆಯಲ್ಲಿ ೯೧ನೇ ವರ್ಷದ ಸಾಹಿತ್ಯ ಸಮ್ಮೇಳನ, ಪುಷ್ಪಾಲಂಕಾರದಿಂದ ಕಂಗೊಳಿಸಿದ ಧರ್ಮಸ್ಥಳ ದೇವಸ್ಥಾನ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸಾಹಿತ್ಯದ ಅನುಭವ ಸಿಗಬೇಕಾದರೆ ಕುಮಾರವ್ಯಾಸನ ಕಾವ್ಯವನ್ನು ಅಧ್ಯಯನ ಮಾಡಬೇಕು ಎಂದು ಕರ್ನಾಟಕ ಗಮಕ ಪರಿಷತ್ ಅಧ್ಯಕ್ಷ ಗಮಕಿ ಡಾ. ಎ.ವಿ. ಪ್ರಸನ್ನ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವ ಹಿನ್ನೆಲೆ ಮಂಗಳವಾರ ಸಂಜೆ ನಡೆದ 91ನೇ ವರ್ಷದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾವ್ಯಗಳು ಜನರಿಗೆ ಮುಟ್ಟದಿದ್ದರೆ ಏನು ಪ್ರಯೋಜನ. ಇದನ್ನರಿತ ಗಮಕಿಗಳು ಕಾವ್ಯ ಪುರಾಣಗಳನ್ನು ಜನರಿಗೆ ಹತ್ತಿರವಾಗಿಸಿದರು. ಆಕರ್ಷಣೀಯವಾದ ಗಮಕ ಕಲೆಗೆ ಧರ್ಮಸ್ಥಳದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದರು.

ಗಮಕ ಕಲೆ ಕರ್ನಾಟಕದ ವಿಶಿಷ್ಟವಾದ ಆಕರ್ಷಣೀಯವಾದ ಕಲೆಯಾಗಿದೆ. ಕವಿಗಳು ರಚಿಸಿದ ಸಾಹಿತ್ಯವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸುವ ಕಲೆಯೇ ಗಮಕ ಕಲೆಯಾಗಿದ್ದು, ಕುಮಾರವ್ಯಾಸ ಗಮಕಿಗಳ ಕಾಮಧೇನು ಎಂದು ಬಣ್ಣಿಸಿದರು.ಇದೇ ರೀತಿ ಲಕ್ಷ್ಮೀಶ, ರಾಘವಾಂಕ, ಹರಿಹರ, ಜೈನಕಾಶಿ ಮೂಡುಬಿದಿರೆಯ ಕವಿ ರತ್ನಾಕರವರ್ಣಿ ಪ್ರಸಿದ್ಧ ಗಮಕಿಗಳಾಗಿದ್ದಾರೆ. ಗಮಕಿಗಳು ರಾಗಬದ್ಧವಾಗಿ ಜನಸಾಮಾನ್ಯರಿಗೆ ಸುಲಭ ರೀತಿಯಲ್ಲಿ ತಿಳಿಯುವಂತೆ ವಾಚನ-ವ್ಯಾಖ್ಯಾನ ಮಾಡುತ್ತಾರೆ. ೨೦೦೦ನೇ ಇಸವಿಯಲ್ಲಿ ಪುತ್ತೂರು ತಾಲೂಕಿನ ಶಾಂತಿಗೋಡು ಎಂಬಲ್ಲಿ ದೊರಕಿದ ತುಳು ಮಹಾಭಾರತೊ ಕೃತಿ ಕುಮಾರವ್ಯಾಸನ ಕಾಲನಿರ್ಣಯದ ಬಗ್ಗೆ ಅಧಿಕೃತ ಪುರಾವೆ ನೀಡಿದೆ ಎಂದು ಅವರು ತಿಳಿಸಿದರು.

ಹಿಂದೆ ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಮಾತ್ರ ಜನಪ್ರಿಯವಾಗಿದ್ದ ಗಮಕಕಲೆ, ಈಗ ಹೆಚ್ಚು ಮಹತ್ವ ಪಡೆಯುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಇಸ್ರೋದ ವಿಜ್ಞಾನಿ, ನಿರ್ದೇಶಕ ರಾಮಕೃಷ್ಣ ಬಿ.ಎನ್., ಬ್ರಿಟಿಷರು ಬರುವ ಮೊದಲು ನಮ್ಮ ದೇಶ ಎಲ್ಲ ಕ್ಷೇತ್ರಗಳಲ್ಲಿ ಸಂಪದ್ಭರಿತವಾಗಿತ್ತು. ಆದರೆ ಈಗ ಮತ್ತೆ ನಮ್ಮ ದೇಶ ಯಾರಿಗೂ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದೇವೆ. ಪ್ರಪಂಚವೇ ನಮ್ಮತ್ತ ನೋಡುವಂತೆ ಸಾಧನೆ ಮಾಡಿದ್ದೇವೆ. ವೈಜ್ಞಾನಿಕ ಕ್ಷೇತ್ರದಲ್ಲಿ ಚಂದ್ರಯಾನ-4 ಸಹಿತ ಅನೇಕ ಸಾಧನೆಗಳನ್ನು ಮಾಡಲು ಭಾರತ ಸಿದ್ಧವಾಗಿದೆ ಎಂದರು.

ವೇದದಲ್ಲಿ ಚಂದ್ರನ ಬಗ್ಗೆ ಉಲ್ಲೇಖವಿದೆ. ಶಿವನ ಶಿಖೆಯಲ್ಲಿ ಮೊಸರಿನಂತೆ, ಹಿಮದಂತೆ ಚಂದ್ರ ಇರುವುದನ್ನು ಉಲ್ಲೇಖಿಸಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಎಂದು ಹೆಸರಿಟ್ಟಿರುವುದು ಔಚಿತ್ಯಪೂರ್ಣವಾಗಿದೆ. ಅಲ್ಲದೆ ಚಂದ್ರನಿಂದ ಕಲ್ಲು ಮಣ್ಣು ತರಬೇಕು ಎಂಬ ಟಾಸ್ಕ್‌ ನೀಡಿದ್ದಾರೆ ಅದನ್ನು ಸಾಧಿಸುವತ್ತ ಚಂದ್ರಯಾನ-4 ಸಿದ್ಧವಾಗಿದೆ ಎಂದರು.

ಸಾಹಿತ್ಯ- ಸಂಸ್ಕೃತಿಯ ನೆಲೆ ವಿಷಯದ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀಪಾದ ಶೆಟ್ಟಿ, ರಂಗಭೂಮಿ‌ ಮತ್ತು ಕೃತಕ‌ ಬುದ್ಧಿಮತ್ತೆಯ ಬಗ್ಗೆ ರಂಗನಟ ಪ್ರಕಾಶ್ ಬೆಳವಾಡಿ, ಭಾಷೆ ಮತ್ತು ಸಾಹಿತ್ಯ ಪರಸ್ಪರ ಅವಲಂಬನೆ ಕುರಿತು ಉಪನ್ಯಾಸಕ ಡಾ. ಅಜಕ್ಕಳ ಗಿರೀಶ ಭಟ್ಟ ಉಪನ್ಯಾಸ ನೀಡಿದರು.

ಧರ್ಮ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳು: ಡಾ.ಹೆಗ್ಗಡೆ

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯಗಳ ಪರಂಪರೆ ಮತ್ತು ಅವುಗಳಲ್ಲಿರುವ ಸತ್ವ, ಸಂದೇಶಗಳನ್ನು ತಿಳಿದುಕೊಂಡು ಧರ್ಮಮಾರ್ಗದಲ್ಲಿ ಸುಖ-ಶಾಂತಿ, ನೆಮ್ಮದಿಯಿಂದ ಜೀವನ ಮಾಡಬೇಕು ಎಂಬುದು ಜಗತ್ತಿನ ಎಲ್ಲಾ ಸಾಹಿತ್ಯಗಳ ಮತ್ತು ಸಾಹಿತ್ಯ ಪ್ರಕಾರಗಳ ಆಶಯವಾಗಿದೆ. ಧರ್ಮ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳು ಎಂದರು.

ಸಮಾಜಕ್ಕೆ ಹಿತವನ್ನುಂಟುಮಾಡುವುದೇ ಸಾಹಿತ್ಯದ ಉದ್ದೇಶವಾಗಿದೆ. ಸಾಹಿತ್ಯ ಸೃಷ್ಟಿಗೆ ಓದು-ಬರಹ ಅಗತ್ಯವಿಲ್ಲ. ಅನುಭವ ಮತ್ತು ಭಾವನೆಗಳ ಅಭಿವ್ಯಕ್ತಿಯೇ ಸಾಹಿತ್ಯ. ಎಲ್ಲಾ ಭಾಷೆಗಳ ಸಾಹಿತ್ಯಕ್ಕೂ ಜನಪದ ಸಾಹಿತ್ಯವೇ ಮೂಲವಾಗಿದೆ. ಆರಂಭದಲ್ಲಿ ಭಾಷೆಯೇ ಸಾಹಿತ್ಯವಾಗಿತ್ತು. ಕಳೆದ ೯೦ ವರ್ಷಗಳಿಂದಲೂ ಪ್ರತಿವರ್ಷ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಆದಿಕವಿ ಪಂಪನಿಂದ ಹಿಡಿದು ಕುವೆಂಪು, ಬೇಂದ್ರೆ, ಹಂಪನಾ ಅವರ ಸಾಹಿತ್ಯ ಕೃತಿಗಳಲ್ಲಿರುವ ಮೌಲ್ಯಗಳನ್ನು, ಧಾರ್ಮಿಕ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಧರ್ಮಸ್ಥಳ ಕ್ಷೇತ್ರದಿಂದ ನಿರಂತರ ಪ್ರಯತ್ನ ಮಾಡಲಾಗುತ್ತದೆ. ನಾವು ನಮ್ಮ ಮಕ್ಕಳಿಗೆ ಆಧ್ಯಾತ್ಮಿಕ ಶಿಕ್ಷಣ ಮತ್ತು ಸಾಹಿತ್ಯದ ಶಿಕ್ಷಣ ನೀಡಲು ಆದ್ಯತೆ ಮತ್ತು ಬದ್ಧತೆ ತೋರಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಧರ್ಮಸ್ಥಳದ ವತಿಯಿಂದ ಮಹಿಳಾ ಸಬಲೀಕರಣಕ್ಕಾಗಿ ೨,೧೨೧ ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಆರಂಭಿಸಿ ಮಹಿಳೆಯರಲ್ಲಿ ಓದುವ, ಬರೆಯುವ ಬಗ್ಗೆ ಹಾಗೂ ಸಾಹಿತ್ಯಾಸಕ್ತಿ ಮೂಡಿಸಲಾಗಿದೆ ಎಂದರು.

ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಬೆಳ್ತಂಗಡಿಯ ವಕೀಲ ಕೇಶವ ಗೌಡ ವಂದಿಸಿದರು. ಎಸ್.ಡಿ.ಎಂ. ಕಾಲೇಜಿನ ಕನ್ನಡ ಉಪನ್ಯಾಸಕರಾದ ದಿವಾ ಕೊಕ್ಕಡ ಮತ್ತು ರಾಜಶೇಖರ ಹಳೇಮನೆ ಕಾರ್ಯಕ್ರಮ ನಿರ್ವಹಿಸಿದರು.

Share this article