ಹಳೆಗನ್ನಡ ವಚನಗಳಿಂದ ಸಾಹಿತ್ಯ ಉಗಮ: ಮಲ್ಲಿಕಾರ್ಜುನ ತೊದಲಬಾಗಿ

KannadaprabhaNewsNetwork |  
Published : Aug 15, 2024, 01:57 AM IST
ಸಾಹಿತಿ ರಮೇಶ ಬನ್ನಿಕೊಪ್ಪ ಹಲಿಗೇರಿ ರಚಿಸಿದ ಶಿಕ್ಷಣವೆಂಬ ಹಾರು ಹಕ್ಕಿ ಮತ್ತು ಒಲವಿನ ಪಿಸುಮಾತು ಕೃತಿಗಳ ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಸಾಹಿತ್ಯವು ನಮ್ಮ ಹಳೆಗನ್ನಡದ ಭಾಷೆಯ ವಚನಗಳಿಂದ ಉಗಮವಾಗಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಾಹಿತ್ಯವು ನಮ್ಮ ಹಳೆಗನ್ನಡದ ಭಾಷೆಯ ವಚನಗಳಿಂದ ಉಗಮವಾಗಿದೆ ಎಂದು ಕೊಪ್ಪಳ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಿಕ್ಷಕ, ಸಾಹಿತಿ ರಮೇಶ ಬನ್ನಿಕೊಪ್ಪ ಹಲಿಗೇರಿ ರಚಿಸಿದ ಶಿಕ್ಷಣವೆಂಬ ಹಾರು ಹಕ್ಕಿ ಮತ್ತು ಒಲವಿನ ಪಿಸುಮಾತು ಜೋಡಿ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯಕ್ಕೆ ನವರಸಗಳು ಸಂಗಮವಾಗಿದ್ದರೆ ಮಾತ್ರ ಅಲ್ಲಿ ಗಟ್ಟಿ ಸಾಹಿತ್ಯ ಹುಟ್ಟಲು ಸಾಧ್ಯವಾಗುತ್ತದೆ. ಎಲ್ಲೋ ಜನಿಸಿದ ಮಹಾನ್ ಕವಿವರ್ಯರು ಕನ್ನಡದ ಬಗೆಗೆ ಹೆಚ್ಚು ಪ್ರೀತಿ, ಅಭಿಮಾನ ಮತ್ತು ಅಸ್ಮಿತೆಯನ್ನು ಅಂದು ಹೊಂದಿದ್ದರು ಎಂದು ಅನೇಕರನ್ನು ಪರಿಚಯಿಸಿ ಉದಾಹರಣೆಯೊಂದಿಗೆ ತಿಳಿಸಿದರು.

ಸಾಹಿತಿ ಚಾಮರಾಜ ಸವಡಿ ಮಾತನಾಡಿ, ನಿರಂತರ ಅಧ್ಯಯನದಿಂದ ಸೃಜನಶೀಲ ಬರಹಗಾರರು ಹೊರಹೊಮ್ಮುತ್ತಾರೆ. ಇಂತಹ ಕ್ರಿಯಾಶೀಲತೆಯನ್ನು ಶಿಕ್ಷಕ ರಮೇಶ ಬನ್ನಿಕೊಪ್ಪ ಹಲಿಗೇರಿ ರೂಢಿಸಿಕೊಂಡಿದ್ದಾರೆ. ಸಾಮಾಜಿಕ ಕಳಕಳಿಗೆ ಪೂರಕವಾದ ಮತ್ತು ಜಾತಿ, ಧರ್ಮ, ಆಚರಣೆಗಳನ್ನು ಮೀರಿ ಬರೆದಿದ್ದಾರೆ. ಪ್ರೀತಿ, ವಿಶ್ವಾಸ, ನಂಬಿಕೆ, ಅನುಸಂಧಾನದ ಅನುಭವಗಳ ನಿರೂಪಣೆಗಳ ಶೈಲಿ ನಿಜಕ್ಕೂ ಓದುಗರಿಗೆ ಬೇಸರ ತರಿಸದೇ ಓದಿಸಿಕೊಂಡು ಹೋಗುವ ಕೃತಿಯಾಗಿದೆ ಎಂದು ಶ್ಲಾಘಿಸಿದರು.

ಪ್ರಾಧ್ಯಾಪಕಿ ಡಾ. ಸುಮತಿ ಹಿರೇಮಠ ಮಾತನಾಡಿ, ಇಂದಿನ ಸರ್ಕಾರಗಳು ಶಿಕ್ಷಕರಿಗೆ ಸರಿಯಾದ ಮಾನದಂಡ ನೀಡಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಅನುವು ಮಾಡಿಕೊಡಬೇಕು. ಇಂದಿನ ಶಿಕ್ಷಣ ದಬ್ಬಾಳಿಕೆ ಮತ್ತು ವ್ಯವಹಾರಿಕದಿಂದ ಕೂಡಿರುವುದು ಕಳಕಳಕಾರಿ ಸಂಗತಿಯಾಗಿದೆ. ಮಕ್ಕಳಿಗೆ ಶಿಕ್ಷಕರಿಂದ ಸಮಯಕ್ಕೆ ಸರಿಯಾಗಿ ಬೋಧನೆ ಮಾಡಲು ಆಗುತ್ತಿಲ್ಲ. ಶಾಲಾ ಮಕ್ಕಳ ಉಜ್ವಲ ಭವಿಷ್ಯದ ಕುರಿತು ಸರ್ಕಾರಗಳು ಪರ್ಯಾಯ ಮಾರ್ಗಗಳನ್ನು ಹೊರತಂದು ಚಿಂತಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಸಾಹಿತ್ಯ ಕೃಷಿ ಗ್ರಾಮ್ಯದಲ್ಲಿ ಜನಿಸಿ ಬರಬೇಕು. ಅಲ್ಲಿ ಬಡತನ, ನಿರುದ್ಯೋಗ, ಸಾಮಾಜಿಕ ಅನಿಷ್ಟ ಪಿಡುಗುಗಳು ವ್ಯಾಪಕವಾಗಿರುತ್ತವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಕಲಚೇತನ ಶಾಲಾ ವಿದ್ಯಾರ್ಥಿ ಅಂಜಿನಪ್ಪ ಕಂಟೇರ, ಸೋನಲ್ ಪ್ರಕಾಶನ ಮಂಡ್ಯದ ವಸಂತ ಮೋಟಾಲಿಯಾ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರು, ಯುವ ಪತ್ರಕರ್ತ ವೈ.ಎಂ. ಕೋಲಕಾರ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.

ಸಾಹಿತಿ ಮಹೇಶ ಬಳ್ಳಾರಿ ಅವರ ವಿನೂತನ ಯುಟೂಬ್ ಕನ್ನಡ ಚಾನೆಲ್ ನಾಡ ಕವಿತೆಗೆ ಬಸವ ಸಮಿತಿಯ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಚಾಲನೆ ನೀಡಿದರು. ಸ್ಥಳೀಯ ಕಲಾವಿದ ಮೆಹಬೂಬ್ ಕಿಲ್ಲೇದಾರ ಮತ್ತು ಮರಿಯಪ್ಪ ಚಾಮಲಾಪುರ ಅವರಿಂದ ಗೀತ ಗಾಯನ ಏರ್ಪಡಿಸಲಾಗಿತ್ತು. ಮಹೇಳ ಬಳ್ಳಾರಿ ನಿರೂಪಿಸಿ, ಕೆ.ಪಿ. ಪವನಕುಮಾರ್ ವಂದಿಸಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ