ಅಕ್ಷರ ಕಲಿತವರೇ ಹೆಚ್ಚು ಭ್ರಷ್ಟರಾಗಿದ್ದಾರೆ: ಪ್ರೊ.ರಹಮತ್ ತರೀಕೆರೆ

KannadaprabhaNewsNetwork |  
Published : Mar 01, 2025, 01:02 AM IST
15 | Kannada Prabha

ಸಾರಾಂಶ

ಪ್ರಸ್ತುತ ಪುಸ್ತಕ ಸಂಸ್ಕೃತಿ ಅಳಿಯುತ್ತಿದೆ. ಕೇಳುವ ನೋಡುವ ಯುಗದಲ್ಲಿದ್ದೇವೆ. 500 ಪುಟಗಳ ಪುಸ್ತಕವನ್ನು ಯಾರು ಓದುತ್ತಾರೆ? ಹೊಸ ತಲೆಮಾರಿನ ಓದುವ ಕ್ರಮ ಬದಲಾಗಿದೆ. ಸಾಂಪ್ರದಾಯಿಕವಾಗಿಲ್ಲ. ಪ್ರಸಾರಾಂಗ ಮತ್ತು ಗ್ರಂಥಾಲಯಗಳಿಂದ ಡಿಜಿಟಲ್ ವೇದಿಕೆಗೆ ವರ್ಗಾವಣೆಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಜ್ಞಾನಗಿಂತ ಮಿಗಿಲಾದದ್ದು ಇಲ್ಲ. ಆದರೆ, ಅಕ್ಷರ ಕಲಿತವರೇ ಹೆಚ್ಚು ಭ್ರಷ್ಟರಾಗಿದ್ದಾರೆ. ಹೀಗಾಗಿ, ಸಾಕ್ಷರತೆಗೆ ಮನುಷ್ಯತ್ವ ಮತ್ತು ವಿವೇಕ ಕೂಡಬೇಕಾಗಿದೆ ಎಂದು ಮೈಸೂರು ವಿವಿ ಡಾ.ಅಂಬೇಡ್ಕರ್ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ, ಚಿಂತಕ ಪ್ರೊ. ರಹಮತ್ ತರೀಕೆರೆ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು, ಸಂಸ್ಕೃತಿ ನಿರ್ಮಾಣದಲ್ಲಿ ಪ್ರಸಾರಾಂಗದ ಪಾತ್ರ ಕುರಿತು ಮಾತನಾಡಿದರು.

ಕವಿ ಕುವೆಂಪು ಶಿಕ್ಷಣ ಪಶುವನ್ನು ಮನುಷ್ಯನನ್ನಾಗಿ ಮಾಡುತ್ತದೆ ಎಂದಿದ್ದಾರೆ. ಆದರೆ, ವ್ಯಾಟ್ಸಪ್‌ ಗಳಲ್ಲಿ ದ್ವೇಷ ಕಕ್ಕುವುದನ್ನು ಕಾಣುತ್ತಿದ್ದೇವೆ. ಪರಂಪರೆಯ ಬಗ್ಗೆ ದಾರ್ಶನಿಕರ ಬಗ್ಗೆ ಎಷ್ಟೊಂದು ಅಹಸನೆ ಇದೆ. ಕುವೆಂಪು ಅವರ ಬಗ್ಗೆ ಏಕವಚನದಲ್ಲಿ ನಿಂದಿಸಲಾಗುತ್ತಿದೆ ಎಂದು ಅವರು ವಿಷಾದಿಸಿದರು.

ಪ್ರಸ್ತುತ ಪುಸ್ತಕ ಸಂಸ್ಕೃತಿ ಅಳಿಯುತ್ತಿದೆ. ಕೇಳುವ ನೋಡುವ ಯುಗದಲ್ಲಿದ್ದೇವೆ. 500 ಪುಟಗಳ ಪುಸ್ತಕವನ್ನು ಯಾರು ಓದುತ್ತಾರೆ? ಹೊಸ ತಲೆಮಾರಿನ ಓದುವ ಕ್ರಮ ಬದಲಾಗಿದೆ. ಸಾಂಪ್ರದಾಯಿಕವಾಗಿಲ್ಲ. ಪ್ರಸಾರಾಂಗ ಮತ್ತು ಗ್ರಂಥಾಲಯಗಳಿಂದ ಡಿಜಿಟಲ್ ವೇದಿಕೆಗೆ ವರ್ಗಾವಣೆಗೊಂಡಿದ್ದಾರೆ ಎಂದರು.

ಕುವೆಂಪು ಆದಿಯಾಗಿ ಹಿಂದಿನ ಮಹನೀಯರು ಮಹಾಕಾವ್ಯ ಬರೆದು ದೊಡ್ಡವರಾಗಲಿಲ್ಲ. ಜನತಾ ಪ್ರಜ್ಞೆಯಿಂದ ದೊಡ್ಡವರಾದರು. ರೈತರು, ಜನ ಸಾಮಾನ್ಯರ ತೆರಿಗೆಯಿಂದ ವಿಶ್ವವಿದ್ಯಾನಿಲಯ ನಡೆಯುತ್ತದೆ ಎಂದು ನಂಬಿದ್ದರು. ಅದಕ್ಕೆ ಬದ್ಧರಾಗಿ ತಮ್ಮ ವೃತ್ತಿಯನ್ನು ನಡೆಸಿದರು ಎಂದು ಅವರು ಹೇಳಿದರು.

ಮೈಸೂರು ವಿವಿ ಪ್ರಸಾರಾಂಗವು ಜ್ಞಾನ, ವಿಚಾರ ಪ್ರಸರಣದಲ್ಲಿ ದೊಡ್ಡ ಕೆಲಸ ಮಾಡಿದೆ. ಚಳವಳಿಯಾಗಿ ಜನರಿಗೆ ತಿಳವಳಿಕೆ ಕೊಟ್ಟ ಭವ್ಯ ಪರಂಪರೆ ಹೊಂದಿದೆ ಎಂದರು.

ಇದೇ ವೇಳೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಇತ್ತೀಚೆಗೆ ನಿಧನರಾದ ಡಾ.ಕೆ. ಕೆಂಪೇಗೌಡ ಮತ್ತು ಕೆ.ಜಿ. ಪ್ರಕಾಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಸಾರಾಂಗದ ನಿರ್ದೇಶಕ ಡಾ. ನಂಜಯ್ಯ ಹೊಂಗನೂರು, ಅಧೀಕ್ಷಕ ಚನ್ನಪ್ಪ, ಮುದ್ರಾಣಾಲಯದ ನಿರ್ದೇಶಕ ಸತೀಶ್, ವಿಜಯಮ್ಮ, ಲಲಿತಾ, ರೇಣುಕಾ ಇದ್ದರು. ಗಾಯಕ ಅಮ್ಮ ರಾಮಚಂದ್ರ ಪ್ರಾರ್ಥಿಸಿದರು. ಡಾ.ಎಚ್.ಪಿ. ಮಂಜು ನಿರೂಪಿಸಿದರು.ಶಿಕ್ಷಣ ಮತ್ತು ವೈದ್ಯ ಶಿಕ್ಷಣ ತುಟ್ಟಿಯಾಗಿರುವುದು ಪ್ರಜಾಪ್ರಭುತ್ವದ ಅಧಃಪತನದ ಸಂಕೇತವೂ ಹೌದು. ತೆರಿಗೆಯ ಹಣ ಶಿಕ್ಷಣ, ಆರೋಗ್ಯ, ಆಹಾರಕ್ಕೆ ವಿನಿಯೋಗ ಆಗಬೇಕು. ಪುಸ್ತಕ ಕಳುಹಿಸುವ ತೆರಿಗೆ ಹೆಚ್ಚು ಮಾಡಿರುವುದು ಜ್ಞಾನ ವಿರೋಧಿ ಕೃತ್ಯ.

- ಪ್ರೊ. ರಹಮತ್ ತರೀಕೆರೆ, ಚಿಂತಕ

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು