ಬೆಂಗಳೂರು : ಮಹಿಳಾ ಸಾಹಿತ್ಯವನ್ನು ಪುರುಷ ಸಾಹಿತ್ಯದ ವಿರೋಧಿ ಎಂದು ಭಾವಿಸದೇ, ಇದೊಂದು ಹೊಸ ಆವಿಷ್ಕಾರ, ಹೊಸ ಪ್ರಯತ್ನ ಎಂದು ತಿಳಿದಾಗ ಮಾತ್ರ ಮಹಿಳಾ ಸಾಹಿತ್ಯಕ್ಕೆ ನಿಜವಾದ ಬಲ ಬರಲು ಸಾಧ್ಯ ಎಂದು ಸಾಹಿತಿ ಡಾ। ಎಚ್.ಎಸ್.ಶಿವಪ್ರಕಾಶ್ ಹೇಳಿದರು.
ಕನ್ನಡ ಭವನದ ನಯನ ಸಭಾಂಗಣದಲ್ಲಿ ಕರ್ನಾಟಕ ಲೇಖಕಿಯರ ಸಂಘದ 45ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಲೇಖಕಿಯರಿಗೆ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾಗಿ ಬರೆಯುವ ಸಮರ್ಥ ಮಹಿಳಾ ಸಾಹಿತಿಗಳಿದ್ದಾರೆ. ಸಾಹಿತ್ಯಿಕ ಚಟುವಟಿಕೆಗಳಿಗೆ ಮಹಿಳಾ ಸಾಹಿತಿಗಳನ್ನು ತೊಡಗಿಸಿಕೊಳ್ಳಬೇಕಿದೆ ಎಂದರು.
ಸಾಹಿತ್ಯಕ್ಕೆ ಜಾತಿ, ಲಿಂಗದ ಬೇಧವಿಲ್ಲ. ಪುರುಷರಿಗೆ ಸಮಾನವಾಗಿ ಮಹಿಳಾ ಸಾಹಿತ್ಯವು ಬೆಳವಣಿಗೆಯಾಗಿದೆ. ಮಹಿಳಾ ಸಾಹಿತ್ಯ ಪುರುಷ ಸಾಹಿತ್ಯದಷ್ಟೇ ಪ್ರಬಲ ಹಾಗೂ ಪ್ರಖರವಾಗಿರುತ್ತದೆ. ಭಾರತೀಯ ಮತ್ತು ಕನ್ನಡ ನವ್ಯ ಪರಂಪರೆಗೆ ಪರ್ಯಾಯವಾಗಿ ಮಹಿಳಾ ಸಾಹಿತ್ಯ ಹಾಗೂ ದಲಿತ ಸಾಹಿತ್ಯಗಳು ಹುಟ್ಟಿಕೊಂಡಿವೆ. ಇವುಗಳಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಲೇಖಕಿ ಡಾ। ಕೆ.ಆರ್.ಸಂಧ್ಯಾರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳಾ ಸಾಹಿತ್ಯವೇ ಮುಂಚೂಣಿಯಲ್ಲಿದೆ. ಇಂದಿನ ಲೇಖಕಿಯರು ಸ್ಪಷ್ಟವಾಗಿ ತಮ್ಮ ಆಲೋಚನೆಗಳನ್ನು ಅಭಿವ್ಯಕ್ತಿಗೊಳಿಸುತ್ತಿದ್ದಾರೆ. ಕಥೆ, ಕಾವ್ಯ, ಕಾದಂಬರಿ ಹಾಗೂ ಆತ್ಮಕಥನಗಳು ಇದಕ್ಕೆ ನಿದರ್ಶನವಾಗಿವೆ. ಮಹಿಳಾ ಸಾಹಿತ್ಯ ಭಿನ್ನವಾಗಿ ಬೆಳವಣಿಗೆ ಹೊಂದುತ್ತಿದೆ ಎಂದರು.
ಲೇಖಕ ಚ.ಹ.ರಘುನಾಥ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ। ಎಚ್.ಎಲ್.ಪುಷ್ಟಾ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರು
ಮಂಜುಳಾ ಹಿರೇಮಠ- ಕೆ.ಟಿ. ಬನಶಂಕರಮ್ಮ ಪ್ರಶಸ್ತಿ, ದೇವಿಕಾ ನಾಗೇಶ್- ಶ್ರೀಲೇಖಾ ಕಾವ್ಯ ಪ್ರಶಸ್ತಿ, ಅಕ್ಷತಾ ಹುಂಚದಕಟ್ಟೆ- ಪ್ರೇಮಾ ಭಟ್ ಮತ್ತು ಎ.ಎಸ್.ಭಟ್ ಪ್ರಶಸ್ತಿ, ಡಾ। ಚಂದ್ರಮತಿ ಸೋಂದಾ- ಕಾಕೋಳು ಸರೋಜಮ್ಮ ಕಾದಂಬರಿ ಪ್ರಶಸ್ತಿ, ಡಾ। ಬಿ.ರೇವತಿ ನಂದನ್- ಭಾಗ್ಯ ನಂಜಪ್ಪ ಪ್ರಶಸ್ತಿ, ಸರಸ್ವತಿ ಭೋಸಲೆ- ನಾಗರತ್ನ ಚಂದ್ರಶೇಖರ್ ಪ್ರಶಸ್ತಿ, ವಿಜಯಾ ಶಂಕರ- ಜಿ.ವಿ.ನಿರ್ಮಲ ಪ್ರಶಸ್ತಿ, ಮಾಧವಿ ಭಂಡಾರಿ ಕೆರೆಕೋಣ- ತ್ರಿವೇಣಿ ಸಾಹಿತ್ಯ ಪುರಸ್ಕಾರ, ನೂತನ ದೋಶೆಟ್ಟಿ- ಕಮಲಾ ರಾಮಸ್ವಾಮಿ ಪ್ರವಾಸ ಸಾಹಿತ್ಯ ಪ್ರಶಸ್ತಿ, ಸುಮಾ ರಮೇಶ್- ನುಗ್ಗೆಹಳ್ಳಿ ಪಂಕಜ ಹಾಸ್ಯ ಪ್ರಶಸ್ತಿ, ಡಾ। ರಾಧಾ ಕುಲಕರ್ಣಿ- ಗುಣಸಾಗರಿ ನಾಗರಾಜ್ ಮಕ್ಕಳ ಸಾಹಿತ್ಯ ಪ್ರಶಸ್ತಿ, ಕಾವ್ಯಾ ಕಡಮೆ- ಇಂದಿರಾ ವಾಣಿರಾವ್ ನಾಟಕ ಪ್ರಶಸ್ತಿ, ಲೀಲಾ ವಾಸುದೇವ್- ಜಯಮ್ಮ ಕರಿಯಣ್ಣ ಸಂಶೋಧನೆ ಪ್ರಶಸ್ತಿ, ಸುಧಾ ಆಡುಕಳ, ಫೌಝಿಯ ಸಲೀಂ ಮತ್ತು ಸಿಂದುಚಂದ್ರ- ತ್ರಿವೇಣಿ ದತ್ತಿ ನಿಧಿ ಪ್ರಶಸ್ತಿ, ಡಾ। ಶೋಭಾ ನಾಯಕ- ಉಷಾ ಪಿ.ರೈ ದತ್ತಿ ಪ್ರಶಸ್ತಿ, ಡಾ। ಮಂಜುಳಾ ಗೋನಾಳ ಮತ್ತು ಮಾಲತಿ ಹೆಗಡೆ- ನಿರುಪಮಾ ಕಥಾ ಪ್ರಶಸ್ತಿ ಹಾಗೂ ಡಾ। ಕಾತ್ಯಾಯಿನಿ ಕುಂಜಿಬೆಟ್ಟು- ನಾಗರಾಜ್ ಕಾವ್ಯ ಪ್ರಶಸ್ತಿ.