ಶಿವಮೊಗ್ಗ: ಸಮಾಜದಲ್ಲಿ ರಕ್ತಕ್ರಾಂತಿ ಬೇಕಿಲ್ಲ. ವೈಚಾರಿಕ ಕ್ರಾಂತಿ ಯುದ್ಧವನ್ನು ನಾವು ಮಾಡಬೇಕಿದೆ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ನಗರದ ಮಥುರ ಪ್ಯಾರಡೈಸ್‍ನಲ್ಲಿ ಶನಿವಾರ ಸಾಹಿತ್ಯ ಅಕಾಡೆಮಿ ಮತ್ತು ಶಿವಮೊಗ್ಗ ಸೌರಭ ಸಾಂಸ್ಕೃತಿಕ ಸಂಸ್ಥೆ ಸಹಯೋಗದೊಂದಿಗೆ ಯುವ ಸಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯುದ್ಧವನ್ನು ವೈಭವೀಕರಿಸಿ ಯಾವ ಸಾಹಿತ್ಯವೂ ಮಾತನಾಡಿಲ್ಲ. ಸಾಹಿತ್ಯವು ಯುದ್ಧ ವಿರೋಧಿಯಾಗಿದೆ ಮತ್ತು ಮನುಷ್ಯನನ್ನು ಎಚ್ಚರಿಸುತ್ತದೆ. ಯುದ್ಧವನ್ನು ಸಂಭ್ರಮಿಸುವಂತೆ ಯಾವ ಸಾಹಿತ್ಯವೂ ಹೇಳುವುದಿಲ್ಲ. ಹಾಗಾಗಿ ಮನುಷ್ಯತ್ವವನ್ನು ಎಚ್ಚರಿಸುವುದಕ್ಕೆ ಸಾಹಿತ್ಯ ಇಂದಿಗೆ ಅನಿವಾರ್ಯವಾಗಿದೆ ಎಂದರು.
ನಮಗಿನ್ನೂ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆಯೇ ವಿನಃ ಸಾಂಸ್ಕೃತಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಇಂದಿಗೂ ನಾವು ಸಾಂಸ್ಕೃತಿಕ ದಾಸ್ಯದ ಪಿಡುಗಿನಲ್ಲಿ ಬದುಕುತ್ತಿದ್ದೇವೆ. ನಾವು ಸಾಂಸ್ಕೃತಿಕ ಯಾಜಮಾನ್ಯದಿಂದ ಬಿಡುಗಡೆ ಬಯಸುವಂತಾಗಿದೆ. 12ನೇ ಶತಮಾನದಲ್ಲಿ ಶರಣರು ಸಾಂಸ್ಕೃತಿಕ ಸ್ವಾತಂತ್ರ್ಯದ ಪರ ಧ್ವನಿ ಎತ್ತಿದ್ದರು. ಆನಂತರ ಅಂಬೇಡ್ಕರ್ ಮತ್ತು ಗಾಂಧೀಜಿಯೇ ಬರಬೇಕಾಯಿತು. ಆದರೂ ಸಾಂಸ್ಕೃತಿಕ ದಾಸ್ಯದೊಳಗೆ ಸಿಲುಕಿರುವವರನ್ನು ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ತಿಳಿಸಿದರು.ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಮಂಡಳಿ ಸದಸ್ಯ ಚನ್ನಪ್ಪ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸಾಹಿತ್ಯ ಅಕಾಡೆಮಿ ಮಹತ್ವದ್ದು, ಜ್ಞಾನಪೀಠ ಪುರಸ್ಕೃತರು ಕೂಡ ಅಕಾಡೆಮಿ ಪ್ರಶಸ್ತಿ ಪಡೆದಿಲ್ಲ ಎಂಬುದು ಅತಿಶಯೋಕ್ತಿಯಲ್ಲ. 24 ಭಾಷೆಗಳಲ್ಲಿ ರಾಷ್ಟ್ರಾದ್ಯಂತ ಕೆಲಸ ಮಾಡುತ್ತಿದೆ. ಸುಮಾರು ಎಂಟು ಸಾವಿರ ಪುಸ್ತಕ ಪ್ರಕಟಣೆ ಮಾಡಿರುವುದು ವಿಶೇಷ ಎಂದರು.
ಬೇರೆ ಬೇರೆ ಭಾಷೆಗಳಲ್ಲಿ ಪುಸ್ತಕ ಬಹುಮಾನ ಪ್ರಶಸ್ತಿ, ಯುವ ಬರಹಗಾರರು, ಅನುವಾದ ಕೃತಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಅಕಾಡೆಮಿ ಪ್ರಶಸ್ತಿ ಮೌಲ್ಯ ಹೆಚ್ಚಿದೆ. 1962ರಲ್ಲಿ ಪ್ರಾರಂಭವಾದ ಅಕಾಡೆಮಿಗೆ ಪಂಡಿತ್ ಜವಾಹರಲಾಲ್ ನೆಹರು ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ನಂತರ ಸರ್ವಪಲ್ಲಿ ರಾಧಾಕೃಷ್ಣನ್, ಜಾಕೀರ್ ಹುಸೇನ್ ಕೂಡ ಅಧ್ಯಕ್ಷರಾಗಿದ್ದರು ಎಂದು ತಿಳಿಸಿದರು.ಯುವ ಸಾಹಿತಿ ಪ್ರಿಯಾಂಕಾ ಮಾತನಾಡಿ, ವಿಜ್ಞಾನ ಕಾಲೇಜುಗಳಲ್ಲಿ ಮಾತೃಭಾಷೆಗೆ ಪ್ರಾಮುಖ್ಯತೆ ಕಡಿಮೆ ಆಗುತ್ತಿದೆ. ವಿದ್ಯಾರ್ಥಿಗಳ ಮನಸ್ಥಿತಿ ಸೈನ್ಸ್ ಓದುವುದು, ಪದವಿ ಮುಗಿಸುವುದು, ದೊಡ್ಡ ಕಂಪನಿಯಲ್ಲಿ ದೊಡ್ಡ ಪ್ಯಾಕೇಜ್ ಪಡೆಯುವುದು ಗುರಿ ಆಗಿದೆ. ಅದು ಆಗಬಾರದು ಎಂದರು.
ಸೌರಭ ಸಾಂಸ್ಕೃತಿಕ ಸಂಸ್ಥೆಯ ಹಸ್ಮ ಮೇಲಿನಮನೆ ಉಪಸ್ಥಿತರಿದ್ದರು.ಸಾಹಿತ್ಯ ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ವೃತ್ತಿಯ ಜತೆಗೆ ಸಾಹಿತ್ಯವೂ ಮುಖ್ಯ. ಸಾಹಿತ್ಯ ನಮ್ಮನ್ನು ಬೆಳೆಸುತ್ತಿದೆ. ಕಲೆ, ಸಾಹಿತ್ಯವು ನಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ. ಹಾಗಾಗಿ ಪಾಲಕರು ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡಬೇಕು. ಬೆಂಗಳೂರಿನಲ್ಲಿ ಸಾಹಿತ್ಯ ಕಾರ್ಯಕ್ರಮ ಮಾಡಿದರೆ ಯುವಕರೇ ಹೆಚ್ಚು ಬರುತ್ತಾರೆ. ಆದರೆ ಜಿಲ್ಲೆ ಗಳಲ್ಲಿ ಯುವ ಪೀಳಿಗೆ ಆಸಕ್ತಿ ಕಳೆದುಕೊಳ್ಳುತ್ತಿರುವುದು ವಿಷಾದನೀಯ.
-ಶಂಕರ ಸಿಹಿಮೊಗ್ಗೆ, ಯುವ ಸಾಹಿತಿ
ಚಿಕ್ಕನಿಂದಲೂ ಕಥೆ, ಚಿತ್ರ ಬರೆಯುವುದು, ಕವಿತೆ ಎಂದರೆ ಧ್ಯಾನದಂತೆ. ಮಂಟೆಸ್ವಾಮಿ ಅವರ ಕಾವ್ಯ, ಶರೀಫರ ವಚನಗಳು, ಕುವೆಂಪು ಅವರ ಕಥೆಗಳ ಮೂಲಕ ಬೆಳಗಾಗುತ್ತಿತ್ತು. ಬಾಲ್ಯದಲ್ಲಿ ಕವಿತೆ ಚಟುವಟಿಕೆಯಂತಿತ್ತು. ಇಂದು ಕವಿತೆಗಳು ನಮಗೆ ಬದುಕಾಗಿವೆ.
| ಸಂಘಮಿತ್ರೆ ನಾಗರಘಟ್ಟ, ಯುವ ಸಾಹಿತಿ