ಸಾಹಿತಿಗಳು ಅಕ್ಷರವನ್ನು ಸಾಮಾಜಿಕ ಕಳಕಳಿಯಿಂದ ನೋಡಬೇಕು: ಸಾಹಿತಿ ಪ್ರೊ.ಬರಗೂರು

KannadaprabhaNewsNetwork | Published : May 20, 2024 1:32 AM

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚಳವಳಿಗಳಿಂದ ಅಂಚಿನ ಜನ ಅಕ್ಷರ ಕಲಿತರು. ಸಾಹಿತಿಯಾದವರು ಅಕ್ಷರವನ್ನು ಸಾಮಾಜಿಕ ಕಳಕಳಿಯಿಂದ ನೋಡಬೇಕು. ಏಕೆಂದರೆ ಅಕ್ಷರಕ್ಕೆ ಮಹತ್ವ ಇದೆ. ಅಕ್ಷರ ಎಂಬುದು ಅಹಂಕಾರದ ಆಯುಧವಾಗದೇ ಅರಿವು ವಿಸ್ತರಿಸುವ ಅಂತಃಕರಣವಾಗಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಸಾಹಿತಿಯಾದವರು ಅಕ್ಷರವನ್ನು ಸಾಮಾಜಿಕ ಕಳಕಳಿಯಿಂದ ನೋಡಬೇಕು. ಅಕ್ಷರವು ಅರಿವು ವಿಸ್ತರಿಸುವ ಅಂತಃಕರಣವಾಗಬೇಕು ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಚನ ಪ್ರಕಾಶನ ಸಹಯೋಗದಲ್ಲಿ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ.ಸಿ.ಪಿ.ಸಿದ್ಧಾಶ್ರಮ ಅವರ ಮೂರು ಕೃತಿಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚಳವಳಿಗಳಿಂದ ಅಂಚಿನ ಜನ ಅಕ್ಷರ ಕಲಿತರು. ಸಾಹಿತಿಯಾದವರು ಅಕ್ಷರವನ್ನು ಸಾಮಾಜಿಕ ಕಳಕಳಿಯಿಂದ ನೋಡಬೇಕು. ಏಕೆಂದರೆ ಅಕ್ಷರಕ್ಕೆ ಮಹತ್ವ ಇದೆ. ಅಕ್ಷರ ಎಂಬುದು ಅಹಂಕಾರದ ಆಯುಧವಾಗದೇ ಅರಿವು ವಿಸ್ತರಿಸುವ ಅಂತಃಕರಣವಾಗಬೇಕು ಎಂದರು.

ಗ್ಯಾಟ್ ಒಪ್ಪಂದದ ಪ್ರಕಾರ ಶಿಕ್ಷಣ ಕ್ಷೇತ್ರವನ್ನು ಉದ್ದಿಮೆಯಾಗಿ ದಾಖಲಿಸಲಾಗಿದೆ. ಶಿಕ್ಷಣ ಕ್ಷೇತ್ರ ಸೇವಾ ಕ್ಷೇತ್ರವಾಗಿ ಉಳಿಯದೇ ಉದ್ಯಮವಾಗಿದೆ. ಪ್ರಾಧ್ಯಾಪಕರು ಶೈಕ್ಷಣಿಕ ಕಾರ್ಖಾನೆಯ ಕೆಲಸಗಾರರು, ವಿದ್ಯಾರ್ಥಿಗಳು ಗೈಡ್. ಇದು ವರ್ತಮಾನದ ಶಿಕ್ಷಣದ ಪರಿಸ್ಥಿತಿ. ಮೇಷ್ಟ್ರು ಸ್ಥಾನ ಕಡಿಮೆಯಾಗಿ ಪ್ರಾಧ್ಯಾಪಕರ ಮಾನ ಹೆಚ್ಚಿದೆ. ಪ್ರಾಧ್ಯಾಪಕರ ಹುದ್ದೆಗಾಗಿ ಪೈಪೋಟಿ ಏರ್ಪಟ್ಟಿದೆ ಎಂದರು.

ಲೇಖಕನಿಗೆ ಅಂತಶಿಸ್ತೀಯ ಅಧ್ಯಯನ ಅವಶ್ಯಕ. ರಾಜಕೀಯ ಪ್ರಜ್ಞೆಯೂ ಇರಬೇಕಾದದ್ದು. ಚರಿತ್ರೆಯೂ ಗೊತ್ತಿರಬೇಕು. ಮಾನವಶಾಸ್ತ್ರ, ಸಮಾಜಶಾಸ್ತ್ರ, ಸಾಮಾಜಿಕತೆ ಒಳಗೊಂಡ ಬದುಕೇ ಸಾಹಿತ್ಯ. ಸಾಮಾಜಿಕ ಅಂತಃಕರಣ ಅವಶ್ಯ ಎಂದು ಅವರು ವಿವರಿಸಿದರು.

ಸಾಹಿತಿ, ಕಲಾಕಾರ ಭೂತದಿಂದ ಕಲಿತು, ವರ್ತಮಾನದಲ್ಲಿ ಬದುಕಿ ಭವಿಷ್ಯದ ಕನಸ್ಸು ಕಟ್ಟಬೇಕು. ಕಾಲದೊಳಗಿದ್ದು ಕಾಲವನ್ನು ಮೀರಬೇಕು. ಕನ್ನಡ ಸಾಹಿತ್ಯದೊಳಗೆ ಕಾಲವನ್ನು ಮೀರಿದವರ ಸಂಖ್ಯೆ 50 ಮೀರುವುದಿಲ್ಲ. ಕಾಲವನ್ನು ಮೀರಿದವರು ಮಾತ್ರ ಉಳಿದಿದ್ದಾರೆ ಎಂದರು.

ಪ್ರೊ.ಸಿ.ಸಿದ್ಧಾಶ್ರಮ ಅವರು ಸಮಾಜವಾದ ಮತ್ತು ವಿಚಾರವಾದಿಗಳನ್ನು ಟೀಕಿಸಿದ್ದಾರೆ. ಎಲ್ಲಾ ಸಮಾಜವಾದಿಗಳನ್ನು ಒಂದೇ ತೆರನಾಗಿ ಅಳತೆ ಮಾಡಬೇಕಿಲ್ಲ. ಇವತ್ತು ಸಮಾಜವಾದ ಸಂವಿಧಾನದಲ್ಲಿ ಮಾತ್ರ ಉಳಿದಿದೆ ಎಂದರು.

ಮಾನವೀತೆ-ಮತೀಯತೆ ಆಕ್ರಮಿಸಿದೆ. ಸಾಮಾಜಿಕ ವಿವೇಕ ಆರ್ಥಿಕ ವಿವೇಕವಾಗಿದೆ. ಸತ್ಯ ಸುಳ್ಳನ್ನು ಆವರಿಸಿದೆ. ಜಾತಿ ವಿನಾಶದ ಬದಲು ವಿಕಾಸವಾಗುತ್ತಿದೆ. ಪ್ರಜಾಪ್ರಭುತ್ವ ಸರ್ವಾಧಿಕಾರವಾಗುತ್ತಿದೆ. ಈ ಸಂಕಟ ಕಾಲದಲ್ಲಿ ಸೈದ್ಧಾಂತಿಕವಾಗಿ ಎಚ್ಚರವಾಗಿರುವುದು ಅವಶ್ಯ ಎಂದು ಅವರು ಸಲಹೆ ನೀಡಿದರು.

ಪ್ರೊ.ಸಿ.ಪಿ. ಸಿದ್ಧಾಶ್ರಮ ಅವರನ್ನು ನಾನು ಶ್ರದ್ಧಾಶ್ರಮ ಎಂದು ಕರೆಯುತ್ತೇನೆ. ಯಾವುದೇ ಕೆಲಸ ಒಪ್ಪಿದರೂ ಪೂರ್ಣ ಶ್ರದ್ಧೆ ತೋರುತ್ತಾರೆ. ಕಾವ್ಯ ಸ್ವರೂಪಿಯಾದ ಅವರ ಬರವಣಿಗೆಯಲ್ಲಿ ಸಾಮಾಜಿಕ ಕಾಳಜಿ ಕಳಕಳಿ ಇದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ವಿದ್ವಾಂಸ ಪ್ರೊ. ರಾಗೌ ಕೃತಿ ಬಿಡುಗಡೆಗೊಳಿಸಿದರು. ಪ್ರೊ.ಎಂ.ಎಚ್. ರುದ್ರಮುನಿ, ಡಾ.ಆರ್. ಗುರುಸ್ವಾಮಿ, ಡಾ.ಎಂ.ಎಸ್‌. ಅನಿತಾ ಕೃತಿ ಕುರಿತು ಮಾತನಾಡಿದರು. ಸಾಹಿತಿ ಪ್ರೊ.ಕೆ. ತಿಮ್ಮಯ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಪ್ರಕಾಶಕ ಕೆ.ಸಿ. ಓಂಕಾರಪ್ಪ ಇದ್ದರು. ಡಾ.ಜಿ. ಮಾದಪ್ಪ ನಿರೂಪಿಸಿದರು. ಶೇಷಣ್ಣ ಮತ್ತು ತಂಡದವರು ಪ್ರಾರ್ಥಿಸಿದರು.

Share this article