ನರಗುಂದ: ವಲಯದಲ್ಲಿನ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣದ 110 ವಿದ್ಯಾರ್ಥಿಗಳು ತಿಂಗಳಿಗೆ ₹58,400 ವರ್ಷಕ್ಕೆ ₹19 ಲಕ್ಷ 26 ಸಾವಿರ ಶಿಷ್ಯವೇತನ ಪಡೆಯುತ್ತಿದ್ದಾರೆ. ಶಿಷ್ಯವೇತನ ಮಂಜೂರಾತಿ ಪತ್ರಗಳನ್ನು ಪಡೆದು ಸದ್ಬಳಕೆ ಮಾಡಿಕೊಂಡು ಮನೆಗೆ, ಸಮಾಜಕ್ಕೆ, ದೇಶಕ್ಕೆ ಶ್ರೇಷ್ಠ ವ್ಯಕ್ತಿಗಳಾಗಿ ಸಮಾಜಮುಖಿ ಜೀವನ ಮಾಡಬೇಕು ಎಂದು ಸಂಘದ ಜಿಲ್ಲಾ ನಿರ್ದೇಶಕ ಯೋಗೇಶ ಎ. ಹೇಳಿದರು.
ಬುಧವಾರ ಪಟ್ಟಣ ವಲಯದ ಯೋಜನಾ ಕಚೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಜ್ಞಾನದೀಪ್ತಿ ಶಾಲಾ ಶಿಕ್ಷಣ ಕಾರ್ಯಕ್ರಮದಡಿ ರಾಜ್ಯದಲ್ಲಿನ 1030 ಅನುದಾನಿತ ಶಾಲೆಗಳಿಗೆ ₹8 ಸಾವಿರ ಗೌರವಧನದಡಿ ಅತಿಥಿ ಶಿಕ್ಷಕರನ್ನು ನೀಡಲಾಗಿದೆ. ಅಲ್ಲದೇ ಶಾಲಾ ಕೊಠಡಿ ನಿರ್ಮಾಣ, ಶೌಚಾಲಯ ನಿರ್ಮಾಣ, ಶಾಲಾ ದುರಸ್ತಿ, ಕುಡಿಯುವ ನೀರು, ಕ್ರೀಡಾ ಸಾಮಗ್ರಿಗಳಿಗೆ ಅನುದಾನ ನೀಡಲಾಗುತ್ತದೆ. ರಾಜ್ಯದಲ್ಲಿಯೇ 96,386 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ. ಸರ್ಕಾರಿ ನೌಕರಿಗೆ ಆಸೆ ಮಾಡದೆ ಸ್ವಂತ ಉದ್ಯೋಗದ ಮೇಲೆ ಮೇಲ್ಮಟ್ಟಕ್ಕೆ ಬೆಳೆಯಬೇಕು. ಸೌಲಭ್ಯಗಳ ಸದ್ಬಳಕೆ ಸರಿಯಾಗಿ ಆಗಲಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಮಾತನಾಡಿ, ಸಾಮಾಜಿಕ ಕಳಕಳಿಯಿಂದ ಸಂಘದ ಸದಸ್ಯರ ಮಕ್ಕಳಿಗೆ ಶಿಷ್ಯವೇತನ ನೀಡುತ್ತಿದೆ. ತಾಲೂಕಿನ 34 ಪ್ರೌಡಶಾಲೆಗಳ 10ನೇ ತರಗತಿಯಲ್ಲಿ1275 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸಂಘ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಈಗಿನಿಂದಲೇ ಪರೀಕ್ಷೆ ತಯಾರಿ ಮಾಡಿಕೊಳ್ಳಿ. ಭಾರತಕ್ಕೆ ಹೃದಯವಂತರ ಸಂಖ್ಯೆ ಬೇಕಾಗಿದೆ. ಉತ್ತಮ ಭವಿಷ್ಯಕ್ಕಾಗಿ ಬಡತನ, ಅಜ್ಞಾನ, ಮೂಢನಂಬಿಕೆಗಳನ್ನು ಮನೆಯಿಂದ ಹೊರಹಾಕಬೇಕಾಗಿದೆ. ಹೆಚ್ಚು ಅಂಕ ಪಡೆದ ಮಕ್ಕಳು ನಿಮ್ಮ ಮನೆಯ ಆಸ್ತಿಯೇ ಆಗುತ್ತಾರೆ. ಹೀಗಾಗಿ, ಅವರ ಶೈಕ್ಷಣಿಕ ಬೆಳವಣಿಗೆಗೆ ಪಾಲಕರು ಬೆನ್ನೆಲಬಾಗಿ ನಿಲ್ಲಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಎಚ್.ಬಿ. ಅಸೂಟಿ, ಸದಸ್ಯರಾದ ಕೊಟ್ರೇಶ ಕೊಟ್ರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸದಸ್ಯರಾದ ಪಾಂಡುರಂಗ ಪತ್ತಾರ, ಕ್ಷೇತ್ರ ಯೋಜನಾಧಿಕಾರಿ ಜಗದೀಶ ಭಂಡಾರಿ, ಯಾಸ್ಮಿನ್ ಭಾಗವಾನ, ಸೇರಿದಂತೆ ಮುಂತಾದವರು ಇದ್ದರು.