ಗದಗ: ಯುವಜನಾಂಗ ವಚನ ಸಾಹಿತ್ಯದ ತತ್ವ ಅರಿತು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಕಾಯಕ,ದಾಸೋಹ ಸಿದ್ಧಾಂತಗಳಡಿ ನವ ಸಮಾಜ ನಿರ್ಮಾಣವಾಗಬೇಕು ಎಂದು ತೋಂಟದಾರ್ಯ ಸಂಸ್ಥಾನಮಠದ ಜ.ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ಸಂಶೋಧಕ, ಸಾಹಿತ್ಯ ಪ್ರಚಾರಕ ಡಾ.ಫ.ಗು.ಹಳಕಟ್ಟಿಯವರು ವಕೀಲ ವೃತ್ತಿ ನಿರ್ವಹಿಸುತ್ತಿದ್ದರು.ಅವರ ವಚನ ಸಾಹಿತ್ಯದ ಮೇಲಿನ ಕಾಳಜಿ ಇಡೀ ರಾಜ್ಯಾದ್ಯಂತ ಅಲೆದಾಡಿ 12ನೇ ಶತಮಾನದ ಅನೇಕ ವಚನಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಶಾಶ್ವತವಾಗಿ ಉಳಿಸುವಲ್ಲಿ ಅವರ ಪಾತ್ರ ಮಹತ್ತರವಾದದ್ದು.ಬ್ರಿಟಿಷರ ಕಾಲದಲ್ಲಿ ಕನ್ನಡದ ಅತ್ಯಮೂಲ್ಯವಚನ ಸಾಹಿತ್ಯ ಪ್ರಕಟಿಸುವುದು ಸುಲಭ ಕಾರ್ಯವಾಗಿದ್ದಿಲ್ಲ.ಅವರಿಗೆ ಎದುರಾದ ಅಡೆತಡೆ ಎದುರಿಸಿ ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ತಮ್ಮ ಸ್ವಂತ ಮನೆ ಮಾರಿರುವುದು ಅವರ ದೃಢ ಇಚ್ಛಾಶಕ್ತಿ ಎಂತಹದು ಎಂದು ತಿಳಿಯುತ್ತದೆ ಎಂದರು.
ವೈಯಕ್ತಿಕ ಜೀವನದಲ್ಲಿ ಹಲವಾರು ತೊಂದರೆಗಳನ್ನು ಲೆಕ್ಕಿಸದೇ ವಚನಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿ ಜನಸಾಮಾನ್ಯರ ಜೀವನ ಬದಲಾಯಿಸುವಲ್ಲಿ ಮಹತ್ತರ ಪಾತ್ರ ಹೊಂದಿದ್ದಾರೆ. ಅವರ ಉನ್ನತ ವ್ಯಕ್ತಿತ್ವ ಮತ್ತು ವಚನ ಸಾಹಿತ್ಯದ ಮೇಲಿರುವ ಶ್ರದ್ಧೆ ಗಮನಿಸಿದ ಮಠಾಧೀಶರು ಫ.ಗು ಹಳಕಟ್ಟಿಯವರನ್ನು ಒಬ್ಬ ಶರಣರಂತೆ ಭಾವಿಸಿ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಿದ್ದಾರೆ ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ.ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯವು ಜನ ಸಾಮಾನ್ಯರ ಜೀವನ ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸದೆ ಇಂತಹ ವಚನಗಳನ್ನು ಶ್ರಮವಹಿಸಿ ಸಂಗ್ರಹಿಸಿದ ಫ.ಗು. ಹಳಕಟ್ಟಿಯವರ ಕಾರ್ಯ ಶ್ಲಾಘನೀಯವಾದದ್ದು, ಅರ್ಥಪೂರ್ಣ, ಅತ್ಯಮೂಲ್ಯ ವಚನ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಪಂ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ ಸೇರಿದಂತೆ ಗಣ್ಯರು ಇದ್ದರು.