ಕನ್ನಡಪ್ರಭ ವಾರ್ತೆ ಯಾದಗಿರಿ
ಸಗರನಾಡಿನ ಆರಾಧ್ಯ ದೈವ ಹಯ್ಯಾಳ ಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜಾನುವಾರುಗಳ ಜಾತ್ರೆ ಜೋರಾಗಿ ನಡೆಯುತ್ತಿದೆ.ಜಾತ್ರೆಯಲ್ಲಿ ಅಸಂಖ್ಯಾತ ಜಾನುವಾರುಗಳು ಸೇರಿದ್ದು, ಮಾರುವವರು, ಕೊಳ್ಳುವವರು ಸಂಖ್ಯೆಯೂ ಅಧಿಕವಾಗಿದೆ. ಒಂದು ಜೊತೆ ಎತ್ತುಗಳು ಅತಿ ಹೆಚ್ಚು ಅಂದರೆ ಸುಮಾರು 2.40 ಲಕ್ಷ ರು.ಗಳಿಗೆ ರು.ಗಳಿಗೆ ಮಾರಾಟವಾಗುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಮತ್ತಷ್ಟು ಮೆರಗು ತಂದಿದೆ.
ಈ ಜಾತ್ರೆಯಲ್ಲಿ ಕಿಲಾರಿ ತಳಿ, ದೊಡ್ಡಪಡಿ, ದೆವಣಿ, ಮೈಸೂರು ಕಿಲಾರಿ, ಕಂಬೇರಿ ಹೀಗೆ ವಿವಿಧ ತಳಿಯ ಎತ್ತುಗಳನ್ನು ರೈತರು ಖರೀದಿ ಮಾಡುತ್ತಿದ್ದಾರೆ. ಒಂದು ಎತ್ತಿನ ಬೆಲೆ ಸುಮಾರು 80000 ರು. ಬೆಲೆಗೆ ಮಾರಾಟವಾಗುತ್ತಿವೆ. ಜಾತ್ರೆಗೆ ಬಾಗಲಕೋಟೆ, ಬಿಜಾಪುರ, ಮಾನ್ವಿ, ರಾಯಚೂರು, ಕೊಪ್ಪಳ ಸೇರಿ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಾನುವಾರಗಳೊಂದಿಗೆ ಆಗಮಿಸಿದ್ದಾರೆ.ದೇವಸ್ಥಾನದ ಸುತ್ತಮುತ್ತಲಿನ ಸುಮಾರು 20 ಎಕರೆ ವಿಶಾಲವಾದ ಜಾಗದಲ್ಲಿ ಜಾನುವಾರಗಳ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಎತ್ತುಗಳಿಗೆ ಬೇಕಾದ ರಿಬ್ಬನ್, ಕೊರಳಿಗೆ ಕಟ್ಟುವ ಗಂಟೆ, ಗೆಜ್ಜೆ, ಹಗ್ಗ, ಬಣ್ಣಗಳ ಹೊದಿಕೆ ಇನ್ನಿತರ ಕೃಷಿಗೆ ಸಂಬಂಧಿಸಿದ ವಸ್ತುಗಳ ಖರೀದಿ ಜೋರಾಗಿತ್ತು. ಇಲ್ಲಿನ ಪಶುಪಾಲನೆ ಕೇಂದ್ರದ ವೈದ್ಯರಾದ ಡಾ. ವಿಶ್ವನಾಥ್ ರೆಡ್ಡಿ ಅವರು ಜಾತ್ರೆಯಲ್ಲಿರುವ ಜಾನುವಾರುಗಳಿಗೆ ಚಿಕಿತ್ಸೆಯ ವ್ಯವಸ್ಥೆಯ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ನಾವು ಈ ಜಾತ್ರೆಗೆ ಸುಮಾರು 15 ವರ್ಷಗಳಿಂದ ಬರುತ್ತಿದ್ದೇವೆ. ನಮ್ಮ ಹಳೆಯ ಎತ್ತುಗಳನ್ನು ಇಲ್ಲಿ ತಂದು ಮಾರಾಟ ಮಾಡಿ ಹೊಸ ಎತ್ತುಗಳನ್ನು ಖರೀದಿ ಮಾಡಿದ್ದೇವೆ ಎಂದು ಐಕೂರ ಗ್ರಾಮದ ರೈತ ದೇವೇಂದ್ರಪ್ಪ ಕಾವಲಿ ಹೇಳಿದರು.ರೈತರು ಮತ್ತು ಜಾನುವಾರುಗಳಿಗೆ ದೇವಸ್ಥಾನ ಸಮಿತಿ ವತಿಯಿಂದ ಜಾನುವಾರುಗಳಿಗೆ ಮೇವು ನೀರು ಮತ್ತು ರೈತರಿಗೆ ದಿನನಿತ್ಯ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದೇವೆ ಎಂದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೌನೇಶ್ ಪೂಜಾರಿ ಅವರು ತಿಳಿಸಿದರು.