ಕೋಲಾರ: ತಾಲೂಕಿನ ದೊಡ್ಡವಲ್ಲಬ್ಬಿ ಗ್ರಾಮದಲ್ಲಿ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ. ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ರೇಷ್ಮೆ ಕೃಷಿ ಮಹಾವಿದ್ಯಾಲಯ ಚಿಂತಾಮಣಿ, ಪಶು ಆರೋಗ್ಯ ಇಲಾಖೆ, ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಅಲ್ಯೂಮಿನಿ ಅಸೋಸಿಯೇಷನ್, ಬೆಂಗಳೂರು ಯುಎಎಸ್‌ನಿಂದ ಜಾನುವಾರುಗಳ ಆರೋಗ್ಯ ತಪಾಸಣಾ ಶಿಬಿರ ಹಾಗೂ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಿಬಿರವನ್ನು ಅಂತಿಮ ವರ್ಷದ ಬಿಎಸ್‌ಸಿ ಕೃಷಿ ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಆಯೋಜಿಸಿದ್ದು, ಗ್ರಾಮಸ್ಥರ ಸಕ್ರಿಯ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ರಾಸು ತಪಾಸಣಾ ಶಿಬಿರವನ್ನು ಕೃಷಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಎಂ.ವಿ. ಶ್ರೀನಿವಾಸರೆಡ್ಡಿ, ಡಾ. ರಾಮಕೃಷ್ಣ ನಾಯಕ್ ಸಂಜೀವ್ ಕ್ಯಾತಪ್ಪನವರ್, ಡಾ. ಮಂಜುನಾಥ ಗೌಡ ಮತ್ತು ಡಾ. ರಾಜೇಶ್ ಮತ್ತು ಬೆಳ್ಮರನಳ್ಳಿಯ ಪಶುವೈದ್ಯಾಧಿಕಾರಿಗಳಾದ ಡಾ. ವಿನಯ್ ಮತ್ತು ಡಾ. ಮೇಘನಾ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ರೈತರನ್ನು ಪ್ರೋತ್ಸಾಹಿಸಿ, ರಾಸುಗಳ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆಯಿರಿ, ರಾಸುಗಳ ಆರೋಗ್ಯದಲ್ಲಿ ಏರುಪೇರಾದರೆ ಹಾಲಿನ ಗುಣಮಟ್ಟದಲ್ಲೂ ವ್ಯತ್ಯಯವಾಗುತ್ತದೆ ಎಂದು ಎಚ್ಚರಿಸಿದರು.ಶಿಬಿರದಲ್ಲಿ ಹಸು, ಕುರಿ, ನಾಯಿ ಮುಂತಾದ ಎಲ್ಲಾ ಜಾನುವಾರುಗಳಿಗೆ ಆರೋಗ್ಯ ತಪಾಸಣೆ, ಪಶುಗಳಿಗೆ ಲಸಿಕೆ ಹಾಗೂ ಇಂಜೆಕ್ಷನ್‌ಗಳ ವಿತರಣೆ, ನಾಯಿಗಳಿಗೆ ಹುಚ್ಚುನಾಯಿ (ರೇಬೀಸ್) ಲಸಿಕೆ, ಆಕಳುಗಳಿಗೆ ಗರ್ಭಪರೀಕ್ಷೆ, ಅಗತ್ಯವಾದ ಗುಳಿಗೆಗಳು ಮತ್ತು ಪೌಷ್ಟಿಕ ಆಹಾರ ನೀಡಲಾಯಿತು.
ಡಾ. ವಿನಯ್, ರೈತರಿಗೆ ಜಾನುವಾರುಗಳ ಸರಿಯಾದ ಆರೈಕೆ ಹಾಗೂ ಲಸಿಕೆಗಳ ಮಹತ್ವದ ಕುರಿತು ಉಪಯುಕ್ತವಾದ ಸಂದೇಶ ಹಂಚಿಕೊಂಡರು.ವಿದ್ಯಾರ್ಥಿಗಳಾದ ಅಭಿರಾಮಿ, ಐಶ್ವರ್ಯ ಡಿ., ಐಶ್ವರ್ಯ ಟಿ.ಎಸ್., ಅಜಿತ್, ಅಕ್ಷಯ್, ಅಂಕಿತ್, ಅಮೂಲ್ಯ, ಅರ್ಜುನ್, ಬೀರಪ್ಪ, ಬೆಳ್ಳಿ, ಭಾವನಾ, ಭಾವನಾ ಎಂ.ಜೆ, ಚನ್ನಯ್ಯ ಹಾಗೂ ಚೇತನ್ ರ ತಂಡವು ಶ್ರದ್ಧೆ, ಶ್ರಮ ಹಾಗೂ ಸೇವಾಭಾವದಿಂದ ಶಿಬಿರವನ್ನು ಯಶಸ್ವಿಯಾಗಿ ನಿರ್ವಹಿಸಿದರು.