ಸಂಡೂರು: ಸಾವಯವ ಕೃಷಿ ಇಂದಿನ ಅಗತ್ಯವಾಗಿದೆ. ಪ್ರಕೃತಿಯ ಜತೆಗೆ ಬದುಕಿದರೆ ಆಯುಷ್ಯ ವೃದ್ಧಿ, ಸಾವಯವ ಕೃಷಿ ಮರೆತರೆ ಆಪತ್ತು ಎದುರಿಸಬೇಕಾಗುತ್ತದೆ ಎಂದು ಸಂಡೂರಿನ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಅಭಿಪ್ರಾಯಪಟ್ಟರು.
ಮಠದ ೧೭ ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಅಭಿವೃದ್ಧಿ ಪಡಿಸಿದ ತೋಟದ ಕುರಿತು ವಿವರಿಸಿದ ಸ್ವಾಮೀಜಿ, ನಾವು ತೋಟವನ್ನು ಲಾಭದ ದೃಷ್ಟಿಯಿಂದ ಅಭಿವೃದ್ಧಿ ಪಡಿಸಿಲ್ಲ. ಸಾವಯವ ಪದ್ಧತಿಯಲ್ಲಿ ವೈವಿಧ್ಯಮಯ ಗಿಡಮರಗಳನ್ನು ಬೆಳೆಸಿರುವುದರಿಂದ, ಇಲ್ಲಿ ವಿವಿಧ ಜಾತಿಯ ಪಕ್ಷಿಗಳು ಬರುತ್ತವೆ. ಅವುಗಳಿಂದ ಗಿಡಮರಗಳಿಗೆ ಕ್ರಿಮಿಕೀಟಗಳ ಬಾಧೆ ಇಲ್ಲದಂತಾಗಿದೆಯಲ್ಲದೆ, ಪರಾಗಸ್ಪರ್ಷಕ್ಕೂ ಅನುಕೂಲವಾಗಿದೆ. ಇಳುವರಿ ಜಾಸ್ತಿಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ನೀರನ್ನು ಇಂಗಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಇದನ್ನು ಮಾದರಿ ತೋಟವನ್ನಾಗಿಸಲು ಚಿಂತನೆ ನಡೆದಿದೆ. ಶ್ರೀಮಠದಿಂದ ೨ ವರ್ಷಕ್ಕೊಮ್ಮೆಯಾದರೂ ಒಬ್ಬ ಸಾಧಕ ರೈತರಿಗೆ ಬಸವ ಬೆಳಗು ಪ್ರಶಸ್ತಿ ನೀಡುವ ಚಿಂತನೆ ನಡೆಸಲಾಗಿದೆ ಎಂದರು.
ಆಹಾರವೇ ಔಷಧಿಯಾಗಬೇಕು: ರೈತ ಮುಖಂಡರಾದ ವಿಶ್ವೇಶ್ವರ ಸಜ್ಜನ್ ಮಾತನಾಡಿ, ಶ್ರೀಮಠದಿಂದ ಅಭಿವೃದ್ಧಿಪಡಿಸಲಾಗಿರುವ ತೋಟ ಆಮ್ಲಜನಕ ಉತ್ಪಾದಿಸುವ ಫ್ಯಾಕ್ಟರಿಯಂತಿದೆ. ಕೃಷಿಕರು ತಮಗಿರುವ ಹೊಲದ ಕೆಲವು ಭಾಗದಲ್ಲಿ ಬಹು ವಾರ್ಷಿಕ ಬೆಳಗಳು ಅಂದರೆ ವಿವಿಧ ಗಿಡಮರಗಳನ್ನು ಬೆಳೆಸಬೇಕು. ಒಂದು ಎಕರೆ ಬೇಲ (ಬೆಳವಲ ಹಣ್ಣಿನ ಮರಗಳು) ಬೆಳೆಸಿದರೆ, ಅಡಕೆ ತೋಟಕ್ಕಿಂತ ಹೆಚ್ಚಿನ ಲಾಭ ಗಳಿಸಬಹುದು. ಬೇಲದಲ್ಲಿ ಹಲವು ಔಷಧೀಯ ಗುಣಗಳಿವೆ. ನಮ್ಮ ಆಹಾರವೇ ಔಷಧಿಯಾಗಬೇಕು. ಗಿಡಮರಗಳಿಂದ ಆದಾಯ ಜಾಸ್ತಿ. ರೈತನೇ ತಾನು ಬೆಳೆದ ಬೆಳೆಗೆ ಬೆಲೆಯನ್ನು ನಿರ್ಧರಿಸುವಂತಾಗಬೇಕು ಎಂದು ಹೇಳಿದರು.ಸಾವಯವ ಕೃಷಿ ತಜ್ಞ ಮಲ್ಲಿಕಾರ್ಜುನ್ ಹೊಸಪಾಳ್ಯ ಮಾತನಾಡಿ, ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸಾವಯವ ಉತ್ಪನ್ನಗಳು ಈಗ ವಿದೇಶಗಳಿಗೂ ರಫ್ತಾಗುತ್ತಿವೆ. ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ೨ ದಿನಗಳ ಸಾವಯವ ಹಾಗೂ ಸಿರಿಧಾನ್ಯ ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆಯಿತು. ಸಾವಯವ ರೈತರಿಗೆ ಮಾರುಕಟ್ಟೆಯನ್ನು ಒದಗಿಸಬೇಕಿದೆ. ವಾರದಲ್ಲಿ ಒಂದು ದಿನ ರೈತರ ಸಂತೆ ನಡೆಸಲು ಚಿಂತನೆ ನಡೆಸಲಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಈ ಕುರಿತು ಮಾತುಕತೆ ನಡೆದಿದೆ. ಬಳ್ಳಾರಿ ಜಿಲ್ಲೆಯಲ್ಲಿಯೂ ಈ ಯೋಜನೆ ಕಾರ್ಯರೂಪಕ್ಕೆ ತರಬೇಕಿದೆ ಎಂದರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹನುಮಪ್ಪ ನಾಯಕ ಮಾತನಾಡಿದರು. ಸಾವಯವ ಕೃಷಿಕ ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಲವು ರೈತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಹಗರಿ ಬಸವರಾಜಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.