ಗುಂಪು ಮನೆ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಸಾಲ ನೀಡಿ: ಡಿಸಿ ಸೂಚನೆ

KannadaprabhaNewsNetwork |  
Published : Nov 23, 2023, 01:45 AM IST
ಚಿಕ್ಕಮಗಳೂರು ನಗರಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಬುಧವಾರ ಜಿ ಪ್ಲಸ್‌ ಟೂ ಮಾದರಿಯ ಗುಂಪು ಮನೆಗಳಿಗೆ ಆಯ್ಕೆಗೊಂಡಿರುವ ಫಲಾನುಭವಿಗಳ ಸಾಲ ಮಂಜೂರು ಪತ್ರವನ್ನು ವಿತರಿಸಿದರು. ಉಪಾಧ್ಯಕ್ಷ ಅಮೃತೇಶ್‌, ಪೌರಾಯುಕ್ತ ಬಿ.ಸಿ. ಬಸವರಾಜ್‌ ಇದ್ದಾರೆ. | Kannada Prabha

ಸಾರಾಂಶ

ಗುಂಪು ಮನೆ ಫಲಾನುಭವಿಗಳಿಗೆ ಸಾಲ ನೀಡಿ: ಡಿಸಿ

ಜಿ ಪ್ಲಸ್‌ ಟೂ ಮಾದರಿಯ ಮನೆಗಳಿಗೆ ಆಯ್ಕೆಗೊಂಡಿರುವ ಫಲಾನುಭವಿಗಳ ಸಾಲ ಮೇಳ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಜಿ ಪ್ಲಸ್‌ ಟು ಮಾದರಿಯ ಗುಂಪು ಮನೆಗಳಿಗೆ ಆಯ್ಕೆಗೊಂಡಿರುವ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಬ್ಯಾಂಕುಗಳು ಸಾಲ ಮಂಜೂರು ಮಾಡಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.

ಬುಧವಾರ ನಗರಸಭೆಯಲ್ಲಿ ಏರ್ಪಡಿಸಿದ್ದ ಜಿ ಪ್ಲಸ್‌ ಟು ಮಾದರಿಯ ಗುಂಪು ಮನೆಗಳಿಗೆ ಆಯ್ಕೆಗೊಂಡಿರುವ ಫಲಾನುಭವಿಗಳ ಸಾಲ ಮೇಳದಲ್ಲಿ ಭಾಗವಹಿಸಿ ಮಾತನಾಡಿದರು. ಆಯ್ಕೆಯಾಗಿರುವ ಫಲಾನುಭವಿಗಳು ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಅವಕಾಶ ಇದೆ. ಸಾಲಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಸಲ್ಲಿಸಿ ನಿಗದಿತ ಸಮಯದಲ್ಲಿ ಸಾಲ ಪಡೆಯಿರಿ ಎಂದು ಹೇಳಿದ ಅವರು, ದಾಖಲೆ ಸರಿ ಇದ್ದರೂ ಸಾಲ ಕೊಡುವುದು ವಿಳಂಭ ಮಾಡುವ ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಪೌರಾಯುಕ್ತ ಬಿ.ಸಿ. ಬಸವರಾಜ್‌ ಮಾತನಾಡಿ, ಸಮರ್ಪಕವಾಗಿ ಗುಂಪು ಮನೆಗಳ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಬ್ಯಾಂಕ್‌ಗಳಿಂದ ಸಾಲ ದೊರೆಯುತ್ತಿಲ್ಲ ಎಂದು ವ್ಯಾಪಕವಾಗಿ ಬಂದ ದೂರಿನ ಹಿನ್ನೆಲೆಯಲ್ಲಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ಸೂಕ್ತ ಸಮಯದಲ್ಲಿ ಸಾಲ ಮಂಜೂರು ಮಾಡುವಂತೆ ಸೂಚಿಸಲಾಗಿದೆ ಎಂದರು.

ಈಗಾಗಲೇ ಕೆನರಾ ಬ್ಯಾಂಕ್ ಶಾಖೆಗೆ 300 ಅರ್ಜಿಗಳು ಬಂದಿದ್ದು, 130 ಅರ್ಜಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. ಜಿ ಪ್ಲಸ್‌ ಟು ಮಾದರಿ ಮನೆಗಳ ಫಲಾನುಭವಿಗಳು ಬಹುತೇಕ ಕೂಲಿ ಕಾರ್ಮಿಕ ರಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಬ್ಯಾಂಕನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ದಾಖಲೆ ಪಡೆಯುವ ಸಂದರ್ಭದಲ್ಲಿಯೇ ಪರಿಶೀಲಿಸಿ, ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ತಕ್ಷಣ ಸಾಲ ಮಂಜೂರು ಮಾಡಬೇಕೆಂದು ಹೇಳಿದರು.

ಈ ಸಂಬಂಧ ಬ್ಯಾಂಕಿನ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ನಗರಸಭೆ ಇಂಜಿನಿಯರ್ ಸಿಬ್ಬಂದಿ ಅಗತ್ಯ ದಾಖಲೆಗಳನ್ನು ಸ್ಥಳದಲ್ಲಿ ವಿತರಿಸಿ ಸಾಲ ದೊರೆಯಲು ಅನುಕೂಲವಾಗುವಂತೆ ಸೂಚಿಸಿದ್ದಾರೆ. ವಾಜಪೇಯಿ ಬಡಾವಣೆ ಬಳಿ ಜಿ ಪ್ಲಸ್‌ ಟು, ಹೈಟೆಕ್ ಮನೆಗಳು ನಿರ್ಮಾಣವಾಗುತ್ತಿದ್ದು ಈಗಾಗಲೇ 800 ರಿಂದ 900 ಮನೆಗಳು ನಿರ್ಮಾಣದ ಕೊನೆ ಹಂತದಲ್ಲಿವೆ ಎಂದರು.

ಮನೆಗಳಿಗೆ ವಿದ್ಯುತ್ ಸಂಪರ್ಕ, ಪೇಂಟಿಂಗ್‌ ಮುಂತಾದ ಕೆಲಸ ಬಾಕಿ ಇದ್ದು, ಬ್ಯಾಂಕಿಗೆ ಮೊದಲು ದಾಖಲೆ ಸಲ್ಲಿಸಿ ಸಾಲ ಮಂಜೂರು ಮಾಡಿಸುವ ಫಲಾನುಭವಿಗಳಿಗೆ ಮನೆ ವಿತರಿಸಲು ಕ್ರಮ ವಹಿಸ ಲಾಗುವುದು. ಜಿಲ್ಲಾಧಿಕಾರಿ, ಶಾಸಕರು, ತಾವೂ ಸೇರಿದಂತೆ ನಿಮ್ಮ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಇದು 2023 ರೊಳಗೆ ಸರ್ವರಿಗೂ ಸೂರು ಇರಬೇಕೆಂಬುದು ಪ್ರಧಾನ ಮಂತ್ರಿಗಳ ಆಶಯವಾಗಿದೆ. ಬೆಂಗಳೂರಿನ ಅಪಾರ್ಟ್‌ಮೆಂಟ್‌ ರೀತಿ ಜಿ ಪ್ಲಸ್‌ ಟು ಮಾದರಿಯ ನಿಮ್ಮ ಕನಸಿನ ಮನೆ ಪಡೆಯಲು ಆಸಕ್ತಿವಹಿಸಿ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಅತಿ ಶೀಘ್ರದಲ್ಲಿ ಸಾಲ ಪಡೆಯಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್, ವಿವಿಧ ಬ್ಯಾಂಕುಗಳ ಅಧಿಕಾರಿಗಳು, ನಗರಸಭೆ ಸಿಬ್ಬಂದಿ ಹಾಗೂ ಫಲಾನುಭವಿಗಳು ಹಾಜರಿದ್ದರು. 22 ಕೆಸಿಕೆಎಂ 3ಚಿಕ್ಕಮಗಳೂರು ನಗರಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಬುಧವಾರ ಜಿ ಪ್ಲಸ್‌ ಟು ಮಾದರಿ ಗುಂಪು ಮನೆಗಳಿಗೆ ಆಯ್ಕೆಗೊಂಡಿರುವ ಫಲಾನುಭವಿಗಳ ಸಾಲ ಮಂಜೂರು ಪತ್ರ ವಿತರಿಸಿದರು. ಉಪಾಧ್ಯಕ್ಷ ಅಮೃತೇಶ್‌, ಪೌರಾಯುಕ್ತ ಬಿ.ಸಿ. ಬಸವರಾಜ್‌ ಇದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ