ಕನ್ನಡಪ್ರಭವಾರ್ತೆ ನಾಗಮಂಗಲ
ಹಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ 2025ರ ಮಾ.1ಕ್ಕೆ ಇತ್ಯರ್ಥಕ್ಕೆ ಬಾಕಿ ಇರುವ 2261 ಪ್ರಕರಣಗಳ ಪೈಕಿ 235 ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ರಾಜೀಸಂಧಾನಕ್ಕೆ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 75.38 ಲಕ್ಷ ರು. ಆರ್ಥಿಕ ಮೌಲ್ಯವುಳ್ಳ 121 ಪ್ರಕರಣಗಳು ಎರಡೂ ಕಡೆಯ ಕಕ್ಷಿದಾರರು ಮತ್ತು ವಕೀಲರ ಸಮಕ್ಷಮದಲ್ಲಿ ಇತ್ಯರ್ಥಗೊಂಡವು.
ಅಪರ ಹಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ 2025ರ ಮಾ.1ಕ್ಕೆ ಇತ್ಯರ್ಥಕ್ಕೆ ಬಾಕಿ ಇರುವ 1445 ಪ್ರಕರಣಗಳ ಪೈಕಿ 173 ಪ್ರಕರಣಗಳನ್ನು ರಾಜೀಸಂಧಾನಕ್ಕೆ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 42,30,596ರು. ಆರ್ಥಿಕ ಮೌಲ್ಯವುಳ್ಳ 45 ಪ್ರಕರಣಗಳು ಇತ್ಯರ್ಥಗೊಂಡವು.ಪ್ರಧಾನ ಸಿವಿಲ್ ನ್ಯಾಯಾಲಯದಲ್ಲ್ಲಿ 2025ರ ಮಾ.1ಕ್ಕೆ ಇತ್ಯರ್ಥಕ್ಕೆ ಬಾಕಿ ಇರುವ 2431 ಪ್ರಕರಣಗಳ ಪೈಕಿ 258 ಪ್ರಕರಣಗಳನ್ನು ರಾಜೀಸಂಧಾನಕ್ಕೆ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 18.27ಲಕ್ಷರು. ಆರ್ಥಿಕ ಮೌಲ್ಯವುಳ್ಳ100 ಪ್ರಕರಣಗಳು ಇತ್ಯರ್ಥಗೊಂಡವು.
ಇನ್ನುಳಿದಂತೆ ನಾಲ್ಕೂ ನ್ಯಾಯಾಲಯಗಳಲ್ಲಿ ಹಲವು ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿದ 11806 ಪ್ರಕರಣಗಳನ್ನು ರಾಜೀಸಂಧಾನಕ್ಕೆ ಕೈಗೆತ್ತಿಕೊಂಡು 37,69,494 ರು. ಆರ್ಥಿಕ ಮೌಲ್ಯವುಳ್ಳ 11167 ಪ್ರಕರಣಗಳು ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡವು.
ಕಳೆದ 2006ರಲ್ಲಿ ಮಂಡ್ಯದ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣವೊಂದು ಇಲ್ಲಿನ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. 23 ವರ್ಷಗಳ ಹಿಂದಿನ ಈ ಪ್ರಕರಣವನ್ನು ಎರಡೂ ಕಡೆಯ ಕಕ್ಷಿದಾರರು ಮತ್ತು ವಕೀಲರ ಸಮಕ್ಷಮದಲ್ಲಿ ನ್ಯಾಯಾಧೀಶ ಎಂ.ನರಸಿಂಹಮೂರ್ತಿ ಅವರು ಇತ್ಯರ್ಥ ಪಡಿಸಿದರೆ, 12 ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಜಮೀನು ವಿವಾದ ಪ್ರಕರಣವೊಂದನ್ನು ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ ಇತ್ಯರ್ಥಪಡಿಸಿದರು.
ಈ ವೇಳೆ ಹಿರಿಯ ಶ್ರೇಣಿಯ ನ್ಯಾಯಾಧೀಶ ಯೋಗೇಶ್ ಮಾತನಾಡಿ, ಕಾನೂನಿನ ಅರಿವಿನ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದ ಜನರು ಕ್ಷುಲ್ಲಕ ಕಾರಣವನ್ನೇ ನೆಪ ಮಾಡಿಕೊಂಡು ನ್ಯಾಯಾಲಯದ ಮೊರೆಹೋಗುತ್ತಾರೆ. ಇದರಿಂದ ದ್ವೇಷ, ವೈಶಮ್ಯದ ಜೊತೆಗೆ ಹಣ ಹಾಗೂ ಸಮಯ ವ್ಯರ್ಥವಾಗುವುದೇ ಹೊರತು ಯಾವುದೇ ಸಾಧನೆ ಮಾಡಿದಂತಾಗುವುದಿಲ್ಲ. ಹಣ ಮತ್ತು ಸಮಯ ವ್ಯರ್ಥವಿಲ್ಲದೆ ನ್ಯಾಯಾಲಯದಲ್ಲಿರುವ ತಮ್ಮ ವ್ಯಾಜ್ಯಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡಿರುವ ಕಕ್ಷಿದಾರರು ಸಹೋದರತ್ವ ಭಾವನೆಯಿಂದ ಸೌಹಾರ್ದಯುತ ಬದುಕು ನಡೆಸಬೇಕು. ಸಣ್ಣ ಪುಟ್ಟ ಜಗಳವನ್ನೇ ದೊಡ್ಡದು ಮಾಡಿಕೊಂಡು ವ್ಯಕ್ತಿ ಪ್ರತಿಷ್ಟೆಗಾಗಿ ನ್ಯಾಯಾಲಯದ ಮೆಟ್ಟಿಲೇರಬಾರದು ಎಂದರು.
ಈ ವೇಳೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹದೇವು, ಸಹಾಯಕ ಸರ್ಕಾರಿ ಅಭಿಯೋಜಕರಾದ ಅರುಣಾಬಾಯಿ, ಟಿ.ಆರ್.ಶ್ರೀದೇವಿ, ವಕೀಲರಾದ ಸುಬ್ರಹ್ಮಣ್ಯ, ಹರ್ಷ, ಕೆ.ಬಿ.ಶಿವಮೂರ್ತಿ, ಎಂ.ಎಸ್.ರವಿಕುಮಾರ್, ಹೇಮ, ಎಂ.ಪಿ.ಪ್ರಭುಸ್ವಾಮಿ, ಕಾನೂನು ಸೇವಾ ಸಮಿತಿಯ ಸೋನುಮೂರ್ತಿ, ರಮೇಶ್ ಸೇರಿದಂತೆ ಹಲವು ವಕೀಲರು ಇದ್ದರು.