ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುಕಳೆದ 33 ವರ್ಷಗಳಿಂದ ಸೋಲಿನ ಸರಪಳಿಯಲ್ಲಿದ್ದ ದಕ್ಷಿಣ ಕನ್ನಡ ಕಾಂಗ್ರೆಸ್ ಪಾಳೆಯಕ್ಕೆ ಈ ಬಾರಿಯ ಲೋಕಸಭಾ ಚುನಾವಣೆ ಹೊಸ ಹುಮ್ಮಸ್ಸು ತಂದುಕೊಟ್ಟ ಚುನಾವಣೆಯಾಗಿ ಗಮನ ಸೆಳೆದಿದೆ. ಇತ್ತೀಚಿನ ಯಾವ ಚುನಾವಣೆಯಲ್ಲೂ ಇಲ್ಲದಂಥ ಬಿರುಸಿನ ಚಟುವಟಿಕೆ ಕೈ ಕಾರ್ಯಕರ್ತರಲ್ಲಿ ಈ ಬಾರಿ ಕಂಡುಬಂದಿದೆ.
ಹಿಂದೆ ಲೋಕಸಭೆ ಮಾತ್ರವಲ್ಲ, ವಿಧಾನಸಭೆ ಚುನಾವಣೆಯಲ್ಲೂ ಒಂದಿಲ್ಲೊಂದು ಕಾರಣಕ್ಕೆ ಗುಂಪುಗಾರಿಕೆಯಿಂದ ಜಿಲ್ಲೆಯ ಕಾಂಗ್ರೆಸ್ ಪಾಳೆಯ ನಲುಗುತ್ತಿತ್ತು. ಈ ಕಾರಣದಿಂದಲೇ ಅನೇಕ ಚುನಾವಣೆಗಳಲ್ಲಿ ಸೋಲನುಭವಿಸಿದೆ. ಲೋಕಸಭೆ ಚುನಾವಣೆಯಲ್ಲಿ ಸುದೀರ್ಘ 3 ದಶಕಗಳ ಕಾಲ ಸೋಲಿನ ಸುಳಿಗೆ ಸಿಲುಕಲು ಆಂತರಿಕ ಸಂಘರ್ಷವೂ ದೊಡ್ಡ ಕೊಡುಗೆ ನೀಡಿತ್ತು. ಆದರೆ ಇದೇ ಮೊದಲ ಬಾರಿಗೆಂಬಂತೆ ಎಲ್ಲ ರೀತಿಯ ಗುಂಪುಗಾರಿಕೆ, ಒಳ ಜಗಳಗಳಿಂದ ಕಾಂಗ್ರೆಸ್ ಪಾಳೆಯ ಮುಕ್ತವಾಗಿದೆ. ಹಾಗಾಗಿ ಎದುರಾಳಿ ಪಕ್ಷಗಳಿಗೂ ಆತಂಕ ಆಗುವಷ್ಟರ ಮಟ್ಟಿಗೆ ಕೈ ಕಾರ್ಯಕರ್ತರ ಹುಮ್ಮಸ್ಸು ಜಿಲ್ಲಾದ್ಯಂತ ಕಂಡುಬಂದಿದೆ.ವಿವಾದಾತೀತ ಅಭ್ಯರ್ಥಿ ‘ದಾಳ’:
ಕಳೆದ ಲೋಕಸಭೆ ಚುನಾವಣೆಯಲ್ಲಿ ಹೊಸ ಅಭ್ಯರ್ಥಿ, ಯುವ ನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸಿದ್ದರೂ ಕಾಂಗ್ರೆಸ್‌ನ ಒಂದು ವರ್ಗ ತಟಸ್ಥವಾಗಿ ಗರಿಷ್ಠ ಅಂತರದ ಸೋಲು ಕಂಡಿತ್ತು. ಇದನ್ನು ಮನಗಂಡ ಕಾಂಗ್ರೆಸ್ ಈ ಬಾರಿ ವಿವಾದಗಳೇ ಇಲ್ಲದ, ಗರಿಷ್ಠ ಮತದಾರರ ಸಮುದಾಯದ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುವ ದಾಳ ಉರುಳಿಸಿರುವುದೇ ಈ ಎಲ್ಲ ಹೊಸ ಬೆಳವಣಿಗಳಿಗೆ ಮುಖ್ಯ ಕಾರಣ.ಅಭ್ಯರ್ಥಿ ಪದ್ಮರಾಜ್ ಆರ್. ವರ್ಷದ ಹಿಂದಷ್ಟೇ ಸಕ್ರಿಯ ರಾಜಕಾರಣಕ್ಕೆ ಬಂದವರು. ಜಿಲ್ಲೆಯ ಯಾವ ಮುಖಂಡರೊಂದಿಗೂ ಯಾವುದೇ ರೀತಿಯ ವೈಮನಸ್ಸು ಹೊಂದಿಲ್ಲ. ಸ್ಪರ್ಧೆಗೆ ಪ್ರಬಲ ಪೈಪೋಟಿಯೇ ಇರಲಿಲ್ಲ. ಜಿಲ್ಲೆಯ ಮುಖಂಡರೆಲ್ಲರೂ ಒಮ್ಮನಸ್ಸಿನಿಂದ ಪದ್ಮರಾಜ್ ಅವರನ್ನು ಒಪ್ಪಿಕೊಂಡಿದ್ದರು. ಪದ್ಮರಾಜ್ ಕೂಡ ಪ್ರತಿ ನಾಯಕರನ್ನೂ ವಿಶ್ವಾಸಕ್ಕೆ ಪಡೆದುಕೊಂಡರು. ಒಬ್ಬನೇ ಒಬ್ಬ ನಾಯಕನ ಅಪಸ್ವರ ಇಲ್ಲದಿದ್ದುದರಿಂದ ಸರ್ವ ಕಾರ್ಯಕರ್ತರೂ ಒಗ್ಗಟ್ಟಿನಿಂದ ಫೀಲ್ಡಿಗೆ ಇಳಿಯುವಂತಾಯಿತು.ಎದುರಾಳಿ ಬಿರುಕು ತಂದ ವಿಶ್ವಾಸ:
ಜತೆಗೆ ರಾಜ್ಯದಲ್ಲಿ ಅತ್ಯಧಿಕ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡಿದ್ದು ದ.ಕ. ಕೈ ಕಾರ್ಯಕರ್ತರಲ್ಲೂ ಜೋಶ್ ಹುಟ್ಟಿಸಿತ್ತು. ಈ ಬಾರಿಯಾದರೂ ಕರಾವಳಿಯಲ್ಲಿ ಪಕ್ಷ ಗೆಲ್ಲಿಸಲೇಬೇಕು ಎಂಬ ಒತ್ತಡ, ಹಠ ನಾಯಕರಲ್ಲೂ, ಕಾರ್ಯಕರ್ತರಲ್ಲೂ ಸೃಷ್ಟಿಯಾಗಿತ್ತು. ಇದೇ ವೇಳೆ ಚುನಾವಣೆಯ ಪರ್ವ ಕಾಲದಲ್ಲಿ ಎದುರಾಳಿ ಬಿಜೆಪಿ ಪಕ್ಷದಲ್ಲಿ ಒಡಕು ಸೃಷ್ಟಿಯಾಗಿದ್ದು, ಕೈ ಕಾರ್ಯಕರ್ತರ ಆತ್ಮವಿಶ್ವಾಸಕ್ಕೆ ಕಾರಣವಾಯಿತು.ಇತ್ತ ಕಡೆ ಬಿಲ್ಲವ ಸಮುದಾಯದ ಮುಖಂಡರು, ಸಂಘಟನೆಗಳು, ಯುವಕರು ಕೈಜೋಡಿಸಿದರು. ಎಲ್ಲೆಡೆ ಆಶಾ ಭಾವನೆಯ ವಾತಾವರಣ ಸೃಷ್ಟಿಯಾದಾಗ ಕೈ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಸಿತ್ತು. ಕೊನೆ ಹಂತದವರೆಗೂ ಅದೇ ಹುಮ್ಮಸ್ಸಿನ, ಯುದ್ಧೋಪಾದಿಯ ಹೋರಾಟ ಜಿಲ್ಲಾದ್ಯಂತ ಕಂಡುಬಂತು. ಮತದಾನ ದಿನದವರೆಗೂ ಈ ಜೋಶ್ ಇತ್ತು ಎನ್ನುವುದೇ ಈ ಚುನಾವಣೆಯ ವಿಶೇಷ. ಇದರ ಫಲಿತಾಂಶ ಏನು, ಕಾದು ನೋಡಬೇಕು!
ಕಾರ್ಯಕರ್ತರಿಗೆ ಶಕ್ತಿ ನೀಡಿದ ಗ್ಯಾರಂಟಿ!ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಮತದಾರರ ಬಳಿ ಹೋಗಲು ಪ್ರಬಲ ವಿಷಯಗಳೇ ಇರಲಿಲ್ಲ. ಮೋದಿ- ಹಿಂದುತ್ವ ಅಲೆಯಲ್ಲಿ ಎಲ್ಲವೂ ಕೊಚ್ಚಿ ಹೋಗಿತ್ತು. ಈ ಬಾರಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾರ್ಯಕರ್ತರಿಗೆ ಪ್ರಬಲ ಅಸ್ತ್ರವಾಗಿದ್ದವು. ಮನೆ ಮನೆಗಳಿಗೆ ತೆರಳಿ ‘ಗ್ಯಾರಂಟಿ ಸಿಕ್ಕಿತಾ, ಇಲ್ವಾ?’ ಎನ್ನತೊಡಗಿದರು. ಜತೆಗೆ, ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರ ಕಾಲದ ಅಭಿವೃದ್ಧಿ ಕಾರ್ಯಗಳ ತುಲನೆಯ ವಿಚಾರವನ್ನು ಅಭ್ಯರ್ಥಿ ಪ್ರಬಲವಾಗಿ ಮಂಡಿಸತೊಡಗಿದ್ದರು. ಕಾರ್ಯಕರ್ತರಿಗೂ ಎದುರಾಳಿ ಪಕ್ಷವನ್ನು ಪ್ರಶ್ನಿಸಲು ಇದೂ ಕೂಡ ದೊಡ್ಡ ಅಸ್ತ್ರವಾಯಿತು.