ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ತುಳು ಭಾಷೆಯನ್ನು ರಾಜ್ಯಭಾಷೆ ಹಾಗೂ 8ನೇ ಪರಿಚ್ಚೇದಕ್ಕೆ ಸೇರಿಸುವ ಹೋರಾಟ ಇನ್ನಷ್ಟು ಪ್ರಬಲಗೊಂಡಿದೆ. ಮಾಜಿ ಶಾಸಕ ಮೊಹಿಯುದ್ದೀನ್ ಬಾವ ನೇತೃತ್ವದಲ್ಲಿ ತುಳುಭಾಷೆಗೆ ಸ್ಥಾನಮಾನ ನೀಡುವ ಕುರಿತು ವಿವಿಕ್ಷ ಕ್ಷೇತ್ರ, ಪಕ್ಷ ಸಂಘಟನೆಗಳ ಮುಖಂಡರೊಂದಿಗೆ ಸಮಾಲೋಚನಾ ಸಭೆ ಬುಧವಾರ ನಗರದ ತುಳು ಭವನದಲ್ಲಿ ನಡೆಯಿತು.
ಸಭೆಯಲ್ಲಿ ತುಳುಭಾಷೆಗೆ ಸಂಬಂಧಿಸಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಪ್ರಣಾಳಿಕೆಯಲ್ಲಿ ತುಳು ಭಾಷೆಗೆ ಮಾನ್ಯತೆ ನೀಡುವ ಭರವಸೆಯನ್ನು ಸೇರಿಸಲು ಒತ್ತಾಯಿಸಲಾಯಿತು. ಈ ಕುರಿತು ಎಲ್ಲ ರಾಜಕೀಯ ನಾಯಕರಿಗೆ ಹಕ್ಕೊತ್ತಾಯ ಮಂಡನೆ ಮಾಡಲಾಯಿತು.
ಸಭೆಯಲ್ಲಿ ಮಾತನಾಡಿದ ಕೇರಳದ ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್, ತುಳು ಭಾಷೆಯನ್ನು 20 ಲಕ್ಷಕ್ಕೂ ಅಧಿಕ ಜನರು ತುಳು ಮಾತನಾಡುತ್ತಾರೆ. 8ನೇ ಪರಿಚ್ಚೇದಕ್ಕೆ ಸೇರಿಸಲು ಎಲ್ಲ ಅರ್ಹತೆಗಳಿವೆ. ಈಗಾಗಲೇ 22 ಭಾಷೆಗಳು 8ನೇ ಪರಿಚ್ಛೇದಕ್ಕೆ ಸೇರಿದ್ದು, 23ನೇ ಭಾಷೆಯಾಗಿ ತುಳು ಸೇರುವಂತಾಗಬೇಕು. ಈ ಹೋರಾಟದಲ್ಲಿ ತಾನು ಭಾಗಿಯಾಗುವುದಾಗಿ ತಿಳಿಸಿದರು.ಉಪವಾಸ ಸತ್ಯಾಗ್ರಹಕ್ಕೂ ಸಿದ್ಧ: ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಈಗಾಗಲೇ ಮೋಹನ್ ಆಳ್ವ ನೇತೃತ್ವದ ನಿಯೋಗದ ವರದಿ ಪ್ರಕ್ರಿಯೆ ನಡೆದಿದೆ. ತುಳುನಾಡಿನ ಎಲ್ಲ ಪಕ್ಷಗಳ ಮುಖಂಡರು ಪಕ್ಷ ಭೇದ ಬದಿಗಿಟ್ಟು ತುಳು ಭಾಷೆಯ ಸ್ಥಾನಮಾನಕ್ಕಾಗಿ ಹೋರಾಟ ಮಾಡುತ್ತೇವೆ. ತುಳುವಿಗಾಗಿ ಉಪವಾಸ ಸತ್ಯಾಗ್ರಹ ಹಾಗೂ ಯಾವುದೇ ಹೋರಾಟಕ್ಕೂ ಬದ್ಧ ಎಂದರು.ನಟ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿ, ಪಕ್ಷಭೇದ ಮರೆತು ನಡೆಸಿದ ಯಾವ ಹೋರಾಟದಲ್ಲಿಯೂ ನಾವು ಸೋತಿಲ್ಲ, ಅದಕ್ಕೆ ಕಂಬಳ ಉದಾಹರಣೆಯಾಗಿದೆ. 8ನೇ ಪರಿಚ್ಚೇದಕ್ಕೆ ತುಳು ಯಾಕೆ ಸೇರಬೇಕು, ಇದರಿಂದ ಪ್ರಯೋಜನವೇನು ಎಂಬುದನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕು, ಆಗ ಖಂಡಿತಾ ತುಳುವರು ನಮ ಹೋರಾಟಕ್ಕೆ ಪ್ರತಿ ಮನೆಯಿಂದ ಬರುತ್ತಾರೆ ಎಂದು ಹೇಳಿದರು.ಕಾರ್ಯಕ್ರಮ ಸಂಘಟಕ ಮೊಹಿಯುದ್ದೀನ್ ಬಾವ, ತುಳು ಆಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಇದ್ದರು.ಕರಾವಳಿಯಲ್ಲಿ ಬೋರ್ಡ್ ತೆರವು ಅಭಿಯಾನ