ಕೂಡ್ಲಿಗಿ: ಮುಂಬರುವ ಲೋಕಸಭಾ ಚುನಾವಣೆ ನಿಮಿತ್ತ ಮತದಾರರಲ್ಲಿ ಯಾವುದೇ ಭಯ ಬೇಡ. ನಿಮ್ಮ ಜೊತೆ ನಾವಿದ್ದೇವೆ. ಮುಕ್ತವಾಗಿ ಪ್ರಜಾಪ್ರಭುತ್ವದ ತಮ್ಮ ಹಕ್ಕನ್ನು ನಿರ್ಭೀತಿಯಿಂದ ಚಲಾಯಿಸಿ ಎಂದು ಮತದಾರರಿಗೆ ಅರಿವು ಮೂಡಿಸುವುದಕ್ಕಾಗಿ ಕೂಡ್ಲಿಗಿಯಲ್ಲಿ 100ಕ್ಕೂ ಹೆಚ್ಚು ಅರೆಸೇನಾ ಪಡೆ ಜೊತೆ ಪೊಲೀಸ್ ಸಿಬ್ಬಂದಿ ಕೂಡ್ಲಿಗಿ ಡಿವೈಎಸ್ಪಿ, ಸಿಪಿಐ, ಪಿಎಸ್ಐ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿ ಜನರಲ್ಲಿ ಮತದಾನದ ಜಾಗೃತಿ ಮೂಡಿಸಿದರು.ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಈ ಪಥಸಂಚಲನಕ್ಕೆ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಚಾಲನೆ ನೀಡಿದ ನಂತರ ಮಾತನಾಡಿ, ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು ಮುಂಬರುವ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕು ಮುಕ್ತವಾಗಿ ನಿರ್ಭತಿಯಿಂದ ಚಲಾಯಿಸಲು ಮುಂದಾಗಿ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಇದಾಗಿದೆ ಎಂದು ತಿಳಿಸಿದರು.ಕೂಡ್ಲಿಗಿ ಸಿಪಿಐ ಸುರೇಶ ತಳವಾರ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮತದಾನದಿಂದ ವಂಚಿತರಾಗದಿರಿ. ಪ್ರಜಾಪ್ರಭುತ್ವದ ಹಕ್ಕನ್ನು ತಪ್ಪದೇ ಚಲಾಯಿಸಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮತದಾರರ ಬೆನ್ನೆಲುಬಾಗಿ ನಾವಿದ್ದೇವೆ. ನಿಮ್ಮ ರಕ್ಷಣೆ ನಮ್ಮ ಹೊಣೆ, ಅರೆಸೇನಾ ಪಡೆಯೊಂದಿಗೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಬ್ಬಂದಿ ಪಥಸಂಚಲನ ನಡೆಸಿ ಮತದಾರರಿಗೆ ಆತ್ಮ ಸ್ಥೈರ್ಯ ತುಂಬುವ ಜಾಗೃತಿ ಪಥ ಸಂಚಲನ ಇದಾಗಿದೆ ಎಂದರು.ಕೂಡ್ಲಿಗಿ ಪಿಎಸ್ಐ ಧನುಂಜಯ ಹಾಗೂ ಸಿಬ್ಬಂದಿ ಸೇರಿ ನೂರಾರು ಅರೆಸೇನಾ ಪಡೆ ಕೂಡ್ಲಿಗಿ ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತ, ಪಾದಗಟ್ಟೆ ವೃತ್ತ, ಮದಕರಿ ವೃತ್ತ, ಕೊಟ್ಟೂರು ರಸ್ತೆ ಮೂಲಕ ರಾಮನಗರ, ಅಂಬೇಡ್ಕರ್ ನಗರ, ಪೇಟೆ ಬಸವೇಶ್ವರ, ರಾಮಲಿಂಗೇಶ್ವರ ದೇವಸ್ಥಾನ ರಸ್ತೆ ಮೂಲಕ ಕೊರಖಣ ಓಣಿ ಮೂಲಕ ಕೂಡ್ಲಿಗಿ ಪೊಲೀಸ್ ಠಾಣೆವರೆಗೆ ಪಥಸಂಚಲನ ನಡೆಸಲಾಯಿತು ಈ ಸಂದರ್ಭದಲ್ಲಿ ಕೂಡ್ಲಿಗಿ ಮದಕರಿ ವೃತ್ತದಲ್ಲಿ ಕೂಡ್ಲಿಗಿ ಪ ಪಂ ಸದಸ್ಯ ಕಾವಲ್ಲಿ ಶಿವಪ್ಪ ನಾಯಕ ಹಾಗೂ ಇತರರು ಅರೆಸೇನಾ ಪಡೆಯ ಹಿರಿಯ ಅಧಿಕಾರಿಗಳನ್ನು ಹೂವಿನ ಹಾರ ಹಾಕಿ ಜನತೆ ಪರವಾಗಿ ಸ್ವಾಗತ ಕೋರಿದರು.ನಂತರ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡೆಬಸಾಪುರ ತಾಂಡಾ ಹಾಗೂ ಬಡೇಲಡಕು ಗ್ರಾಮದಲ್ಲಿ ಪಥಸಂಚಲನ ನಡೆಸಲಾಯಿತು ಮತ್ತು ಕೂಡ್ಲಿಗಿ ಪೊಲೀಸ್ ವೃತ್ತ ವ್ಯಾಪ್ತಿಯ ಗುಡೇಕೋಟೆಯಲ್ಲೂ ಪಥಸಂಚಲನ ಆಯಾ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿ ಕೂಡ್ಲಿಗಿ ಸಿಪಿಐ ನೇತೃತ್ವದಲ್ಲಿ ಪಥಸಂಚಲನ ಮೂಲಕ ಜನರಲ್ಲಿ ಜಾಗೃತಿ ಜಾಥಾ ನಡೆಸಿಕೊಟ್ಟರು.