ಲೋಕಸಭಾ ಚುನಾವಣೆ ಕಠಿಣ ಪರೀಕ್ಷೆ: ಮುರಳೀಧರ ಹಾಲಪ್ಪ

KannadaprabhaNewsNetwork | Published : Feb 15, 2024 1:15 AM

ಸಾರಾಂಶ

ಲೋಕಸಭಾ ಚುನಾವಣೆ ಕಾಂಗ್ರೆಸ್ ಪಾಲಿಗೆ ಅತ್ಯಂತ ಕಠಿಣವಾದ ಪರೀಕ್ಷೆಯಾಗಿದೆ. ಇದನ್ನು ಪಾಸ್‌ ಮಾಡಬೇಕೆಂದರೆ ಮುಖಂಡರೊಂದಿಗೆ ಕಾರ್ಯಕರ್ತರು, ಅದರಲ್ಲಿಯೂ ಬೂತ್ ಮಟ್ಟದ ಎಜೆಂಟ್‌ರು, ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಲೋಕಸಭಾ ಚುನಾವಣೆ ಕಾಂಗ್ರೆಸ್ ಪಾಲಿಗೆ ಅತ್ಯಂತ ಕಠಿಣವಾದ ಪರೀಕ್ಷೆಯಾಗಿದೆ. ಇದನ್ನು ಪಾಸ್‌ ಮಾಡಬೇಕೆಂದರೆ ಮುಖಂಡರೊಂದಿಗೆ ಕಾರ್ಯಕರ್ತರು, ಅದರಲ್ಲಿಯೂ ಬೂತ್ ಮಟ್ಟದ ಎಜೆಂಟ್‌ರು, ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದರು.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅಧ್ಯಕ್ಷತೆಯಲ್ಲಿ ನಡೆದ ಬೂತ್ ಮಟ್ಟದ ಎಜೆಂಟರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಕಾರ್ಯಾಗಾರದಲ್ಲಿ ಮಾತನಾಡಿದರು.

ಚುನಾವಣಾ ಪೂರ್ವದಲ್ಲಿ ಮತದಾರರನಿಗೆ ನೀಡಿದ್ದ ವಾಗ್ಧಾನವನ್ನು ಈಡೇರಿಸಲು ನಮ್ಮ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಹಕಾರಿ ಸಚಿವರು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಅವರ ಕೈ ಬಲಪಡಿಸಿದರೆ ಮಾತ್ರ, ಪಕ್ಷ ಮತ್ತಷ್ಟು ಶಕ್ತಿಯನ್ನು ಪಡೆದುಕೊಂಡು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಲೋಕಸಭಾ ಚುನಾವಣೆಯಲ್ಲದೆ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೂ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು, ಅಧಿಕಾರ ಹಿಡಿಯಬೇಕಿದೆ. ಹಾಗಾಗಿ ಎಲ್ಲರೂ ಸಕ್ರಿಯವಾಗಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಜನರಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಪಿ.ಆರ್‌. ರಮೇಶ್ ಮಾತನಾಡಿ, ಬಿಎಲ್ಎಗಳೆಂದರೆ ಮತದಾನದ ದಿನ ಬೂತ್‌ಗಳಲ್ಲಿ ಪಕ್ಷದ ಪರವಾಗಿ ಕುಳಿತುಕೊಳ್ಳುವ ಎಜೆಂಟರಲ್ಲ. ಅವರು ಮತದಾರರು ಮತ್ತು ಪಕ್ಷದ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಅತ್ಯಂತ ಜವಾಬ್ದಾರಿಯುತ ಹುದ್ದೆಯಾಗಿದೆ ಎಂದರು.

ಮಾಸ್ ಪಾರ್ಟಿಯಾಗಿರುವ ಕಾಂಗ್ರೆಸ್‌ನ್ನು ಕೇಡರ್‌ ಬೇಸ್ ಪಾರ್ಟಿಯಾಗಿಸುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನಿರಂತರ ಪ್ರಯತ್ನ ನಡೆಸಿದ್ದಾರೆ. ಇದರ ಫಲವಾಗಿ ಎಲ್ಲಾ ಬೂತ್ ಮಟ್ಟದ ಎಜೆಂಟರನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಹುರುದುಂಬಿಸುವುದು. ಅವರ ಮೂಲಕ ಆ ಬೂತ್ ಮಟ್ಟದಲ್ಲಿರುವ ಸಮಸ್ಯೆಯನ್ನು ಅರಿತು, ಪರಿಹಾರ ಒದಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುವ ಬೂತ್ ಮಟ್ಟದ ಎಜೆಂಟರಿಗೆ ಪಕ್ಷದ ಹುದ್ದೆಗಳಲ್ಲದೆ, ಸರಕಾರದ ನೇಮಕಾತಿಗಳಲ್ಲಿ, ಮುಂಬರುವ ಜಿ.ಪಂ, ತಾ.ಪಂ. ಚುನಾವಣೆಗಳಲ್ಲಿ ಸ್ಪರ್ಧಿಸಲೂ ಸಹ ಅವಕಾಶಗಳು ದೊರೆಯಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಈ ಬೂತ್ ಮಟ್ಟದ ಎಜೆಂಟ್‌ರುಗಳ ಸಭೆಯನ್ನು ಆಯೋಜಿಸಲಾಗಿದೆ. ಇಲ್ಲಿ ಪಕ್ಷದ ಕಾರ್ಯಕರ್ತರ ಕುಂದುಕೊರತೆಯ ಜೊತೆಗೆ, ಆಯಾಯ ಬೂತ್ ಮಟ್ಟದ ಕುಂದುಕೊರತೆಗಳ ನಿವಾರಣೆ ಮತ್ತು ಮತದಾರರ ಪಟ್ಟಿ ಪರೀಕ್ಷಕರಣೆ ವೇಳೆ ಬಿಎಲ್ಎಗಳು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬ ಪ್ರಮುಖ ವಿಚಾರ ಚರ್ಚೆಯಾಗಲಿದೆ. ಇಂದಿನ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರು ಭಾಗವಹಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಇದೊಂದು ಒಳ್ಳೆಯ ವೇದಿಕೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಕೆಪಿಸಿಸಿ ಉಪಾಧ್ಯಕ್ಷ ಪಿ.ಆರ್‌. ರಮೇಶ್, ಕೆಪಿಸಿಸಿ ಸದಸ್ಯರಾದ ಮುನೀರ್‌ ಅಹಮದ್, ಮಾಜಿ ಶಾಸಕ ಗಂಗಹನುಮಯ್ಯ, ಡಾ. ರಫೀಕ್ ಅಹಮದ್, ಮುಖಂಡರಾದ ಇಕ್ಬಾಲ್ ಅಹಮದ್, ಆತೀಕ್ ಅಹಮದ್, ಷಣ್ಮುಖಪ್ಪ, ನರಸಿಂಹಯ್ಯ,ಬಿ.ಜಿ. ಲಿಂಗರಾಜು, ಹಾಲೆನೂರು ಲೇಪಾಕ್ಷ, ಹೆಬ್ಬೂರು ಶ್ರೀನಿವಾಸ್, ನಾಗಮಣಿ, ಸಂಜೀವಕುಮಾರ್‌, ರಂಗಸ್ವಾಮಯ್ಯ, ಸುಜಾತ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಾಲ್ಗೊಂಡಿದ್ದರು.

Share this article