ಕನ್ನಡಪ್ರಭ ವಾರ್ತೆ ಲೋಕಾಪುರ
ಪ್ರತಿ ಟನ್ ಕಬ್ಬಿಗೆ ₹೩೫೦೦ ಬೆಲೆ ಘೋಷಣೆ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಮತ್ತು ರೈತ ಸಂಘದಿಂದ ಬೆಳಗಾವಿ ಜಿಲ್ಲೆಯ ಗುರ್ಲಾಪುರದಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ಗುರುವಾರ ಬೆಳಗ್ಗೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ರೈತರು ಬೆಳಗಾವಿ-ರಾಯಚೂರು ಮತ್ತು ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಿ ಟಯರ್‌ಗೆ ಬೆಂಕಿ ಹಚ್ಚಿ, ಸರಕಾರ, ಸಕ್ಕರೆ ಸಚಿವ, ಸಕ್ಕರೆ ಕಾರ್ಖಾನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ಮಧ್ಯಾಹ್ನ ೧೨ ಗಂಟೆಗೆ ರಾಜ್ಯ ಹೆದ್ದಾರಿ ಮೇಲೆ ಪೆಂಡಾಲ್ ಹಾಕುತ್ತಿದ್ದಾಗ ಪೊಲೀಸ್ ಇಲಾಖೆ ಮುಖ್ಯಸ್ಥರು ಹೆದ್ದಾರಿ ಮೇಲೆ ಟೆಂಟ್ ಹಾಕಬೇಡ ಎಂದು ಮನವಿ ಮಾಡಿದರಾದರೂ ರೈತರು ಅವರ ಮಾತಿಗೆ ಸ್ಪಂದಿಸದೇ ಪೆಂಡಾಲ್ ಹಾಕಿ ಧರಣಿ ಕುಳಿತರು. ಚೌಡಾಪುರ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲ್ಲ ರೈತರಿಗೆ ರಸ್ತೆಯಲ್ಲಿ ಅಡುಗೆ ಮಾಡಿ ಊಟದ ವ್ಯವಸ್ಥೆ ಮಾಡಿದರು.
ಪ್ರಯಾಣಿಕರು, ವಿದ್ಯಾರ್ಥಿಗಳ ಪರದಾಟ: ರಾಜ್ಯ ಹೆದ್ದಾರಿ ಬಂದ್ ಮಾಡಿ ಪರಿಣಾಮ ಬೇರೆ ಬೇರೆ ಗ್ರಾಮಗಳಿಗೆ ಹೋಗಬೇಕಾದ ಪ್ರಯಾಣಿಕರು ಬಸ್ ಸೌಲಭ್ಯವಿಲ್ಲದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಜೆ ಶಾಲಾ ಕಾಲೇಜು ಬಿಟ್ಟ ನಂತರ ತಮ್ಮ ಊರಿಗೆ ಹೋಗಲು ವಿದ್ಯಾರ್ಥಿಗಳು ವಾಹನಗಳು ಇಲ್ಲದೆ ತೊಂದರೆ ಅನುಭವಿಸಿದರು. ಗ್ರಾಮಗಳ ವಿದ್ಯಾರ್ಥಿಗಳು ಕಾಲ್ನಡಿಗೆ ಮೂಲಕ ಹೋಗುತ್ತಿರುವುದು ಕಂಡುಬಂತು.ಸಾಲುಗಟ್ಟಿ ನಿಂತ ವಾಹನಗಳು: ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರಪ್ರದೇಶ, ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದರಿಂದ ಸ್ಥಳದಲ್ಲೇ ಕಿಮೀ ದೂರದವರೆಗೆ ಗೂಡ್ಸ್ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು.
ಬೀಕೋ ಎಂದ ಬಸ್ ನಿಲ್ದಾಣ : ಪ್ರತಿನಿತ್ಯ ಜನಜಂಗುಳಿ ಹೊಂದಿರುತ್ತಿದ್ದ ಪಟ್ಟಣದ ಬಸ್ ನಿಲ್ದಾಣ ಬಸ್‌ಗಳು ಮತ್ತು ಪ್ರಯಾಣಿಕರಿದೆ ಬೀಕೋ ಎನ್ನುತ್ತಿತ್ತು. ನಾಗಣಾಪುರ, ಭಂಟನೂರ ಕ್ರಾಸ್, ಸಾಲಾಪುರ ಕ್ರಾಸ್‌ದಲ್ಲೂ ರಸ್ತೆ ತಡೆ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು.---ಪೋಲಿಸರಿಗೂ ತಟ್ಟಿದ ಪ್ರತಿಭಟನೆ ಬಿಸಿ:
ಜಿಲ್ಲೆಯ ಮುಧೋಳ ತಾಲೂಕಿನ ನಾಗಣಾಪುರ ಗ್ರಾಮದ ಬಳಿ ಬಾಗಲಕೋಟೆ-ಮುಧೋಳ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಇದೇ ಮಾರ್ಗವಾಗಿ ಮುಧೋಳದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಭದ್ರತೆಗಾಗಿ ತೆರಳುತ್ತಿದ್ದ ಜಮಖಂಡಿ ಡಿವೈಎಸ್ಪಿ, ಮುಧೋಳ ಸಿಪಿಐ ಸೇರಿದಂತೆ ಪೊಲೀಸ್ ಅಧಿಕಾರಿಗಳಿದ್ದ ವಾಹನಕ್ಕೆ ರಸ್ತೆಯಲ್ಲಿ ಮರದ ತುಂಡುಗಳನ್ನಿಟ್ಟು ತಡೆದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸ್ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು. ರೈತರು ರಸ್ತೆಯಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಪೊಲೀಸ್ ವಾಹನ ಬಿಡುವುದಿಲ್ಲವೆಂದು ಪಟ್ಟು ಹಿಡಿದರು. ಕೊನೆಗೆ ಪೊಲೀಸರೇ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಮರದ ತೂಮಡು ತೆಗೆದು ಹಾಕಿದರು. ಈ ವೇಳೆ ಬಾಯಿ ಬಾಯಿ ಬಡಿದುಕೊಂಡು ಧಿಕ್ಕಾರ ಕೂಗಿದರು. ರೈತರ ವಿರೋಧದ ಮಧ್ಯೆ ವಾಹನ ಬಿಡಿಸಿಕೊಂಡು ಪೋಲಿಸರು ಹೊರಟರು.
ಇಂದು ಅಂಗಡಿ ಮುಂಗಟ್ಟು ಬಂದ್: ಕಬ್ಬು ಬೆಳೆಗಾರರ ಹೋರಾಟ ಬೆಂಬಲಿಸಿ ಶುಕ್ರವಾರ ವ್ಯಾಪಾರಸ್ಥರು ಲೋಕಾಪುರದಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಬಸವೇಶ್ವರ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸದಾಶಿವ ಉದಪುಡಿ ತಿಳಿಸಿದ್ದಾರೆ.