ಗ್ರಾಮ ಪಂಚಾಯಿತಿಗಳ ಮೇಲೆ ಲೋಕಾಯಕ್ತ ದಾಳಿ : ಕಚೇರಿಗಳಲ್ಲಿ ಅವ್ಯವಹಾರ ಮತ್ತು ಅವ್ಯವಸ್ಥೆ

KannadaprabhaNewsNetwork | Updated : Aug 09 2024, 06:58 AM IST

ಸಾರಾಂಶ

ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿನ ಅವ್ಯವಹಾರ ಮತ್ತು ಅವ್ಯವಸ್ಥೆಗಳ ಆಗರ ಎನ್ನುವುದು ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ದಿಢೀರ್‌ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

 ಬೆಂಗಳೂರು :  ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿನ ಅವ್ಯವಹಾರ ಮತ್ತು ಅವ್ಯವಸ್ಥೆಗಳ ಆಗರ ಎನ್ನುವುದು ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ದಿಢೀರ್‌ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಬುಧವಾರ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಮತ್ತು ಉಪ ಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂದ್ರ, ನ್ಯಾ.ಬಿ.ವೀರಪ್ಪ ನೇತೃತ್ವದ ತಂಡವು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 18 ಗ್ರಾಮಪಂಚಾಯಿತಿಗಳಿಗೆ ಏಕಕಾಲಕ್ಕೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬುಧವಾರ ತಡರಾತ್ರಿವರೆಗೆ ಹಲವು ಕಡತಗಳನ್ನು ಪರಿಶೀಲನೆ ನಡೆಸಲಾಯಿತು.

ಗ್ರಾಮಪಂಚಾಯಿತಿ ಕಚೇರಿಯಲ್ಲಿನ ಅವ್ಯವಸ್ಥೆಗಳನ್ನು ಕಂಡ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಗರಂ ಆಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಓ) ತೀವ್ರ ತರಾಟೆಗೆ ತೆಗೆದುಕೊಂಡರು. ದಾಳಿ ಸಮಯದಲ್ಲಿ ಹಲವು ಮಹತ್ವದ ದಾಖಲೆಗಳನ್ನು ಮತ್ತು 40 ಸಾವಿರಕ್ಕೂ ಹೆಚ್ಚಿನ ಹಣವನ್ನು ಜಪ್ತಿ ಮಾಡಲಾಗಿದೆ.

ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ದಾಸನಪುರ, ಅಡಕಮಾರನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದರೆ, ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಂಡೂರು, ಕಣ್ಣೂರು, ರಾಜಾನಕುಂಟೆ, ಕಸಘಟ್ಟಪುರ ಗ್ರಾಮಪಂಚಾಯಿತಿಗಳಿಗೆ ಮತ್ತು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಅಣ್ಣೇಶ್ವರ, ಜಾಲಿಗೆ, ದೊಡ್ಡತುಮಕೂರು, ಮಜಿರೆ ಹೊಸಹಳ್ಳಿ, ಬೂದಿಹಾಳ್, ಸೋಂಪುರ ಗ್ರಾಮಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ತಂಡಗಳಾಗಿ ದಿಢೀರ್‌ ಭೇಟಿ ನೀಡಿದರು. ಪ್ರಾಯೋಗಿಕವಾಗಿ 18 ಗ್ರಾಮಪಂಚಾಯಿತಿಗಳಿಗೆ ಭೇಟಿ ನೀಡಲಾಗಿದೆ. ಮುಂದಿನ ದಿನದಲ್ಲಿ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 168 ಗ್ರಾಮಪಂಚಾಯಿತಿಗಳಿಗೆ ಭೇಟಿ ನೀಡಿ ಅಲ್ಲಿನ ಪಿಡಿಓಗಳು, ಗ್ರಾಮಪಂಚಾಯಿತಿ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೇ, ಗ್ರಾಮಪಂಚಾಯಿತಿ ಕಚೇರಿಗಳಲ್ಲಿನ ಕಾರ್ಯಗಳ ಕುರಿತು ವಿಸ್ತೃತ ವರದಿ ತರಿಸಿಕೊಳ್ಳಲು ತೀರ್ಮಾನಿಸಲಾಗಿದೆ.

ಲೋಕಾಯುಕ್ತರನ್ನೇ ಸತಾಯಿಸಿದ ಪಿಡಿಓ 

ದಾಸನಪುರ ಗ್ರಾಮಪಂಚಾಯಿತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಿಡಿಓ ಉಷಾ ಅವರು ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಅವರನ್ನೇ ಕೆಲ ಕಾಲ ಸತಾಯಿಸಿದ ಪ್ರಸಂಗ ನಡೆಯಿತು.

ತಪಾಸಣೆ ನಡೆಸಲು ಉಷಾ ಅವರ ಕಾರಿನ ಕೀ ಕೇಳಿದಾಗ, ಅದನ್ನು ನೀಡದೆ ಸತಾಯಿಸಿದರು. ಆರಂಭದಲ್ಲಿ ತಮ್ಮ ಬಳಿಕ ಕಾರೇ ಇಲ್ಲ, ಬಸ್‌ನಲ್ಲಿ ಬರುವುದಾಗಿ ತಿಳಿಸಿದರು. ಬಳಿಕ ಕಾರಿನ ಕೀ ಕಳೆದು ಹೋಗಿದೆ ಎಂಬುದಾಗಿ ನಾಟಕವಾಡಿದರು. ಲೋಕಾಯುಕ್ತರು ಸೇರಿದಂತೆ ಅಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರೂ ಅದಕ್ಕೆ ಸೊಪ್ಪು ಹಾಕಿಲ್ಲ. ಕೊನೆಗೆ ಆಕೆಯ ಪತಿಯನ್ನು ಸ್ಥಳಕ್ಕೆ ಕರೆಸಿ ಮನವೊಲಿಸುವ ಕೆಲಸ ಮಾಡಿದರೂ ಪ್ರಯೋಜನವಾಗಿಲ್ಲ. ಉಷಾ ಅವರು ಕಾರಿನ ಕೀ ನೀಡದಿದ್ದಾಗ ಲೋಕಾಯುಕ್ತ ಸಿಬ್ಬಂದಿಯೇ ಬಚ್ಚಿಟ್ಟಿದ ಕೀ ಹುಡುಕಿದರು. ನಂತರ ಕಾರನ್ನು ಪರಿಶೀಲಿಸಿದಾಗ ₹42 ಸಾವಿರ ನಗದು ಪತ್ತೆಯಾಗಿದೆ. ಹಣವನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಲೋಕಾಯುಕ್ತ ಕಾರ್ಯಾಚರಣೆಗೆ ಭಯಗೊಂಡ ಪಿಡಿಓ ಉಷಾ ಮತ್ತು ಕಂಟ್ರ್ಯಾಕ್ಟರೊಬ್ಬರು ಪರಾರಿಯಾಗಲು ಪ್ರಯತ್ನಿಸಿದರು. ಆದರೆ, ಲೋಕಾಯುಕ್ತ ಪೊಲೀಸರು ಅವರನ್ನು ಹಿಡಿದು ಕಚೇರಿಗೆ ವಾಪಸ್ ತಂದು ವಿಚಾರಣೆ ನಡೆಸಿದರು. ಪರಿಶೀಲನೆ ವೇಳೆ ನೋಂದಣಿ ಪುಸ್ತಕವನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಕಂಡು ಬಂತು. 2023ರಿಂದ ನೋಂದಣಿ ಪುಸ್ತಕಕ್ಕೆ ಸಹಿ ಮಾಡಿದಿರುವುದಕ್ಕೆ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು.

Share this article