ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಮ ಸಮಾಜದ ಹರಿಕಾರ ನಾಡಿನ ಸಾಂಸ್ಕೃತಿಕ ನಾಯಕ ಬಸವೇಶ್ವರರ ಭಾವಚಿತ್ರ ಅನಾವರಣಗೊಳಿಸುತ್ತಿರುವುದು ಐತಿಹಾಸಿಕ ಕ್ರಮ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟರು.ತಾಲೂಕು ಕಚೇರಿಯಲ್ಲಿ ಶನಿವಾರ ಕ್ರಾಂತಿಯೋಗಿ ಬಸವೇಶ್ವರರ ಬೃಹತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅನಾವರಣಗೊಳಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಬುದ್ದ, ಬಸವ, ಕನಕರಂತಹ ಅನೇಕ ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸುವ ಕೆಲಸವಾಗುತ್ತಿದೆ ಇದು ಸರಿಯಲ್ಲ, ಎಲ್ಲಾ ಮಹನೀಯರು ಇಡೀ ಮನುಕುಲದ ಒಳಿತಿಗಾಗಿ ತಮ್ಮ ಬೋಧನೆಗಳ ಮೂಲಕ ಇನ್ನು ಕೆಲವರು ತಮ್ಮ ವಚನ ಸಾಹಿತ್ಯಗಳ ಮೂಲಕ ಮನುಕುಲದ ಉದ್ಧಾರದ ಮಾರ್ಗದರ್ಶನ ಮಾಡಿದ್ದಾರೆ. ನಾವುಗಳು ಎಲ್ಲಾ ಮಹನೀಯರ ಜಾತಿಯ ಚೌಕಟ್ಟು ಮೀರಿ ವಿಶಾಲ ದೃಷ್ಟಿಕೋನದಲ್ಲಿ ನೋಡುವ ಮೂಲಕ ಹಾಗೂ ಅವರ ಸಂದೇಶಗಳನ್ಮ ಪರಿಪಾಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.
ಸರ್ಕಾರಿ ಕಚೇರಿಗಳಲ್ಲಿ ಮಾನವತಾವಾದಿ, ಸಮ ಸಮಾಜದ ಹರಿಕಾರ ಬಸವೇಶ್ವರರ ಭಾವಚಿತ್ರ ಹಾಕುವಂತೆ ಆದೇಶ ಮಾಡಿದ್ದರೂ ಇದು ಅನುಷ್ಟಾನವಾಗಿರಲ್ಲಿಲ್ಲ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಈ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಾಗ ಬಜೆಟ್ ಮಂಡನೆ ಬಳಿಕ ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಕಡೆಗೆ ಬಸವೇಶ್ವರರ ಭಾವಚಿತ್ರ ಅನಾವರಣ ಕಾರ್ಯಕ್ರಮ ನಡೆಸಲಾಗುವುದು. ಇದರಂತೆ ಇಂದು ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು, ಎಲ್ಲಾ ಸಮಾಜದವರ ಸಮ್ಮುಖದಲ್ಲಿ ಬಸವೇಶ್ವರರ ಭಾವಚಿತ್ರ ಅನಾವರಣ ಮಾಡುತ್ತಿರುವುದು ತಮಗೆ ಸಂತಸ ತಂದಿದೆ ಎಂದು ಹೇಳಿದರು.ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ಪ್ರಪಂಚದ ಯಾವುದೇ ಭಾಷೆಯಲ್ಲಿ ಘಟಿಸದೇ ಇರುವ ಕ್ರಾಂತಿ 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣದಲ್ಲಿ ಘಟಿಸಿದ್ದು ತನ್ಮೂಲಕ ಬಸವಣ್ಣನವರು ಸಾಮಾಜಿಕ ಕ್ರಾಂತಿಯನ್ನು ನಡೆಸುವ ಮೂಲಕ ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಅಪಾರ ಕೊಡುಗೆಯನ್ನು ನೀಡುವ ಮೂಲಕ ಬಸವಣ್ಣನವರು ನಾಡಿನ ಸಾಂಸ್ಕೃತಿಕ ನಾಯಕರಾಗಿದ್ದು, ಇದೀಗ ಸರ್ಕಾರ ಕೂಡ ಇದಕ್ಕೆ ಚಾಲನೆ ನೀಡುತ್ತಿದೆ ಎಂದು ಹೇಳಿದರು.
ತಹಸೀಲ್ದಾರ್ ಪಟ್ಟರಾಜ ಗೌಡ ಮಾತನಾಡಿ ಯಾವ ದೇಶ ಒಂದು ಕಾಲದಲ್ಲಿ ನಮ್ಮ ದೇಶವನ್ನು ಆಳ್ವಿಕೆ ಮಾಡಿತ್ತೋ ಅಂತಹ ದೇಶದಲ್ಲಿ ಬಸವಣ್ಣವನರ ಪ್ರತಿಮೆ ಸ್ಥಾಪಿಸಲಾಗಿದೆ ಎಂದರೆ ಬಸವಣ್ಣನವರ ಸಾಂಸ್ಕೃತಿಕ ಹಿರಿಮೆ ಎಂತಹದ್ದು ಎಂದು ನಾವೇಲ್ಲ ತಿಳಿಯಬೇಕು ಕನ್ನಡ ಭಾಷೆಯನ್ನು,ವಚನಗಳ ಮೂಲಕ ದೇವಭಾಷೆಯನ್ನಾಗಿಸಿದ ಕೀರ್ತಿ ಬಸವಣ್ಣನವರದ್ದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಾಪಂ ಇಒ ರಾಘವೇಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ವಿಶ್ವನಾಥ್, ಮುಖಂಡರಾದ ಎಚ್.ಎ.ಉಮಾಪತಿ, ಬಿ.ಸಿದ್ದಪ್ಪ, ಎಚ್.ಭಿ.ಶಿವಯೋಗಿ, ಎಚ್.ಎ. ಗದ್ದಿಗೇಶ್, ಸಣ್ಣಕ್ಕಿ ಬಸವನಗೌಡ, ಪುರಸಭೆ ಸದಸ್ಯರು,ಉಪನ್ಯಾಸಕ ಪ್ರಸನ್ನ ಕೆ.ವಿ. ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರಣ್ಣ, ರೈತ ಸಂಘದ ಅಧ್ಯಕ್ಷ ಅರುಂಡಿ ಬಸಪ್ಪ, ಹಿರೇಮಠದ ಬಸವರಾಜಪ್ಪ, ಕರಿಬಸಪ್ಪ, ಮುಂತಾದವರು ಇದ್ದರು, ಬಿಇಒ ನಂಜರಾಜ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಾಡಗೀತೆ, ಹಾಗೂ ರೈತ ಗೀತೆ ಹಾಡಲಾಯಿತು.