ಐದು ಸಾವಿರ ಮಕ್ಕಳ ಬಾಳಿಗೆ ಬೆಳಕಾದ ಗವಿಮಠ ಶ್ರೀಗಳು

KannadaprabhaNewsNetwork | Published : Jul 1, 2024 1:54 AM

ಸಾರಾಂಶ

ರಾಜ್ಯದಲ್ಲಿ ತುಮಕೂರಿನ ಸಿದ್ಧಗಂಗಾಮಠದ ಶಿವಕುಮಾರ ಮಹಾಸ್ವಾಮಿಗಳ ಆನಂತರ ಕೊಪ್ಪಳದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸುಮಾರು 5 ಸಾವಿರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುತ್ತಿದ್ದಾರೆ.

ಸಿದ್ದಗಂಗಾ ಮಠದನಂತರ ರಾಜ್ಯದಲ್ಲಿಯೇ ಎರಡನೇ ಮಠ

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದಾರೆ ಮಕ್ಕಳ ಸಂಖ್ಯೆ

ಅನಾಥ, ನಿರ್ಗತಿಕ ಮಕ್ಕಳಿಗೆ ನೇರ ಪ್ರವೇಶ

ಐದು ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ಲೋಕಾರ್ಪಣೆ ಇಂದು

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಅನ್ನ, ಅಕ್ಷರ, ಆರೋಗ್ಯ ದಾಸೋಹದ ಮೂಲಕ ನಾಡಿನ ಮಠದ ಪರಂಪರೆಯಲ್ಲಿಯೇ ಮೇರು ಸಂಸ್ಕೃತಿಯನ್ನು ಹಾಕಿರುವ ಕೊಪ್ಪಳದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ರಾಜ್ಯದಲ್ಲಿ ತುಮಕೂರಿನ ಸಿದ್ಧಗಂಗಾಮಠದ ಶಿವಕುಮಾರ ಮಹಾಸ್ವಾಮಿಗಳ ಆನಂತರ ಸುಮಾರು 5 ಸಾವಿರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುತ್ತಿದ್ದಾರೆ.

ಈಗಾಗಲೇ ಗವಿಸಿದ್ಧೇಶ್ವರ ಉಚಿತ ಪ್ರಸಾದ ಹಾಗೂ ವಸತಿ ನಿಲಯದಲ್ಲಿ ನಾಲ್ಕೂವರೆ ಸಾವಿರ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದು, ಇನ್ನು ದಾಖಲಾತಿ ಪಡೆಯುತ್ತಲೇ ಇರುವುದರಿಂದ ಇದೇ ವರ್ಷ ಐದು ಸಾವಿರ ಅಂಕಿ ದಾಟುವ ಸಾಧ್ಯತೆ ಇದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಮಕ್ಕಳು ಶ್ರೀ ಮಠಕ್ಕೆ ನಾಡಿನ ಮೂಲೆ ಮೂಲೆಯಿಂದಲು ಬಂದು ದಾಖಲಾಗುತ್ತಿದ್ದಾರೆ.

10 ಸಾವಿರ ವಿದ್ಯಾರ್ಥಿಗಳು:

ಈ ವರ್ಷವೇ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಿದ್ದೇ ಆದರೆ 10 ಸಾವಿರ ವಿದ್ಯಾರ್ಥಿಗಳು ದಾಖಲಾಗುತ್ತಾರೆ. ಆದರೆ, ಶ್ರೀ ಮಠದಲ್ಲಿ ಈಗ ಇರುವ ವಸತಿ ನಿಲಯದ ಸಾಮರ್ಥ್ಯವೇ 5 ಸಾವಿರ ವಿದ್ಯಾರ್ಥಿಗಳದ್ದಾಗಿದೆ. ಹೀಗಾಗಿ, ಪ್ರವೇಶಕ್ಕಾಗಿ ಈ ವರ್ಷ ಬಂದಿದ್ದ ನಾಲ್ಕೂವರೆ ಸಾವಿರ ವಿದ್ಯಾರ್ಥಿಗಳ ಪೈಕಿ ಕೇವಲ 1500 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಈಗಾಗಲೇ ಇಲ್ಲಿರುವ ಮೂರು ಸಾವಿರ ವಿದ್ಯಾರ್ಥಿಗಳು ಸೇರಿ ಬರೋಬ್ಬರಿ 4500 ವಿದ್ಯಾರ್ಥಿಗಳು ಆಗಲಿದ್ದಾರೆ.

ಈ ವಸತಿ ನಿಲಯದಲ್ಲಿ ಪ್ರವೇಶ ಕೊಡಿಸಲು ಭಕ್ತರು ದುಂಬಾಲು ಬೀಳುತ್ತಿದ್ದಾರೆ. ವಾಸ್ತವ್ಯ ಮತ್ತು ಮೂಲಭೂತ ಸೌಕರ್ಯದ ಅಭಾವದಿಂದ ಪ್ರವೇಶ ನಿರಾಕರಣೆ ಮಾಡಲಾಗುತ್ತದೆ.

ಅನಾಥರಿಗೆ, ನಿರ್ಗತಿಕರಿಗೆ ಮುಕ್ತ ಪ್ರವೇಶ:

ಈ ವಸತಿ ನಿಲಯದಲ್ಲಿ ಅನಾಥ, ನಿರ್ಗತಿಕ ಮಕ್ಕಳಿಗೆ ಮುಕ್ತ ಪ್ರವೇಶವಿದೆ. ಶಕ್ತವಾಗಿರುವ ಪಾಲಕರಿಗೆ ಪ್ರವೇಶ ನಿರಾಕರಣೆ ಮಾಡುತ್ತಾರೆಯೇ ಹೊರತು ತಂದೆ-ತಾಯಿ ಇಲ್ಲದ ತಬ್ಬಲಿಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಹಾಗೆಯೇ ನಿರ್ಗತಿಕವಾಗಿರುವ ಮಕ್ಕಳು ಬಂದರೆ ಅಪ್ಪಿಕೊಂಡು, ಅವರಿಗೆ ಪ್ರವೇಶ ಕೊಡಿಸುತ್ತಾರೆ. ನಾನಾ ಕಾರಣದಿಂದ ತಂದೆ ತೀರಿಕೊಂಡಿರುವ ಅಥವಾ ತಾಯಿ ತೀರಿಕೊಂಡಿರುವ, ತಂದೆ-ತಾಯಿ ಇಬ್ಬರು ತೀರಿಕೊಂಡಿದ್ದರೆ ಅಂಥವರನ್ನು ಪ್ರವೇಶ ಪರೀಕ್ಷೆ ಇಲ್ಲದೆ ಖುದ್ದು ಶ್ರೀಗಳೇ ಅವರಿಗೆ ಪ್ರವೇಶ ನೀಡುತ್ತಾರೆ ಮತ್ತು ಮುತುವರ್ಜಿ ವಹಿಸಿ, ಆ ಮಕ್ಕಳ ಶಿಕ್ಷಣಕ್ಕೆ ಕುಂದುಂಟಾಗದಂತೆ ಎಚ್ಚರ ವಹಿಸುತ್ತಾರೆ.

ಶ್ರೀಗಳ ದೃಷ್ಟಿಗೆ ಬಿದ್ದರೆ ಬೆಳಕು:

ಶ್ರೀಗಳು ಸುತ್ತಾಟ ಮಾಡುವ ವೇಳೆಯಲ್ಲಿ ಯಾವುದಾದರೂ ಮಗು ಹಾದಿ, ಬೀದಿಯಲ್ಲಿ ಸುತ್ತುತ್ತಿದ್ದರೆ, ಭಿಕ್ಷೆ ಬೇಡುತ್ತಿದ್ದರೆ ಅಂಥ ಮಗುವನ್ನು ಕರೆದು ವಾಹನದಲ್ಲಿ ಕೂರಿಸಿಕೊಂಡು, ಎಲ್ಲ ವಿಚಾರಿಸುತ್ತಾರೆ. ಹೀಗೆ ವಿಚಾರಣೆ ಮಾಡಿ, ಆ ಮಗುವಿಗೆ ಶಿಕ್ಷಣದ ಅಗತ್ಯತೆ ಇದೆ ಎನಿಸಿದಾಗ ಕರೆದುಕೊಂಡು ಬಂದು ಹಾಸ್ಟೆಲ್‌ನಲ್ಲಿ ಇರಿಸಿಕೊಳ್ಳುತ್ತಾರೆ. ಪಾಲಕರು ಇದ್ದರೆ ಅವರಿಗೆ ತಿಳಿಹೇಳಿ, ಆ ಮಗುವಿನ ಬಾಳಲ್ಲಿ ಬೆಳಕಾಗುತ್ತಾರೆ. ಅಂಥ ಅನೇಕ ಮಕ್ಕಳು ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದಾರೆ.

ಸುಸಜ್ಜಿತ ಹಾಸ್ಟೆಲ್:

ಮಗು ನಾನು ಹಾಸ್ಟೆಲ್‌ನಲ್ಲಿ ಇದ್ದೇನೆ ಎನ್ನುವ ಕಲ್ಪನೆ ಬರಬಾರದು ಎನ್ನುವ ರೀತಿಯಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಅಷ್ಟೇ ಅಲ್ಲ ಮಕ್ಕಳ ಪ್ರತಿಭೆ ಗುರುತಿಸಿ, ಅದಕ್ಕನುಗುಣವಾಗಿ ಶಿಕ್ಷಣ ನೀಡುತ್ತಾರೆ. ಸಂಗೀತದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಸಂಗೀತ ಶಿಕ್ಷಕರಿಂದ ವಿಶೇಷ ತರಗತಿ, ಕ್ರೀಡೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಕ್ರೀಡಾ ಶಿಕ್ಷಕರಿಂದ ವಿಶೇಷ ತರಬೇತಿ ನೀಡಲಾಗುತ್ತದೆ.

ಕಣ್ಣೀರಿಟ್ಟಿದ್ದ ಶ್ರೀಗಳು:

ಶ್ರೀಗಳು ಎರಡು ವರ್ಷಗಳ ಹಿಂದೆ ಗವಿಮಠದ ಹಾಸ್ಟೆಲ್‌ನಲ್ಲಿ ಮೂರೂವರೆ ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಾಗ ಅವರಿಗೆಲ್ಲ ಮೂಲಭೂತ ಸೌಕರ್ಯ ನೀಡುವುದು ಹೇಗೆ? ಇನ್ನು ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಣೆ ಮಾಡುವುದು ಹೇಗೆ? ಎಂದು ಕಣ್ಣೀರು ಹಾಕಿದ್ದರು. ಇದಕ್ಕೆ ನಾಡು ಸ್ಪಂದಿಸಿದ್ದರಿಂದ 5 ಸಾವಿರ ವಿದ್ಯಾರ್ಥಿಗಳು ತಂಗಬಹುದಾದ ಕಟ್ಟಡವನ್ನು ಪೂರ್ಣಗೊಳಿಸಿ, ಜು. 1ರಂದು ಲೋಕಾರ್ಪಣೆ ಮಾಡಲಾಗುತ್ತಿದೆ.

Share this article