ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರವಿಜಯಪುರ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ಗೆದ್ದು ಬೀಗಿದ್ದಾರೆ. ಬಿಜೆಪಿ ಹಿರಿಯ ನಾಯಕ ರಮೇಶ ಜಿಗಜಿಣಗಿ. ಮಂಗಳವಾರ ನಾಮಪತ್ರ ಸಲ್ಲಿಸಿದ್ದೇನೆ, ಮಂಗಳವಾರವೇ ಚುನಾವಣೆ ನಡೆದಿದೆ. ಮಂಗಳವಾರವೇ ಫಲಿತಾಂಶ ಬಂದಿದ್ದು, ತಾವು ಹೇಳಿದಂತೆಯೇ ರಮೇಶ ಜಿಗಜಿಣಗಿಗೆ ಮಂಗಳವಾರವೇ ಮಂಗಳಮಯವಾಗಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯ ಈ ಬಾರಿಯ ಗೆಲುವು ಸತತ 7ನೇ ಬಾರಿಗೆ ಸಂಸತ್ ಪ್ರವೇಶ ಮಾಡುತ್ತಿರುವ ಹೆಮ್ಮೆ ತಂದುಕೊಟ್ಟಿದೆ. ಈ ಹಿಂದೆ ಚಿಕ್ಕೋಡಿ ಎಸ್ಸಿ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಗೆದ್ದು ಬೀಗಿದ್ದ ಜಿಗಜಿಣಗಿ ವಿಜಯಪುರ ಮೀಸಲು ಆಗುತ್ತಿದ್ದಂತೆ ಈ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸತತ ಮೂರು ಬಾರಿ ಆಯ್ಕೆಯಾಗಿದ್ದರು. ಇದೀಗ ರಮೇಶ ಜಿಗಜಿಣಗಿ ವಿಜಯಪುರ ಎಸ್ಸಿ ಮೀಸಲು ಕ್ಷೇತ್ರದಿಂದಲೇ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಯಶಸ್ಸು ಕಂಡಿದ್ದಾರೆ. ಈ ಮೂಲಕ ಸತತ ನಾಲ್ಕನೇ ಬಾರಿಗೆ ಗೆದ್ದು ದಾಖಲೆ ನಿರ್ಮಿಸಿ, ಬಿಜೆಪಿಯಲ್ಲಿಯೇ ಅತ್ಯಂತ ಹಿರಿಯ ಸಂಸದ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.ಆಲಗೂರಗೆ ನಿರಾಸೆ:
ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಈ ಬಾರಿ ಜನತೆ ಬದಲಾವಣೆ ಬಯಸಿದ್ದಾರೆ. ತಮ್ಮ ಗೆಲುವು ಖಚಿತ ಎಂದುಕೊಂಡಿದ್ದರು. ಆದರೆ ನಿರೀಕ್ಷೆಯಂತೆ ಗೆಲುವು ಆಗದ ಕಾರಣ ನಿರಾಸೆಗೊಂಡಿದ್ದಾರೆ. ಎರಡು ಬಾರಿ ಶಾಸಕರಾಗಿದ್ದ ರಾಜು ಆಲಗೂರ ದೆಹಲಿಯ ಸಂಸತ್ ಮೆಟ್ಟಿಲು ಹತ್ತುವ ತವಕದಲ್ಲಿದ್ದರು. ಆದರೆ ಮತದಾರರು ಕೈ ಬಿಟ್ಟು ಕಮಲ ಅರಳಿಸಿದ್ದಾರೆ.---
ಬಾಕ್ಸ್50 ವರ್ಷಗಳ ರಾಜಕಾರಣ
ರಮೇಶ ಜಿಗಜಿಣಗಿ ಕಳೆದ 50 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಇದೀಗ ಏಳನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 1975ರಲ್ಲಿ ರಾಜಕೀಯ ಪ್ರವೇಶಿಸಿದ ಜಿಗಜಿಣಗಿ, ಎರಡು ಬಾರಿ ಮಾತ್ರ ಸೋಲು ಅನುಭವಿಸಿದ್ದಾರೆ. ಗೃಹ ಇಲಾಖೆ, ಅಬಕಾರಿ, ಕ್ರೀಡಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಬರೋಬ್ಬರಿ ಎಂಟು ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. 1983, 1984, 1989ರಲ್ಲಿ ಮೂರು ಬಾರಿ ಬಳ್ಳೊಳ್ಳಿ ಮೀಸಲು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1998, 1999, 2004ರಲ್ಲಿ ಮೂರು ಬಾರಿ ಚಿಕ್ಕೋಡಿ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರೆ, 2009, 2014, 2019, 2024ರಲ್ಲಿ ವಿಜಯಪುರ ಮೀಸಲು ಕ್ಷೇತ್ರದಿಂದ ಸತತ ಲೋಕಸಭೆಗೆ ಆಯ್ಕೆಯಾಗಿದ್ದಾರೆ.---
ಕೋಟ್ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ನನಗೆ ಮತ ನೀಡಿ, ಆಶೀರ್ವದಿಸಿದ ಎಲ್ಲ ಮತದಾರರಿಗೆ ನನ್ನ ಕೃತಜ್ಞತೆಗಳು. ಈ ಚುನಾವಣೆಯಲ್ಲಿ ನನಗೆ ಬೆಂಬಲವಾಗಿ ನಿಂತು, ಸಹಕಾರ ನೀಡಿ, ಹಗಲಿರುಳು ಶ್ರಮಿಸಿದ ಸಚಿವರು, ಶಾಸಕರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಬಾರಿ ಅತಿ ಹೆಚ್ಚು ಒಗ್ಗಟ್ಟಿನಿಂದ ಶ್ರಮಿಸಿದ್ದರು. ಅವರೆಲ್ಲರಿಗೂ ನನ್ನ ವೈಯಕ್ತಿಕ ಕೃತಜ್ಞತೆಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನ ಸೋಲನ್ನು ಒಪ್ಪಿಕೊಳ್ಳುತ್ತೇನೆ ಹಾಗೂ ಗೆಲವು ಸಾಧಿಸಿದ ರಮೇಶ ಜಿಗಜಿಣಗಿ ಅವರಿಗೆ ಅಭಿನಂದಿಸುತ್ತೇನೆ. ರಮೇಶ ಜಿಗಜಿಣಗಿಯವರು ಮಾಡುವ ಎಲ್ಲ ಉತ್ತಮ ಕಾರ್ಯಗಳಿಗೆ ನಾನು ಸಹಕಾರ ನೀಡುತ್ತೇನೆ.
-ಪ್ರೊ.ರಾಜು ಆಲಗೂರ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ.---
ಇದು ಕಾರ್ಯಕರ್ತರ ಗೆಲವು. ಒಂದು ಮತದ ಅಂತರದಿಂದಾದರೂ ನಾನು ಗೆಲ್ಲುವೆ ಎಂದು ಹೇಳಿದ್ದೆ, ಈಗ ನನ್ನ ಗೆಲುವು ಆಗಿದೆ. ಕಾಂಗ್ರೆಸ್ ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷದ ಕೈ ಹಿಡಿದಿವೆ. ಕ್ಷೇತ್ರದ ಜನರು ನನ್ನ ಕೈ ಹಿಡಿದಿದ್ದಾರೆ. ನನ್ನ ಗೆಲುವಿಗೆ ಕಾರಣರಾದ ಎಲ್ಲರಿಗೂ ಮತ್ತು ನನ್ನ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವೆ. ಕ್ಷೇತ್ರದ ಜನರ ನಿರೀಕ್ಷೆಯಂತೆ ಕೆಲಸ ಮಾಡುವೆ. ಕಳೆದು ಬಾರಿಗಿಂತ ಈ ಬಾರಿ ಗೆಲುವಿನ ಅಂತರ ಕಡಿಮೆಯಾಗಿದೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ಸಿಕ್ಕಿದೆ ನಾನು ಪಕ್ಷದಲ್ಲಿ ಹಿರಿಯ ಸಂಸದನಾಗಿದ್ದೇನೆ. ಜನರ ಸೇವೆ ಮಾಡಿದ್ದಕ್ಕೆ ನನಗೆ ಈ ಫಲ ಸಿಕ್ಕಿದೆ. ನನ್ನ ಮತದಾರರಿಗೆ, ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ.-ರಮೇಶ ಜಿಗಜಿಣಗಿ, ಬಿಜೆಪಿ ನೂತನ ಸಂಸದ.