ಪ್ರೇಮಿಗಳು ಪರಾರಿ: ಯುವಕನ ಮನೆಯವರ ಮೇಲೆ ಅಮಾನುಷ ಹಲ್ಲೆ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ಇತ್ತೀಚೆಗೆ ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಪ್ರೇಮಿಗಳು ಓಡಿ ಹೋದ ಹಿನ್ನೆಲೆಯಲ್ಲಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ತಾಲೂಕಿನ ಮುದೇನೂರಿನಲ್ಲೂ ಇಂಥದೇ ಅಮಾನವೀಯ ಘಟನೆಯೊಂದು ನಡೆದಿದ್ದು, ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಪ್ರೇಮಿಗಳು ಓಡಿ ಹೋಗಿದ್ದಕ್ಕೆ ಕುಪಿತಗೊಂಡ ಯುವತಿಯ ಮನೆಯವರು ಯುವಕನ ತಾಯಿ, ಸಹೋದರಿ, ಬಂಧುಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಇತ್ತೀಚೆಗೆ ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಪ್ರೇಮಿಗಳು ಓಡಿ ಹೋದ ಹಿನ್ನೆಲೆಯಲ್ಲಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ತಾಲೂಕಿನ ಮುದೇನೂರಿನಲ್ಲೂ ಇಂಥದೇ ಅಮಾನವೀಯ ಘಟನೆಯೊಂದು ನಡೆದಿದ್ದು, ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಪ್ರೇಮಿಗಳು ಓಡಿ ಹೋಗಿದ್ದಕ್ಕೆ ಕುಪಿತಗೊಂಡ ಯುವತಿಯ ಮನೆಯವರು ಯುವಕನ ತಾಯಿ, ಸಹೋದರಿ, ಬಂಧುಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.

ಒಂದೇ ಸಮುದಾಯಕ್ಕೆ ಸೇರಿದ ತಾಲೂಕಿನ ಚಳಗೇರಿ ಗ್ರಾಮದ ಯುವತಿ ಹಾಗೂ ಮುದೇನೂರ ಗ್ರಾಮದ ಪ್ರಕಾಶ ದೇವೇಂದ್ರಪ್ಪ ಪೂಜಾರ ಎಂಬ ಪ್ರೇಮಿಗಳು ಶನಿವಾರ ಮನೆ ಬಿಟ್ಟು ಓಡಿ ಹೋಗಿದ್ದಾರೆ.

ನಂತರ ಎರಡೂ ಮನೆಯವರು ಹಾಗೂ ಮುಖಂಡರು ಭಾನುವಾರ ಸಭೆ ಸೇರಿ ಆದಷ್ಟು ಬೇಗನೆ ಹುಡುಗಿಯನ್ನು ಕರೆತರುವಂತೆ ಹುಡುಗನ ಮನೆಯವರಿಗೆ ಎಚ್ಚರಿಸಿದ್ದರು.

ಗುಂಪು ದಾಳಿ:

ಇದಾದ ಮರುದಿನ ಸೋಮವಾರ ರಾತ್ರಿ 9.30 ರ ವೇಳೆಗೆ ಸುಮಾರು 10- 12 ಬೈಕ್‌ ಹಾಗೂ ಒಂದು ಕಾರಿನಲ್ಲಿ ಮುದೇನೂರು ಗ್ರಾಮದ ಹುಡುಗನ ಮನೆಗೆ ಬಂದ ಹುಡುಗಿಯ ಕಡೆಯವರು ಏಕಾ ಏಕಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಹುಡುಗನ ಮಾವ, ಆತನ ತಂದೆ, ತಾಯಿ ಹಾಗೂ ಅಕ್ಕನ ಮೇಲೆ ಹಲ್ಲೆ ಮಾಡಿದ್ದಾರೆ.

ನಂತರ ಹುಡುಗನ ಮಾವ ಹಾಗೂ ಗ್ರಾಪಂ ಸದಸ್ಯ ಪ್ರಶಾಂತ ಮಣಕೂರನನ್ನು ಕಾರಿನಲ್ಲಿ ಕರೆದೊಯ್ದು ರಾಣಿಬೆನ್ನೂರು ನಗರದ ದನದ ಮಾರುಕಟ್ಟೆಯ ಬಳಿ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಬೇಗನೆ ನಮ್ಮ ಹುಡುಗಿಯನ್ನು ಕರೆಸಿದರೆ ಒಳ್ಳೆಯದು ಇಲ್ಲವಾದರೆ ನೀನು ಬದುಕುವುದು ಕಷ್ಟ. ನೀನೇ ಅವರನ್ನು ಬಚ್ಚಿಟ್ಟಿದ್ದೀಯಾ ಬಾಯ್ಬಿಡು ಎಂದು ಜೀವ ಬೆದರಿಕೆ ಹಾಕುತ್ತ ಹಲ್ಲೆ ಮಾಡಿದ್ದಾರೆ. ಮೈ ಮೇಲೆ ಬಟ್ಟೆ ಇಲ್ಲದೆ ಬೀಸಾಡಿ ಆತನ ಬಳಿ ಇದ್ದ ಚಿನ್ನದ ಸರ ಹಾಗೂ ಹಣವನ್ನು ದೋಚಿ ನಂತರ ಗ್ರಾಮೀಣ ಪೊಲೀಸ್ ಠಾಣೆಯ ಬಳಿ ಬಿಸಾಕಿ ಹೋಗಿದ್ದಾರೆ ಎಂದು ಸ್ವತಃ ಪ್ರಶಾಂತ ಮಣಕೂರ ಪತ್ರಿಕೆಗೆ ತಿಳಿಸಿದರು.

ಮಾನವೀಯತೆ ಮೆರೆದ ಪಿಎಸ್‌ಐ:

ಗಾಯಗೊಂಡ ಪ್ರಶಾಂತನನ್ನು ಹಲಗೇರಿ ಗ್ರಾಮೀಣ ಪಿಎಸ್‌ಐ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಪ್ರೇಮಿಗಳು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿದ್ದಾರೆ. ಯುವತಿಯು ತಾನು ಯುವಕನೊಂದಿಗೆ ಜೀವನ ಸಾಗಿಸುವುದಾಗಿ ಪಟ್ಟು ಹಿಡಿದಿದ್ದಾಳೆ ಎಂದು ಪೊಲೀಸ್ ಮೂಲಗಳಿಂದ ತಿಳಿಸಿವೆ.

ಈ ಕುರಿತು ಶಿವಾಜೆಪ್ಪ ಮರಿಯಪ್ಪ ಕಮದೋಡ, ಬಸವರಾಜಪ್ಪ ನೀಲಪ್ಪ ಬೆನಕನಕೊಂಡ, ಹರೀಶ ಸಣ್ಣಗುಡ್ಡಪ್ಪ ಬೆನಕನಕೊಂಡ, ಸುನಿಲ ಹುಚ್ಚಂಗೆಪ್ಪ ಮೂಕಮ್ಮನವರ ಸೇರಿದಂತೆ 20ಕ್ಕೂ ಅಧಿಕ ಮಂದಿಯ ಮೇಲೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Share this article