ತಗ್ಗು ಪ್ರದೇಶ ಜಲಾವೃತ, ಜನಜೀವನ ಅಸ್ತವ್ಯಸ್ತ

KannadaprabhaNewsNetwork |  
Published : Jul 05, 2024, 12:57 AM ISTUpdated : Jul 05, 2024, 12:47 PM IST
ಪೊಟೋ ಪೈಲ್ : 4ಬಿಕೆಲ್2: ಭಟ್ಕಳ ರಂಗೀಕಟ್ಟೆ ರಾಷ್ಟ್ರೀಯ ಹೆದ್ದಾರಿ ವ್ಯಾಪಕ ಮಳೆಗೆ ಹೊಳೆ ಆಗಿರುವುದು. ಪೊಟೋ ಪೈಲ್ : 4ಬಿಕೆಲ್ 3:ಭಟ್ಕಳದ ಸಾಗರ ರಸ್ತೆಯ ಗಟಾರ ಮುಚ್ಚಿದ್ದರಿಂದ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿರುವುದು.ಪೊಟೋ ಪೈಲ್ : 4ಬಿಕೆಲ್4:  ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು ಖುದ್ದಾಗಿ ನಿಂತು ಜೆಸಿಬಿ ಮೂಲಕ ವೃತ್ತದ ಮುಚ್ಚಿರುವ ಗಟಾರ ಬಿಡಿಸಿ ನೀರು ಹೋಗುವಂತೆ ಮಾಡಿಸುತ್ತಿರುವುದು.  | Kannada Prabha

ಸಾರಾಂಶ

ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನೆರೆ ಹಾವಳಿಯ ಭೀತಿ ಗ್ರಾಮೀಣ ಭಾಗದಲ್ಲಿ ಕಾಡುತ್ತಿದ್ದರೆ, ಅನೇಕ ತೋಟ, ಗದ್ದೆಗಳು ಜಲಾವೃತವಾಗಿದ್ದು ರೈತರು ಆತಂಕದಲ್ಲಿದ್ದಾರೆ.

ಭಟ್ಕಳ:  ತಾಲೂಕಿನಲ್ಲಿ ಗುರುವಾರ ಮಧ್ಯಾಹ್ನದವರೆಗೆ ಭಾರೀ ಮಳೆ ಸುರಿದಿದ್ದರಿಂದ ರಂಗೀಕಟ್ಟೆ ಹೆದ್ದಾರಿ, ತಗ್ಗು ಪ್ರದೇಶ ಜಲಾವೃತಗೊಂಡು ಜನರು ತೊಂದರೆ ಅನುಭವಿಸಿದರು.

ತಾಲೂಕಿನಲ್ಲಿ ಗುರುವಾರ ಬೆಳಗ್ಗೆ ವರೆಗೆ ೧೨೫ ಮಿಮೀ ಮಳೆಯಾಗಿದೆ. ಇಲ್ಲಿಯ ತನಕ ಒಟ್ಟೂ ೧೫೭೯.೨ ಮಿಮೀ ಮಳೆಯಾಗಿದೆ. ವ್ಯಾಪಕ ಮಳೆಗೆ ಎಲ್ಲೆಲ್ಲೂ ನೀರು ಎನ್ನುವಂತಾಗಿದೆ. ಬಹುತೇಕ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಅನೇಕ ಕಡೆ ಅಪಾಯದ ಆತಂಕ ಎದುರಾಗಿದೆ.

ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನೆರೆ ಹಾವಳಿಯ ಭೀತಿ ಗ್ರಾಮೀಣ ಭಾಗದಲ್ಲಿ ಕಾಡುತ್ತಿದ್ದರೆ, ಅನೇಕ ತೋಟ, ಗದ್ದೆಗಳು ಜಲಾವೃತವಾಗಿದ್ದು ರೈತರು ಆತಂಕದಲ್ಲಿದ್ದಾರೆ.

ಸುಮಾರು ೨- ೩ ತಾಸಿಗೂ ಅಧಿಕ ರಸ್ತೆಯಲ್ಲಿ ನೀರು ನಿಂತಿದ್ದರಿಂದ ದೂರ ಪ್ರಯಾಣದ ವಾಹನಗಳಿಗೂ ತೀವ್ರ ತೊಂದರೆಯಾಗಿದ್ದು, ವರ್ಷಂಪ್ರತಿಯ ಗೋಳು ಈ ವರ್ಷವೂ ಮುಂದುವರಿದಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಂಗೀಕಟ್ಟೆಯಲ್ಲಿ ಕಳೆದ 5-6 ವರ್ಷಗಳಿಂದ ಪ್ರತಿವರ್ಷ ಎನ್ನುವಂತೆ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದ್ದರೂ ಹೆದ್ದಾರಿ ಅಧಿಕಾರಿಗಳಾಗಲೀ, ಗುತ್ತಿಗೆದಾರ ಕಂಪೆನಿಯಾಗಲೀ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಳ್ಳದೇ ಇರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಎಚ್ಚರಿಕೆಯನ್ನು ಕೊಟ್ಟರೂ ಹೆದ್ದಾರಿ ಅಧಿಕಾರಿಗಳು, ಗುತ್ತಿಗೆದಾರ ಕಂಪನಿಯವರು ತಮಗೂ ಈ ಸಮಸ್ಯೆಗೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ. ಪಟ್ಟಣದ ಸಾಗರ ರಸ್ತೆಯಲ್ಲಿ ಮಳೆ ನೀರು ಹೋಗುವ ಗಟಾರ ಮುಚ್ಚಿದ್ದರಿಂದ ನೀರು ರಸ್ತೆ ಮೇಲೆ ನಿಂತು ಹೊಳೆಯಾಗಿತ್ತು. ಬೆಳಗ್ಗೆ ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಸಾರ್ವಜನಿಕರು ರಸ್ತೆಯಲ್ಲಿ ನಿಂತಿರುವ ನೀರಿನಲ್ಲೇ ಸಂಚರಿಸಿ ತೊಂದರೆ ಅನುಭವಿಸಿದರು. ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಹಾಗೂ ಅಧಿಕಾರಿಗಳು ಖುದ್ದು ನಿಂತು ರಸ್ತೆ ಗಟಾರವನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹೋಗುವಂತೆ ಮಾಡಿದ್ದರಿಂದ ಸಮಸ್ಯೆ ಬಗೆಹರಿಯಿತು. 

ಇಂದು ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡ

ಕಾರವಾರ: ಜಿಲ್ಲೆಯಲ್ಲಿ ಇನ್ನೂ 3ರಿಂದ 4 ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಗೆ ರಾಜ್ಯ ಸರ್ಕಾರದಿಂದ 2 ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಶುಕ್ರವಾರ ಆಗಮಿಸಲಿವೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, ಎನ್‌ಡಿಆರ್‌ಎಫ್‌ನ ಪ್ರತಿ ತಂಡದಲ್ಲಿ ತಲಾ 25 ಮಂದಿ ರಕ್ಷಣಾ ಸಿಬ್ಬಂದಿಗಳಿರಲಿದ್ದು, ಯಾವುದೇ ರೀತಿಯ ತುರ್ತು ಕಾರ್ಯಾಚರಣೆಯನ್ನು ಕೈಗೊಳ್ಳಲು ಅಗತ್ಯವಿರುವ ಎಲ್ಲ ಅಗತ್ಯ ರಕ್ಷಣಾ ಸಾಧನಗಳೊಂದಿಗೆ ಬರುವ ಈ ತಂಡವನ್ನು ಕಾರವಾರ, ಕುಮಟಾ ಮತ್ತು ಅಂಕೋಲಾ ಭಾಗದಲ್ಲಿ ನಿಯೋಜಿಸಲಾಗುವುದು.

7 ಕಾಳಜಿ ಕೇಂದ್ರ ಸ್ಥಾಪನೆ

ಜಿಲ್ಲೆಯಲ್ಲಿ ಹೊನ್ನಾವರದಲ್ಲಿ 4, ಕುಮಟಾ ದಲ್ಲಿ 2 ಮತ್ತು ಅಂಕೋಲಾದಲ್ಲಿ 1 ಸೇರಿದಂತೆ ಒಟ್ಟು 7 ಕಾಳಜಿ ಕೇಂದ್ರಗಳನ್ನು ತೆರೆದಿದ್ದು, ಈ ಕೇಂದ್ರಗಳಲ್ಲಿ 230ಕ್ಕೂ ಅಧಿಕ ಮಂದಿಗೆ ಆಶ್ರಯ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಸಂಬಂಧಪಟ್ಟ ತಾಲೂಕುಗಳ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಊಟದ ವ್ಯವಸ್ಥೆ ಮತ್ತು ರಾತ್ರಿ ತಂಗಲು ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಲಾಗಿದೆ. ವೈದ್ಯರ ತಂಡದಿಂದ ಆರೋಗ್ಯ ಪರಿಶೀಲನೆ ಮತ್ತು ಅಗತ್ಯವಿರುವ ಔಷಧ ಸೌಲಭ್ಯವನ್ನು ಒದಗಿಸಲಾಗಿದೆ.

ಸಹಾಯವಾಣಿ ಸ್ಥಾಪನೆಸಾರ್ವಜನಿಕರು ಯಾವುದೇ ಸಮಸ್ಯೆಗಳಲ್ಲಿ ಉಚಿತ ತುರ್ತು ಸಹಾಯವಾಣಿ 1077 ಹಾಗೂ ಮೊ. 9483511015 ಕರೆ, ಮೆಸೆಜ್, ವಾಟ್ಸ್‌ಆ್ಯಪ್ ಸಂದೇಶ ಮತ್ತು ವಾಟ್ಸ್‌ಆ್ಯಪ್ ಕರೆ ಮಾಡಿ ಮಾಹಿತಿ ನೀಡುವಂತೆ ಡಿಸಿ ಕೋರಿದ್ದಾರೆ.

PREV

Latest Stories

ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ
ಚಿಕ್ಕಬಳ್ಳಾಪುರಕ್ಕೂ ಬರಲಿದೆ ಕುಸುಮ್‌ ಯೋಜನೆ
ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೆಪಟೈಟಿಸ್ ಬಿ ಲಸಿಕೆ