ತಗ್ಗಿದ ಮಳೆ: ಅಲ್ಲಲ್ಲಿ ಹಾನಿ, ಬೆಳೆ ನಿರುಪಾಲು

KannadaprabhaNewsNetwork | Published : Aug 4, 2024 1:27 AM

ಸಾರಾಂಶ

ಆನಂದಪುರ ಸಮೀಪದ ಲಕ್ಕವಳ್ಳಿ ಗ್ರಾಮದಲ್ಲಿ ಮಳೆಯಿಂದ ದೇವೇಂದ್ರ ಎಂಬುವರ ವಾಸದ ಮನೆಯ ಗೋಡೆ ಕುಸಿದಿದ್ದು, ನಿರಂತರ ಮಳೆ ಜಿಲ್ಲೆಯ ಅಲ್ಲಲ್ಲಿ ಹಾನಿ ತಂದೊಡ್ಡಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಭದ್ರಾವತಿ

ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಶನಿವಾರ 28.24 ಮಿ.ಮೀ ಸರಾಸರಿ ಮಳೆ ಸುರಿದಿದೆ. ಮಳೆ ಪ್ರಮಾಣದಲ್ಲಿ ಕಡಿಮೆಯಾದರೂ ಅಲ್ಲಲ್ಲಿ ಹಾನಿ ಮುಂದುವರೆದಿದೆ.

ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸಾಗರದಲ್ಲಿ 56.80 ಮಿ.ಮೀ ಮಳೆ ಸುರಿದಿದ್ದರೆ, ತೀರ್ಥಹಳ್ಳಿಯಲ್ಲಿ 53.80 ಮಿ.ಮೀ, ಹೊಸನಗರದಲ್ಲಿ 48.70 ಮಿ.ಮೀ ಮಳೆ ಯಾಗಿದೆ. ಉಳಿದಂತೆ ಸೊರಬದಲ್ಲಿ 28.20 ಮಿ.ಮೀ, ಶಿಕಾರಿಪುರದಲ್ಲಿ 5.30 ಮಿ.ಮೀ, ಶಿವಮೊಗ್ಗದಲ್ಲಿ 3.10 ಮಿ.ಮೀ, ಭದ್ರಾವತಿಯಲ್ಲಿ 1.80 ಮಿ.ಮೀ ಮಳೆ ಸುರಿದಿದೆ.

ಮನೆ ಗೋಡೆ ಕುಸಿತ:

ಆನಂದಪುರ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗ್ರಾಮೀಣ ಭಾಗದ ಜನಜೀವನ ಅಸ್ತವ್ಯಸ್ತವಾಗಿದೆ. ವಿಪರೀತವಾಗಿ ಮಳೆ ಸುರಿಯುತ್ತಿದ್ದು ಜನರ ಬದುಕು ಕೂಡ ಮಳೆಯ ಆರ್ಭಟಕ್ಕೆ ಕುಚ್ಚಿಕೊಂಡು ಹೋಗುತ್ತಿದೆ. ಮನೆಯ ಸೂರಿನೊಂದಿಗೆ ಬೆಳೆಯುತ್ತಿರುವಂತಹ ಬೆಳೆಗಳು ನಿರುಪಾಲಾಗುತ್ತಿವೆ.

ಆಚಾಪುರ ಗ್ರಾಮ ಪಂಚಾಯಿತಿಯ ಲಕ್ಕವಳ್ಳಿ ಗ್ರಾಮದಲ್ಲಿನ ದೇವೇಂದ್ರ ಎಂಬುವರ ವಾಸದ ಮನೆಯ ಗೋಡೆ ಶುಕ್ರವಾರ ಸಂಜೆ ಕುಸಿದು ಬಿದ್ದಿದೆ. ಗೋಡೆ ಹೊರ ಭಾಗಕ್ಕೆ ಬಿದ್ದ ಕಾರಣ ಯಾವುದೇ ಅನಾಹುತಗಳು ಸಂಭವಿಸಿಲ್ಲ. ವಿಷಯ ತಿಳಿದ ಕಂದಾಯ ಅಧಿಕಾರಿ ಚಂದ್ರಮೌಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಂಗ ಸ್ವಾಮಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.ಉಕ್ಕಿ ಹರಿಯುತ್ತಿರುವ ಭದ್ರಾಗೆ ಬಿದ್ದ ಮೆಸ್ಕಾಂ ಗುತ್ತಿಗೆ ನೌಕರ; ಶೋಧ

ಭದ್ರಾವತಿ: ನಗರದ ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರ ರಾಜು ಎಂಬುವರು ಶುಕ್ರವಾರ ರಾತ್ರಿ ಭದ್ರಾ ನದಿಗೆ ಬಿದ್ದಿರುವ ಘಟನೆ ನಡೆದಿದ್ದು, ಮೃತ ದೇಹದ ಹುಡುಕಾಟ ನಡೆಸಲಾಗುತ್ತಿದೆ.ಕಳೆದ ಸುಮಾರು ೫-೬ ದಿನಗಳಿಂದ ನಗರದ ಹೃದಯ ಭಾಗದಲ್ಲಿ ಉಕ್ಕಿ ಹರಿಯುತ್ತಿರುವ ಭದ್ರಾ ನದಿಗೆ ನಗರಸಭೆ ಸಮೀಪ ರಾಜು ಎಂಬುವರು ಬಿದ್ದಿದ್ದಾರೆ ಎನ್ನಲಾಗಿದೆ. ರಾತ್ರಿಯಿಂದಲೇ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಮೃತದೇಹದ ಹುಡುಕಾಟದಲ್ಲಿ ತೊಡಗಿದ್ದಾರೆ. ಆದರೆ ಇದುವರೆಗೂ ಪತ್ತೆಯಾಗಿಲ್ಲ. ರಾಜು ಹಲವಾರು ವರ್ಷಗಳಿಂದ ಮೆಸ್ಕಾಂ ಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಗರಸಭೆ ವ್ಯಾಪ್ತಿಯ ಹೊಸಮನೆಯಲ್ಲಿ ವಾಸಿಸುತ್ತಿದ್ದಾರೆ. ಮೃತ ದೇಹ ಪತ್ತೆಯಾದ ನಂತರ ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಮೃತಪಟ್ಟಿದ್ದಾರೋ ಎಂಬುದು ತಿಳಿದು ಬರಲಿದೆ. ಹಳೇನಗರ ಠಾಣೆ ಪೊಲೀಸರು ಸಹ ಸ್ಥಳದಲ್ಲಿ ಬೀಡುಬಿಟ್ಟು ಕಾರ್ಯಾಚರಣೆಗೆ ಸಹಕರಿಸಿದ್ದಾರೆ.

Share this article