- ಒಂಟೆತ್ತು ಬಂಡಿ ಎತ್ತಿನ ಮೈ ಸವರಿ ಮೆರವಣಿಗೆಗೆ ಬೀರದೇವರ ಗಣಮಗ ಅಣ್ಣಪ್ಪ ಚಾಲನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ವಿಶ್ವವಿಖ್ಯಾತ ಮೈಸೂರು ದಸರಾ ಹಾಗೂ ಶರನ್ನವರಾತ್ರಿ ಅಂಗವಾಗಿ ನಡೆಯುವ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಹೊತ್ತ ಜಂಬೂ ಸವಾರಿ ಮಾದರಿಯಲ್ಲಿ ಹೊನ್ನಾಳಿಯಲ್ಲೂ ಅನಾದಿ ಕಾಲದಿಂದ ಕಲ್ಕೇರಿ, ದೊಡ್ಡಕೇರಿ ಹಾಗೂ ಸರ್ವರಕೇರಿ ದೇವಸ್ಥಾನಗಳ ಆಶ್ರಯದಲ್ಲಿ ಲೋಡ್ ಬಂಡಿ (ಹೊಳಿಬಂಡಿ) ಉತ್ಸವ ಶನಿವಾರ ಅದ್ಧೂರಿಯಾಗಿ ನಡೆಯಿತು.ಮೈಸೂರು ಅರಸರ ಕಾಲದಲ್ಲಿ ಆರಂಭವಾದ ಸಮಯದಿಂದಲೂ ಈವರೆಗೂ ಭಾರಿ ಗಾತ್ರದ ಲೋಡ್ ಬಂಡಿಗೆ ವಿವಿಧ ಬಣ್ಣಗಳಿಂದ ಕೂಡಿದ ರೇಷ್ಮೆ ಸೀರೆಗಳಿಂದ ಹಾಗೂ ಹೂವು ಮತ್ತು ಬಣ್ಣಬಣ್ಣದ ಬಾವುಟಗಳಿಂದ ಅಲಂಕಾರ ಮಾಡಿದ ಬಂಡಿಯ (ಹೊಳಿ ಬಂಡಿ) ಮುಂಭಾಗದಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಗಳನ್ನಿಟ್ಟು ಪೂಜೆ ಸಲ್ಲಿಸುತ್ತಾರೆ.
ಅನಂತರ ಗರಡಿಮನೆಯ ಪೈಲ್ವಾನರು ಬಳಸುವ ಗದೆ (ಮೌಲಾಲಿ)ಯನ್ನು ರೇಷ್ಮೆಬಟ್ಟೆಯಲ್ಲಿ ಸುತ್ತಿ ಬಂಡಿಯೊಳಗೆ ಇಡುತ್ತಾರೆ. ಬಲವಾದ ಒಂಟೆತ್ತು ಹೂಡಿ, ಬೀರದೇವರ ಗಣಮಗ ಅಣ್ಣಪ್ಪ ಅವರು ಎತ್ತಿನ ಮೈ ಸವರುವ ಮೂಲಕ ಓಡುವಂತೆ ಚಾಲನೆ ನೀಡುವುದು ಇಲ್ಲಿನ ಆಚರಣೆ. ಅದರಂತೆ ಬಂಡಿಗೆ ಚಾಲನೆ ನೀಡಲಾಯಿತು. ಎರಡ್ಮೂರು ಕಿ.ಮೀ.ವರೆಗೆ ಸಾಗಿದ ಬಂಡಿಯು ತುಂಗಭದ್ರಾ ನದಿಗೆ ಕೊಂಡೊಯ್ದು, ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಪೈಲ್ವಾನರ ಗದೆಯನ್ನು ಪೂಜಿಸಿ ಬಂಡಿಯೊಳಗೆ ಇಟ್ಟು ಪುನಃ ಬಂಡಿಯನ್ನು ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಮಧ್ಯೆ ಪ್ರಮುಖ ವೃತ್ತಗಳಲ್ಲಿ ಕಸರತ್ತು ಮಾಡಿದ ಪೈಲ್ವಾನರು ಸಾಂಪ್ರದಾಯಿಕವಾಗಿ ಕುಸ್ತಿ ಆಡಿದಂತೆ ಅಣಕು ಪ್ರರ್ದಶನ ನೀಡಿದರು.
ಮೆರವಣಿಗೆ ಮೂಲಕ ಬಂಡಿಯನ್ನು ಪ್ರಮುಖ ಬೀದಿಗಳಲ್ಲಿ ಕರೆದೊಯ್ದು ಪುನಃ ದೇವಸ್ಥಾನಕ್ಕೆ ತಂದು ಯಥಾಸ್ಥಿತಿಯಲ್ಲಿ ಇರಿಸಲಾಯಿತು. ಭಕ್ತಗಣ ಎಲ್ಲರೂ ಶಮೀವೃಕ್ಷದತ್ತ ತೆರಳಿ ಶಮಿ ವಿನಿಮಯ ಮಾಡಿಕೊಂಡು, ಹಬ್ಬದ ಶುಭಾಶಯ ಕೋರಿದರು.ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಗೌಡರ ನರಸಪ್ಪ, ಬುದ್ಧಿವಂತ ನರಸಿಂಹಪ್ಪ, ಮುಖಂಡರಾದ ಎಚ್.ಡಿ. ವಿಜೇಂದ್ರಪ್ಪ, ಅಡ್ಡಗಣ್ಣಾರ ಗಾಳೇಶಪ್ಪ, ಬಿಸಾಟಿ ನಾಗರಾಜ್, ಭಂಗಿ ಪರಮೇಶ್ವರಪ್ಪ, ನೂರಾರು ಯುವಕರು ಬಂಡಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
- - - - -12ಎಚ್.ಎಲ್.ಐ2:ಹೊನ್ನಾಳಿ ಪಟ್ಟಣದಲ್ಲಿ ಜಂಬೂ ಸವಾರಿ ಮಾದರಿಯಲ್ಲಿ ಹೊನ್ನಾಳಿಯಲ್ಲಿ ಅನಾದಿ ಕಾಲದಿಂದ ನಡೆದುಬಂದಿರುವ ಲೋಡ್ ಬಂಡಿ ಉತ್ಸವದ ಮೆರವಣಿಗೆ ಪಟ್ಣಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ನಡೆಯಿತು.