ಪ್ರಾಣತ್ಯಾಗ ಮಾಡಿದ ಮೊದಲಿಗರಲ್ಲಿ ಮದಕರಿ ನಾಯಕರು

KannadaprabhaNewsNetwork | Published : Jan 28, 2024 1:17 AM

ಸಾರಾಂಶ

ರಾಜ್ಯದಲ್ಲಿ ಅನೇಕ ಸಂಸ್ಥಾನಗಳ ರಾಜರು ಉತ್ತಮ ಆಡಳಿತ ನಡೆಸಿ ಜನರಿಗೆ ರಕ್ಷಣೆ ನೀಡಿದ್ದರು. ಅದರಲ್ಲೂ ವಿಶೇಷವಾಗಿ ಪ್ರಜೆಗಳ ಯೋಗಕ್ಷೇಮಕ್ಕಾಗಿ ಪ್ರಾಣ ತ್ಯಾಗಮಾಡಿದ ಮಹಾರಾಜರ ಸಾಲಿನಲ್ಲಿ ಚಿತ್ರದುರ್ಗದ ವೀರ ಮದಕರಿ ನಾಯಕರು ಮೊದಲ ಸ್ಥಾನದಲ್ಲಿದ್ದಾರೆ.

ಚಳ್ಳಕೆರೆ: ರಾಜ್ಯದಲ್ಲಿ ಅನೇಕ ಸಂಸ್ಥಾನಗಳ ರಾಜರು ಉತ್ತಮ ಆಡಳಿತ ನಡೆಸಿ ಜನರಿಗೆ ರಕ್ಷಣೆ ನೀಡಿದ್ದರು. ಅದರಲ್ಲೂ ವಿಶೇಷವಾಗಿ ಪ್ರಜೆಗಳ ಯೋಗಕ್ಷೇಮಕ್ಕಾಗಿ ಪ್ರಾಣ ತ್ಯಾಗಮಾಡಿದ ಮಹಾರಾಜರ ಸಾಲಿನಲ್ಲಿ ಚಿತ್ರದುರ್ಗದ ವೀರ ಮದಕರಿ ನಾಯಕರು ಮೊದಲ ಸ್ಥಾನದಲ್ಲಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಸಾಣಿಕೆರೆ ಗ್ರಾಮದ ಮಾರುತಿ ಪ್ರೌಢಶಾಲೆ ಆವರಣದಲ್ಲಿ ಹಿರಿಯ ಪತ್ರಕರ್ತ ಸೊಂಡೆಕೆರೆ ಶಿವಣ್ಣ ಬಳಗ ಹಮ್ಮಿಕೊಂಡಿದ್ದ 12ನೇ ವರ್ಷದ 77ನೇ ಪಾಳೇಗಾರರ ನೆನಪಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜಾ ಮದಕರಿ ನಾಯಕ ಆಸ್ಥಾನದ ದೇವತೆಗಳಾದ ಉಚ್ಚಂಗಿ ಯಲ್ಲಮ್ಮ, ಏಕನಾಥೇಶ್ವರಿ ಅವರ ಆಶೀರ್ವಾದದಿಂದ ಹಲವಾರು ವರ್ಷಗಳ ಕಾಲ ಆಡಳಿತ ನಡೆಸಿದರು. ನಂತರ ಕುತಂತ್ರಕ್ಕೆ ಬಲಿಯಾಗಿ ಮದಕರಿ ನಾಯಕರು ಪ್ರಾಣತ್ಯಾಗ ಮಾಡಿದರು. ಪಾಳೇಗಾರರ ಸಂತತಿ ಅಂದು ನಡೆಸಿದ ಅನೇಕ ದಿಟ್ಟಹೋರಾಟ ನಾಡನ್ನು ರಕ್ಷಿಸುವ ಅವರ ಜವಾಬ್ದಾರಿ ಇಂದಿಗೂ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ ಎಂದರು.

ಹಿರಿಯ ಸಾಹಿತಿ, ಪತ್ರಕರ್ತ ಬಿ.ತಿಪ್ಪಣ್ಣಮರಿಕುಂಟೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಾಳೇಗಾರರ ಹೆಸರು ಕೇಳಿದರೆ ಕೆಲವರಲ್ಲಿ ಆಶ್ಚರ್ಯ ಉಂಟಾಗುತ್ತದೆ. ಇತಿಹಾಸವನ್ನು ಓದಿದಾಗ ವಿಶೇಷವಾಗಿ ಮದಕರಿ ನಾಯಕರ ಆಳ್ವಿಕೆ ಬಗ್ಗೆ ಮಾಹಿತಿ ಪಡೆದರೆ ಮಾತ್ರ ಪಾಳೇಗಾರರು ಯಾರು ಮತ್ತು ಅವರು ನಾಡಿಗೆ ಸಲ್ಲಿಸಿದ ಸೇವೆಯ ಬಗ್ಗೆ ನಮಗೆ ಮನವರಿಕೆಯಾಗುತ್ತದೆ. ನೂರಾರು ವರ್ಷಗಳ ನಂತರವೂ ಈ ಸಮುದಾಯದ ಹಿರಿಯ ಮುಖಂಡ ಸೊಂಡೆಕೆರೆ ಶಿವಣ್ಣ 77ನೇ ಪಾಳೇಗಾರರ ನೆನಪಿನೋತ್ಸವ ಹಮ್ಮಿಕೊಳ್ಳುವ ಮೂಲಕ ಮತ್ತೊಮ್ಮೆ ನಮ್ಮೆಲ್ಲರನ್ನೂ ಮಹಾರಾಜರ ಆಡಳಿತ ನೆನಪು ಮಾಡಿಸುತ್ತದೆ ಎಂದರು.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಶಿಡ್ಲಕೋಣೆ ಮಹರ್ಷಿ ವಾಲ್ಮೀಕಿ ಗುರುಪೀಠದ ಸಂಜಯಕುಮಾರನಂದಾ ಮಹಾಸ್ವಾಮಿ ಮಾತನಾಡಿ, ಧೈರ್ಯ, ಸಾಹಸ, ಶೌರ್ಯಕ್ಕೆ ಮತ್ತೊಂದು ಹೆಸರೇ ಮದಕರಿ ನಾಯಕರು. ಯಾವುದೇ ವೈರಿ ಚಿತ್ರದುರ್ಗದ ಕೋಟೆ ಪ್ರವೇಶಿಸಿದಂತೆ 7 ಸುತ್ತಿನ ಕೋಟೆ ನಿರ್ಮಿಸುವ ಮೂಲಕ ಇಂದಿಗೂ ಜನರ ಮನದಲ್ಲಿ ಶಾಶ್ವತವಾಗಿ ಉಳಿಸಿದ್ದಾರೆಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸೊಂಡೆಕೆರೆ ಶಿವಣ್ಣ ಮಾತನಾಡಿ, ೭೭ ಪಾಳೇಗಾರರ ನೆನಪಿನೋತ್ಸವ ಕಾರ್ಯಕ್ರಮ ಇದಾಗಿದೆ. ಚಿತ್ರದುರ್ಗ, ಹಾಗಲವಾಡಿ, ಜರಿಮಲೆ, ಮೊಳಕಾಲ್ಮುರು, ಕುಂದರ್ಪಿ, ಗುಮ್ಮನಾಯಕನಹಳ್ಳಿ ಮತ್ತು ನಾಯಕನಹಟ್ಟಿ ಪ್ರಾಂತಗಳಲ್ಲಿ ಇಂದಿಗೂ ಪಾಳೇಗಾರರ ವಂಶಸ್ಥರು ಇದ್ದಾರೆ. ತಮ್ಮ ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಅವರು ನಡೆಯುತ್ತಿದ್ದಾರೆ. ೭೭ ಪಾಳೇಗಾರರ ಸಂಪೂರ್ಣ ಮಾಹಿತಿ ಶಾಶ್ವತವಾಗಿರಬೇಕಾದರೆ ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಸಬೇಕಿದೆ. ಕಾರಣ, ಇತಿಹಾಸ ಎಂದಿಗೂ ಇವರನ್ನು ಮರೆಯಲು ಸಾಧ್ಯವಿಲ್ಲ. ಜನರೂ ಸಹ ಪಾಳೇಗಾರರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಿ.ತಿಪ್ಪೇಸ್ವಾಮಿ, ಕೆಪಿಸಿಸಿ ಜಿಲ್ಲಾಧ್ಯಕ್ಷ ತಾಜ್‌ಪೀರ್, ಸಿ.ಟಿ.ವೀರೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರಲಗುಂಟೆರಾಮಪ್ಪ, ಡಾ.ಪಾಲಾಕ್ಷ, ಡಾ.ಮಂಜಪ್ಪ, ಡಾ.ಡಿ.ಎನ್.ಮಂಜುನಾಥ, ಸೂರನಾಯಕ, ಎಲ್‌ಐಸಿ ತಿಪ್ಪೇಸ್ವಾಮಿ, ನಾಗರಾಜು, ದುಗ್ಗಾವರ ತಿಪ್ಪೇಸ್ವಾಮಿ, ಎಂ.ಚೇತನ್‌ ಕುಮಾರ್, ರಾಜಪರಶುರಾಮ ನಾಯಕ, ಬೊಮ್ಮಣ್ಣ, ಗೌರೀಶ್ ಮುಂತಾದವರು ಉಪಸ್ಥಿತರಿದ್ದರು.

Share this article