ಬೆಂಗಳೂರು : ಕನ್ನಡದ ಖಾಸಗಿ ಸುದ್ದಿ ವಾಹಿನಿಯ ಹೆಸರಿನಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಮಾಡುವುದಾಗಿ ಮಸಾಜ್ ಪಾರ್ಲರ್‌ವೊಂದರ ಮ್ಯಾನೇಜರ್‌ಗೆ ಬೆದರಿಸಿ 8 ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ ಆರೋಪದಡಿ ಜೀವಭೀಮಾನಗರದಲ್ಲಿ ದೂರು ದಾಖಲಾಗಿದೆ. ಇಂದಿರಾನಗರದ 100 ಅಡಿ ರಸ್ತೆ 15ನೇ ಮುಖ್ಯರಸ್ತೆಯ ‘ಟ್ರೀ ಸ್ಪಾ ಆ್ಯಂಡ್ ಬ್ಯೂಟಿ’ ಎಂಬ ಮಸಾಜ್ ಪಾರ್ಲರ್ ಮ್ಯಾನೇಜರ್ ಶಿವಶಂಕರ್ ಎಂಬುವವರು ನೀಡಿದ ದೂರಿನ ಮೇರೆಗೆ ರಾಜ್ ನ್ಯೂಸ್ ವಾಹಿನಿಯ ವೆಂಕಟೇಶ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?
ರಿಯಾನ್ ಜಗದೇವ್ ಮತ್ತು ರೂಪಂ ರೊಹಟಗಿ ಎಂಬುವವರು ಟ್ರೀ ಸ್ಪಾ ಆ್ಯಂಡ್ ಬ್ಯೂಟಿ ಮಸಾಜ್ ಪಾರ್ಲರ್ ನಡೆಸುತ್ತಿದ್ದಾರೆ. ಈ ಮಸಾಜ್ ಪಾರ್ಲರ್‌ನಲ್ಲಿ ನಾನು ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಈ ಮಸಾಜ್ ಪಾರ್ಲರ್ ನಡೆಸಲು ಸಂಬಂಧಪಟ್ಟ ಇಲಾಖೆಗಳಿಂದ ಪರವಾನಗಿ ಪಡೆಯಲಾಗಿದೆ. ಈ ಮಸಾಜ್ ಪಾರ್ಲರ್‌ನಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿಲ್ಲ. ಜೂ.21ರಂದು ಈಶಾನ್ಯ ಭಾರತದ ಕಡೆಯವಳು ಎಂದು ಹೇಳಿಕೊಂಡು ಕಿಮ್ ಕೊಂಗೈ ಹೆಸರಿನ ಯುವತಿ ಜಸ್ಟ್ ಡಯಲ್‌ನಲ್ಲಿ ಮಸಾಜ್ ಪಾರ್ಲರ್ ನಂಬರ್ ತೆಗೆದುಕೊಂಡು ಕರೆ ಮಾಡಿ ಕೆಲಸ ಕೇಳಿ ಬಂದಿದ್ದರು. ಅಂದು ನಾವು 10 ದಿನಗಳ ಮಟ್ಟಿಗೆ ಪ್ರಾಯೋಗಿಕ ಕೆಲಸಕ್ಕೆ ಸೇರಿಕೊಂಡಿದ್ದೆವು. ಜೂ.26ರಂದು ಸಂದೇಶ್ ಹೆಸರಿನ ವ್ಯಕ್ತಿ ಮಸಾಜ್ ಪಾರ್ಲರ್‌ಗೆ ಬಂದು ಜಕೂಸಿ ಮಸಾಜ್ ಮಾಡಿಸಬೇಕು. ಈಶಾನ್ಯ ಭಾರತ ಯುವತಿ ಇದ್ದರೆ ಕಳುಹಿಸಿ ಎಂದು ಕೇಳಿದರು. ಅದರಂತೆ ನಾವು ಕಿಮ್ ಕೊಂಗೈನನ್ನು ಮಸಾಜ್ ಸೇವೆಗೆ ನಿಯೋಜಿಸಿದ್ದೆವು. 90 ನಿಮಿಷ ಮಸಾಜ್ ಬಳಿಕ ಸಂದೇಶ್ ಎಂಬಾತ 7500 ರು. ಪಾವತಿಸಿ ಹೊರಟ್ಟಿದ್ದರು. ಬಳಿಕ ಕೊಂಗೈ ಕೆಲಸಕ್ಕೆ ಬಾರದ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತೆರಳಿದ್ದಳು ಎಂದು ತಿಳಿಸಲಾಗಿದೆ.
ಸುದ್ದಿವಾಹಿನಿ ಹೆಸರಿನಲ್ಲಿ ಸ್ಪಾಗೆ ಭೇಟಿ: ಜೂ.27ರಂದು ಮಧ್ಯಾಹ್ನ ಓರ್ವ ಮಹಿಳೆ ಮತ್ತು ಇಬ್ಬರು ಪುರುಷರು ರಾಜ್ ನ್ಯೂಸ್ ಎಂಬ ಹೆಸರಿರುವ ಮೈಕ್ ಹಿಡಿದುಕೊಂಡು ಮಸಾಜ್ ಪಾರ್ಲರ್‌ಗೆ ಬಂದಿದ್ದರು. ಈ ವೇಳೆ ರಾಜ್ ನ್ಯೂಸ್ ಸಿಇಓ ಮಾತನಾಡುತ್ತಾರೆ ಎಂದು ಓರ್ವ ವ್ಯಕ್ತಿ ಮೊಬೈಲ್‌ನಲ್ಲಿ ಕರೆ ಮಾಡಿ ನನಗೆ ಕೊಟ್ಟರು. ಈ ವೇಳೆ ಫೋನ್‌ನಲ್ಲಿ ಮಾತನಾಡಿದ ವ್ಯಕ್ತಿ, ‘ಏನಪ್ಪಾ ನೀವು ಸ್ಪಾದಲ್ಲಿ ಮಸಾಜ್ ಮಾಡುತ್ತಿರೋ ಅಥವಾ ವೇಶ್ಯಾವಾಟಿಕೆ ದಂಧೆ ಮಾಡುತ್ತೀರೋ’ ಎಂದು ಪ್ರಶ್ನಿಸಿದರು. ಈ ವೇಳೆ ನಾನು ನಾವು ಯಾವುದೇ ಕಾನೂನು ಬಾಹಿರ ಚಟುವಟಿಕೆ ಮಾಡುವುದಿಲ್ಲ ಎಂದೆ. ಬಳಿಕ ಆ ವ್ಯಕ್ತಿ ನಿಮ್ಮ ಸ್ಪಾದಲ್ಲಿ ನಡೆಸಿರುವ ವೇಶ್ಯಾವಾಟಿಕೆ ವಿಡಿಯೊ ನಮ್ಮ ಬಳಿ ಇದೆ ಎಂದರು. ಬಳಿಕ ರಾಜ್ ನ್ಯೂಸ್ ಮೈಕ್ ಹಿಡಿದು ಬಂದಿದ್ದ ಮಹಿಳೆ ಮೊಬೈಲ್‌ನಲ್ಲಿ ಆ ವಿಡಿಯೊ ತೋರಿಸಿದರು. ಆ ವಿಡಿಯೋದಲ್ಲಿ ಕಿಮ್ ಕೊಂಗೈ, ಗ್ರಾಹಕರ ಸೋಗಿನಲ್ಲಿ ಬಂದಿದ್ದ ಸಂದೇಶ್ ಇಬ್ಬರು ಬೆತ್ತಲಾಗಿರುವುದು ಕಂಡು ಬಂದಿತು ಎಂದು ಶಿವಶಂಕರ್ ದೂರಿದ್ದಾರೆ.
15 ಲಕ್ಷ ರು. ಬೇಡಿಕೆ:
ಬಳಿಕ ರಾಜ್ ನ್ಯೂಸ್‌ನವರು ಎಂದು ಬಂದಿದ್ದ ವ್ಯಕ್ತಿ ಮತ್ತೆ ರಾಜ್ ನ್ಯೂಸ್ ಸಿಇಓ ಮಾತನಾಡುತ್ತಿದ್ದಾರೆ ಎಂದು ಫೋನ್ ಮಾಡಿ ಕೊಟ್ಟರು. ಆಗ ಫೋನ್‌ನಲ್ಲಿ ಮಾತನಾಡಿದ ವ್ಯಕ್ತಿ, ವಿಡಿಯೊ ನೋಡಿದೆಯಾ? ಈಗ ಏನು ಮಾಡುತ್ತೀಯಾ? 15 ಲಕ್ಷ ರು. ಕೊಡು. ಎಲ್ಲಾ ವಿಡಿಯೊ ಡಿಲೀಟ್ ಮಾಡಿಸುತ್ತೇನೆ ಎಂದರು. ಅಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದಾಗ, ಕರೆ ಸ್ಥಗಿತಗೊಳಿಸಿದರು.
ಜೂ.28ರಂದು ಮೊಬೈಲ್‌ಗೆ ವಾಟ್ಸಾಪ್ ಕರೆ ಮಾಡಿದ್ದ ವ್ಯಕ್ತಿ ಹಣ ಹೊಂದಿಸಿದೆಯಾ ಎಂದು ಕೇಳಿದರು. ಅಷ್ಟು ಹಣ ಕೊಡಲು ಸಾಧ್ಯವಿಲ್ಲ. 50 ಸಾವಿರ ರು. ಅಥವಾ ಒಂದು ಲಕ್ಷ ರು. ಹೊಂದಿಸಬಲ್ಲೆ ಎಂದು ಹೇಳಿದೆ. ಅದಕ್ಕೆ ಆತ, ಸಣ್ಣ ಪತ್ರಿಕೆಯವರು, ಯುಟ್ಯೂಬ್ ಚಾನೆಲ್‌ನವರು ಇಷ್ಟು ಹಣ ತೆಗೆದುಕೊಳ್ಳುವುದಿಲ್ಲ. ಒಂದು ಟಿ.ವಿ.ಚಾನೆಲ್ ನಡೆಸಲು ತಿಂಗಳಿಗೆ 84 ಲಕ್ಷ ರು. ಬೇಕು. ನಾನು ಒಂದು ಮೊತ್ತ ಹೇಳುತ್ತೇನೆ. ಅಷ್ಟು ಹೊಂದಿಸುವಂತೆ ಸೂಚಿಸಿದರು ಎಂದು ತಿಳಿಸಲಾಗಿದೆ.
ಫೈನಲ್ 8 ಲಕ್ಷ ರು. ಬೇಡಿಕೆ:
ಜೂ.30ರಂದು ಮತ್ತೆ ವಾಟ್ಸಾಪ್ ಕರೆ ಮಾಡಿದ್ದ ಆ ವ್ಯಕ್ತಿ ಅಂತಿಮವಾಗಿ 8 ಲಕ್ಷ ರು. ಕೊಡು ಎಂದು ಕೇಳಿದರು. ಅಷ್ಟು ಕೊಡಲು ಸಾಧ್ಯವಿಲ್ಲ ಎಂದೆ. ನಿಮ್ಮ ಬಳಿ ಇರುವ ವಿಡಿಯೊ ಕಳುಹಿಸಿ ಎಂದು ಕೇಳಿದೆ. ಅದಕ್ಕೆ ಆ ವ್ಯಕ್ತಿ ವಿಡಿಯೋದ ಸ್ಕ್ರೀನ್ ಶಾಟ್ ಮಾತ್ರ ಕಳುಹಿಸಿದರು. ನನಗೆ ಕರೆ ಮಾಡಿದ್ದ ವ್ಯಕ್ತಿಯ ಹೆಸರು ಟ್ರೂ ಕಾಲರ್‌ನಲ್ಲಿ ವೆಂಕಟೇಶ್ ಎಂದು ಬಂದಿದೆ. ಹೀಗಾಗಿ ರಾಜ್‌ನ್ಯೂಸ್ ಸಿಇಓ ಎಂದು ಕೇಳಿಕೊಂಡು ಕರೆ ಮಾಡಿದ್ದ ವೆಂಕಟೇಶ್ ಇತರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮ್ಯಾನೇಜರ್ ಶಿವಶಂಕರ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.