ಮಡಿಕೇರಿ ಗಾಂಧಿ ಸ್ಮಾರಕ ಉದ್ಯಾನವನ ಕಾಮಗಾರಿ ಪ್ರಗತಿ: ಸಚಿನ್‌

KannadaprabhaNewsNetwork |  
Published : Aug 14, 2024, 12:51 AM IST
ಚಿತ್ರ : 13ಎಂಡಿಕೆ1 : ಗಾಂಧಿ ಸ್ಮಾರಕ ಉದ್ಯಾನವನ ಅಭಿವೃದ್ಧಿ ಸಮಿತಿ ಸಭೆ ನಡೆಯಿತು. | Kannada Prabha

ಸಾರಾಂಶ

ಗಾಂಧಿ ಸ್ಮಾರಕ ಉದ್ಯಾನವನ ಅಭಿವೃದ್ಧಿ ಸಮಿತಿ ಸಭೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಮಾಹಿತಿ ನೀಡಿ,ಗಾಂಧಿ ಸ್ಮಾರಕ ಉದ್ಯಾನವನ ಪೂರ್ಣ ಕಾಮಗಾರಿ ಗ್ರಂಥಾಲಯ, ಉದ್ಯಾನವನ, ಬೆಳಕು ವ್ಯವಸ್ಥೆ, ಮತ್ತಿತರ ಕಾಮಗಾರಿಗೆ ಸುಮಾರು 1.98 ಕೋಟಿ ರು. ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗಾಂಧಿ ಸ್ಮಾರಕ ಉದ್ಯಾನವನ ಅಭಿವೃದ್ಧಿ ಸಮಿತಿ ಸಭೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ಸದಸ್ಯರಾದ ಮುನೀರ್ ಅಹ್ಮದ್, ಕೆ.ಟಿ.ಬೇಬಿ ಮ್ಯಾಥ್ಯೂ, ಕಾನೆಹಿತ್ಲು ಮೊಣ್ಣಪ್ಪ, ರೇವತಿ ರಮೇಶ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಮತ್ತಿತರರು ಪಾಲ್ಗೊಂಡಿದ್ದರು.

ಆರಂಭದಲ್ಲಿ ಮಾಹಿತಿ ನೀಡಿದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಮಾತನಾಡಿ, ಗಾಂಧಿ ಸ್ಮಾರಕ ಉದ್ಯಾನವನ ಕಾಮಗಾರಿ ಪ್ರಗತಿಯಲ್ಲಿದ್ದು, ಸದ್ಯ 60 ಲಕ್ಷ ರು. ವೆಚ್ಚದಲ್ಲಿ ತಾತ್ಕಾಲಿಕವಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಗಾಂಧಿ ಸ್ಮಾರಕ ಉದ್ಯಾನವನ ಪೂರ್ಣ ಕಾಮಗಾರಿ ಗ್ರಂಥಾಲಯ, ಉದ್ಯಾನವನ, ಬೆಳಕು ವ್ಯವಸ್ಥೆ, ಮತ್ತಿತರ ಕಾಮಗಾರಿಗೆ ಸುಮಾರು 1.98 ಕೋಟಿ ರು. ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸರ್ವೋದಯ ಸಮಿತಿ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು, ಸರ್ಕಾರ ರಾಜ್‌ಘಾಟ್ ಮಾದರಿಯಲ್ಲಿ ಗಾಂಧಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ಈಗಾಗಲೇ 50 ಲಕ್ಷ ರು. ಬಿಡುಗಡೆ ಮಾಡಿದ್ದು, ಕಾಮಗಾರಿ ಆರಂಭವಾಗಿದೆ. ಹೆಚ್ಚಿನ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು, ಆ ನಿಟ್ಟಿನಲ್ಲಿ ಪರಿಪೂರ್ಣವಾಗಿ ಕಾಮಗಾರಿ ನಡೆಯಬೇಕು ಎಂದು ಸಲಹೆ ಮಾಡಿದರು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು 5 ಲಕ್ಷ ರು. ಸ್ಥಳೀಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ತಲಾ 5 ಲಕ್ಷ ರು. ನೀಡಲು ಒಪ್ಪಿಗೆ ನೀಡಿದ್ದಾರೆ. ಆದ್ದರಿಂದ ಇನ್ನೊಂದು ಕೋಟಿ ರು. ಬಿಡುಗಡೆಗೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಕೇವಲ 60 ಲಕ್ಷ ರು. ವೆಚ್ಚದಲ್ಲಿ ಕಾಮಗಾರಿ ಅರ್ಧ ಮಾಡಿದರೆ ಅರ್ಥಪೂರ್ಣವಾಗುವುದಿಲ್ಲ. ಆದ್ದರಿಂದ ಪರಿಪೂರ್ಣ ಕಾಮಗಾರಿ ಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಸಹಕಾರಕ್ಕೆ ಜಿಲ್ಲಾಧಿಕಾರಿ ಅವರಲ್ಲಿ ಟಿ.ಪಿ.ರಮೇಶ್ ಮನವಿ ಮಾಡಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸ್ಮಾರಕ ಉದ್ಯಾನವನ್ನು ಆಕರ್ಷಣೀಯವಾಗಿ ನಿರ್ಮಾಣ ಮಾಡಬೇಕಿದೆ. ಈಗಾಗಲೇ ಸರ್ಕಾರ ಬಿಡುಗಡೆ ಮಾಡಿರುವ ಅನುದಾನದ ಜೊತೆಗೆ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರಲ್ಲಿಯೂ ಸಹ ಅನುದಾನ ಬಿಡುಗಡೆಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ಸರ್ಕಾರ ಬಿಡುಗಡೆ ಮಾಡಿರುವ 50 ಲಕ್ಷ ರು. ಜೊತೆಗೆ ಎರಡನೇ ಹಂತದಲ್ಲಿ ಹೆಚ್ಚುವರಿಯಾಗಿ 1 ಕೋಟಿ ರು. ಬಿಡುಗಡೆಗೆ ಪ್ರಯತ್ನಿಸಬೇಕು. ಸರ್ಕಾರದ ಹಂತದಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆಯಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು ಗುರುವಾರ ಮಡಿಕೇರಿಗೆ ಆಗಮಿಸುತ್ತಿರುವ ಹಿನ್ನೆಲೆ ಗಾಂಧಿ ಸ್ಮಾರಕ ಉದ್ಯಾನವನ ಕಾಮಗಾರಿ ವೀಕ್ಷಣೆ ಮಾಡಿ, ಹೆಚ್ಚಿನ ಅನುದಾನ ಬಿಡುಗಡೆ ಸಂಬಂಧ ಮನವಿ ಮಾಡಲು ತೀರ್ಮಾನಿಸಲಾಯಿತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ