ಕನ್ನಡಪ್ರಭ ವಾರ್ತೆ ಮಡಿಕೇರಿ
ಇವತ್ತು ಬರೆದು ನಾಳೆ ಅಳಿದು ಹೋಗುವ ಕೃತಿಗಳನ್ನು ಬರೆಯದಿರಿ. ಅಧ್ಯಯನ ಉಸಿರಾಗಿ ಆಳವಾದ ಮತ್ತು ವಿಸ್ತೃತ ಓದನ್ನು ಮೈಗೂಡಿಸಿಕೊಂಡು ಹೆಚ್ಚಿನ ಕಾಲ ಮನದಲ್ಲಿ ಉಳಿಯುವ ಕೃತಿ ರಚನೆಯತ್ತ ಲೇಖಕರು ಗಮನ ಹರಿಸಿಬೇಕೆಂದು ಮಡಿಕೇರಿ ಆಕಾಶವಾಣಿ ಕೇಂದ್ರದ ಹಿರಿಯ ಉದ್ಘೋಷಕ, ಸಾಹಿತಿ ಸುಬ್ರಾಯ ಸಂಪಾಜೆ ಕಿವಿಮಾತು ಹೇಳಿದ್ದಾರೆ.ಮಡಿಕೇರಿ ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಕೆ. ಜಯಲಕ್ಷ್ಮಿ ಅವರ ‘ಮತ್ತೆ ವಸಂತ’ ಕಥಾ ಸಂಕಲನವನ್ನು ನಗರದ ರೆಡ್ ಬ್ರಿಕ್ಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಂಪರೆಯ ವಿಶೇಷತೆಗಳನ್ನು ವಿವರಿಸಿದ ಸುಬ್ರಾಯ ಸಂಪಾಜೆ, ಕನ್ನಡವನ್ನು ಕೊಡಗಿನ ನೆಲದಲ್ಲಿ ಈ ಹಿಂದೆ ಶ್ರೀಮಂತಗೊಳಿಸಿದ ಹಿರಿಯರನ್ನು ನೆನಪಿಸಿಕೊಂಡರು.
ಸದ್ಯದ ಪರಿಸ್ಥಿತಿಯಲ್ಲಿ ಕನ್ನಡದಲ್ಲಿ , ಕೃತಿರಚನೆಯ ಕೆಲಸ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿದರೂ ಅವರಲ್ಲಿ ಕೊಡಗಿನವರು ಯಾರೂ ಇಲ್ಲಎಂದು ವಿಷಾದಿಸಿದರು.ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಲವು ಬರಹಗಾರರು ಕೊಡಗಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಹೊಸಹೊಸ ಯೋಜನೆಗಳೊಂದಿಗೆ ಕೃತಿಕಾರರಿಗೆ ಒತ್ತಾಸೆಯಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಪರಿಣತರಾದ ಸಂಪನ್ಮೂಲ ವ್ಯಕ್ತಿಗಳಿಂದ ಉದಯೋನ್ಮುಖ ಬರಹಗಾರರಿಗೆ ಪರಿಷತ್ತು ತರಬೇತಿ ನೀಡಲಿದೆ ಎಂದರು.
‘ಶಕ್ತಿ’ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ಕೃತಿಕಾರರು ತಮ್ಮ ಕೃತಿಗಳ ಮೌಲ್ಯದ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದರು.ಕೃತಿ ಪರಿಚಯಿಸಿದ ಪತ್ರಕರ್ತ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. 164 ಪುಟಗಳ ಮತ್ತೆ ವಸಂತ 31 ವಿಭಿನ್ನ ಕಥೆಗಳ ಗುಚ್ಚವಾಗಿ ಓದುಗರ ಮನಸ್ಸನ್ನು ಹಿಡಿದಿಡುತ್ತದೆ ಎಂದರು.
ಬೆಳ್ತಂಗಡಿಯ ಜಯಶಂಕರ ಶರ್ಮ ಅವರು ಕೊಡಗು, ಇಲ್ಲಿಯ ಪರಿಸರ ಪರಂಪರೆಯ ಬಗ್ಗೆ ಅಭಿಮಾನದ ನುಡಿಗಳನ್ನಾಡಿ ಈ ಪರಿಸರ ಇಲ್ಲಿಯ ಸಮೃದ್ಧ ಅನುಭವ ಸಾಹಿತ್ಯ ಕೃತಿಗಳಲ್ಲಿ ಅಭಿವ್ಯಕ್ತಿ ಪಡೆಯಬೇಕು ಎಂದರು.ಲೇಖಕಿ ಕೆ. ಜಯಲಕ್ಷ್ಮಿ ಸ್ವಾಗತಿಸಿದರು. ಬರಹಗಾರ್ತಿ ಪ್ರತಿಮಾ ಹರೀಶ್ ಹಾಗೂ ಗಾಯತ್ರಿ ನಿರೂಪಿಸಿದರು. ಚಿತ್ರ ಆರ್ಯನ್ ವಂದಿಸಿದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಇದ್ದರು. ಮಕ್ಕಳಿಂದ ನೃತ್ಯ, ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಾಳಲೆಯ ಯುವ ಗಾಯಕ ಅನ್ವಿತ್ ಕುಮಾರ್ ಸುಗಮ ಸಂಗೀತ ಪ್ರಸ್ತುತಪಡಿಸಿದರು.