ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಮಹಾಪಂಚಾಯತ್ ಅಧಿವೇಶನ

KannadaprabhaNewsNetwork | Published : Nov 27, 2023 1:15 AM

ಸಾರಾಂಶ

ಬರಗಾಲದಿಂದ ಸಂಕಷ್ಟದಲ್ಲಿರುವ ರಾಜ್ಯದ ರೈತರ ಸಾಲಮನ್ನಾ ಮಾಡಲು ಒತ್ತಾಯಿಸಲು ಬೆಂಗಳೂರಿನಲ್ಲಿ ಡಿ.೨೩ರಂದು ರಾಷ್ಟ್ರೀಯ ಕಿಸಾನ್ ಮಹಾಪಂಚಾಯತ್ ಅಧಿವೇಶನ ಹಮ್ಮಿಕೊಳ್ಳಲಾಗಿದೆ.ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ ಶಾಂತಕುಮಾರ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ರಾಜಕೀಯ ಚೆಲ್ಲಾಟವಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಬರಗಾಲದಿಂದ ಸಂಕಷ್ಟದಲ್ಲಿರುವ ರಾಜ್ಯದ ರೈತರ ಸಾಲಮನ್ನಾ ಮಾಡಲು ಒತ್ತಾಯಿಸಲು ಬೆಂಗಳೂರಿನಲ್ಲಿ ಡಿ.೨೩ರಂದು ರಾಷ್ಟ್ರೀಯ ಕಿಸಾನ್ ಮಹಾಪಂಚಾಯತ್ ಅಧಿವೇಶನ ಹಮ್ಮಿಕೊಳ್ಳಲಾಗಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ ಶಾಂತಕುಮಾರ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ರಾಜಕೀಯ ಚೆಲ್ಲಾಟವಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ೨೨೩ ತಾಲೂಕುಗಳು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿವೆ. ಕಳೆದ 3 ವರ್ಷಗಳಿಂದ ಅತಿವೃಷ್ಟಿ ಬೆಳೆ ಹಾನಿ, ಮಳೆಹಾನಿ, ರೈತರು ತತ್ತರಿಸಿದ್ದಾರೆ. ಹಾಕಿದ ಹಣ ವಾಪಸ್ ಬಂದಿಲ್ಲ, ಆದ್ದರಿಂದ ರೈತನ ಸಂಪೂರ್ಣ ಸಾಲ ಮನ್ನಾವಾಗಬೇಕು ಎಂದು ಒತ್ತಾಯಿಸಿದರು.

ಕೈಗಾರಿಕೆ, ಉದ್ಯಮಿಗಳಿಗೆ, ಸಾಲ ಮನ್ನಾ, ತೆರಿಗೆ ಮನ್ನಾ ಮಾಡಿರುವ ರೀತಿ, ರೈತರ ಎಲ್ಲಾ ಬ್ಯಾಂಕು ಹಾಗೂ ಸಹಕಾರ ಸಂಘಗಳ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಲೇಬೇಕು ಎಂದು ಒತ್ತಾಯಿಸಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ) ವತಿಯಿಂದ ರೈತ ಅಧಿವೇಶನ ನಡೆಸಲಾಗುತ್ತಿದೆ. ದೆಹಲಿಯಲ್ಲಿ ಒಂದು ವರ್ಷ ಹೋರಾಟ ಮಾಡಿದ ರಾಷ್ಟ್ರೀಯ ರೈತ ಮುಖಂಡರು ಈ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದು, ಬೆಂಗಳೂರಿನ ಸಮಾವೇಶಕ್ಕೆ ರಾಜ್ಯದ ರೈತರು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ, ಕಾನೂನು ಜಾರಿ ಮಾಡಬೇಕು ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವಂತಾಗಬೇಕು. ದೇಶದ ೧೪೦ ಕೋಟಿ ಜನರ ಆಹಾರ ಉತ್ಪಾದಿಸಲು ತಮ್ಮ ಜೀವಮಾನವನ್ನೇ ತ್ಯಾಗ ಮಾಡುತ್ತಿರುವ ೬೦ ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ ೫೦೦೦ ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು. ರೈತರ ಗಂಡು ಮಕ್ಕಳ ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇ. ೧೦ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೊಳಿಸಬೇಕು. ಈ ಬಗ್ಗೆ ಬೆಳಗಾವಿ ವಿಶೇಷ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನಿಸಲಿ ಎಂದು ಒತ್ತಾಯಿಸಿದರು.

ಬರಗಾಲದಿಂದ ಕಬ್ಬು ಇಳುವರಿ ಶೇ. ೫೦ರಷ್ಟು ಕಡಿಮೆಯಾಗಿದೆ. ಸಕ್ಕರೆ ಹಾಗೂ ಇಥೆನಾಲ್ ಬೇಡಿಕೆ ಹೆಚ್ಚು ಇರುವ ಕಾರಣ ಸಕ್ಕರೆ ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬು ಖರೀದಿಸುತ್ತಿದ್ದಾರೆ. ರೈತರು ಜಾಗೃತರಾಗಿ ಹೆಚ್ಚು ದರ, ಮುಂಗಡ ಹಣ ಪಾವತಿಸುವ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಬೇಕು. ಬರ ಪರಿಹಾರ ನಷ್ಟ ಸಮಿಕ್ಷೆಯಲ್ಲಿ ಕಬ್ಬಿನ ಬೆಳೆ ನಷ್ಟ ಅಂದಾಜು ಮಾಡುತ್ತಿಲ್ಲ, ಎನ್‌ಡಿಆರ್‌ಎಫ್ ಮಾನ ದಂಡದಲ್ಲಿ ಕಬ್ಬಿನ ಬೆಳೆಯನ್ನು ಸೇರಿಸಿ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸಿ ತೂಕದಲ್ಲಿ ಮೋಸ, ಕಬ್ಬಿನ ದರದಲ್ಲಿಯೂ ವಂಚನೆ ಮಾಡುತ್ತಿದ್ದಾರೆ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಬೇಕು. ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳು ಕಬ್ಬಿನ ದರ ಎಫ್‌ಆರ್‌ಪಿ ಮೇಲೆ ಹೆಚ್ಚುವರಿಯಾಗಿ ₹೩೦೦ ರಿಂದ ೪೦೦ ನೀಡುತ್ತಿದ್ದಾರೆ. ಆದರೆ ಇಲ್ಲಿನ ಸಂಗೂರ್ ಸಕ್ಕರೆ ಕಾರ್ಖಾನೆ ಎಫ್‌ಆರ್‌ಪಿ ದರದಲ್ಲಿಯೇ ಕಡಿತ ಮಾಡಿ ರೈತರನ್ನು ವಂಚಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ನ್ಯಾಯಯುತ ಕ್ರಮ ಕೈಗೊಳ್ಳಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದನ್ನ ತಪ್ಪಿಸಲು ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿರುವ ಹುನ್ನಾರ ಕೈಬಿಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ ನಿರಂತರ ೧೦ಗಂಟೆ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಪ್ರಮುಖರಾದ ಮಹೇಶ ಪಯಡಿಯಾಲ, ಹತ್ತಳ್ಳಿ ದೇವರಾಜ್,

ರಾಜಶೇಖರ ಬೆಟಿಗೇರಿ, ಬಸವಣ್ಣಪ್ಪ ಬೆಂಚಳ್ಳಿ, ಮುತ್ತು ಗುಡಿಗೇರಿ, ಚೆನ್ನಪ್ಪ ಮುರಡೂರ, ರಾಜುತರಲ್ ಘಟ್ಟ, ಈರಣ್ಣ ಸಮಗೊಂಡರ, ಆನಂದ ಕೆಳಗಲಮನಿ, ಪಂಚಯ್ಯ ಹಿರೇಮಠ, ಪ್ರಕಾಶ್ ಇತರರು ಇದ್ದರು.

Share this article